ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ 50–ಕೆ ಟೆನಿಸ್‌ ಟೂರ್ನಿ: ಸೆಮಿಗೆ ನಿಕ್ಷೇಪ್‌, ಆರ್ಯನ್‌

ನೇಸರಗೆ ನಿರಾಸೆ
Last Updated 27 ಫೆಬ್ರುವರಿ 2019, 17:00 IST
ಅಕ್ಷರ ಗಾತ್ರ

ದಾವಣಗೆರೆ: ಮೂರನೇ ಶ್ರೇಯಾಂಕಿತ ಆಟಗಾರ ಬೆಂಗಳೂರಿನ ಬಿ.ಆರ್‌. ನಿಕ್ಷೇಪ್‌ ಹಾಗೂ ಶ್ರೇಯಾಂಕರಹಿತ ಆಟ ಗಾರ ಮೈಸೂರಿನ ಆರ್ಯನ್‌ ಪತಂಗೆ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ 50–ಕೆ ಪುರುಷರ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

ಎಂ.ಪಿ. ಪ್ರಕಾಶ್‌ ಸಮಾಜಮುಖಿ ಟ್ರಸ್ಟ್‌, ಹೂವಿನಹಡಗಲಿಯ ರಂಗಭಾರತಿ ಮತ್ತು ಕರ್ನಾಟಕ ಟೆನಿಸ್‌ ಪ್ಲೇಯರ್ಸ್‌ ಪೇರೆಂಟ್ಸ್‌ ಅಸೋಸಿಯೇಷನ್‌ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಪ್ರತಿಸ್ಪರ್ಧಿಯನ್ನು ಸಮರ್ಥವಾಗಿ ಎದುರಿಸದ ಬೆಂಗಳೂರಿನ ಶಾಹುಲ್‌ ಅನ್ವರ್‌ ಹಾಗೂ ನೇಸರ ಜೇವೂರ ಅವರಿಗೆ ನಿರಾಸೆ ಉಂಟಾಯಿತು.

ಕ್ವಾರ್ಟರ್‌ಫೈನಲ್‌ನಲ್ಲಿ ನಿಕ್ಷೇಪ್‌ 6–4, 7–5ರಲ್ಲಿ ಶ್ರೇಯಾಂಕರಹಿತ ಎಡಗೈ ಆಟಗಾರ ಬೆಂಗಳೂರಿನ ಅರ್ಜುನ್‌ ಶ್ರೀರಾಮ್‌ ಎದುರು ಪ್ರಯಾಸದ ಗೆಲುವು ಕಂಡರು. 16 ವರ್ಷದೊಳಗಿನ ವಿಭಾಗದಲ್ಲಿ ಆಡುವ ಅರ್ಜುನ್‌ ಮೊದಲ ಸೆಟ್‌ನ ಆರಂಭದಿಂದಲೇ ತೀವ್ರ ಸ್ಪರ್ಧೆ ಒಡ್ಡಿದರು. ಇಬ್ಬರೂ ಮೊದಲ ಎರಡು ಗೇಮ್‌ಗಳನ್ನು ಗೆದ್ದುಕೊಂಡು ಸಮಬಲ ಪ್ರದರ್ಶಿಸಿದರು. ಒಂದು ಹಂತದಲ್ಲಿ ಅರ್ಜುನ್‌ 4–3ರಲ್ಲಿ ಮುನ್ನಡೆ ಸಾಧಿಸಿದ್ದರು. ಬಳಿಕ ಚೇತರಿಸಿಕೊಂಡ ನಿಕ್ಷೇಪ್‌, ಸತತ ಮೂರು ಗೇಮ್‌ ಗೆದ್ದು ಮೊದಲ ಸೆಟ್‌ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನ ಆರಂಭದಲ್ಲಿ ಅರ್ಜುನ್‌ 2–0 ಹಾಗೂ 5–4ರ ಮುನ್ನಡೆ ಸಾಧಿಸಿದ್ದರು. ಆದರೆ ವಿಚಲಿತಗೊಳ್ಳದ ನಿಕ್ಷೇಪ್‌ ಉತ್ತಮ ಸಾಮರ್ಥ್ಯ ತೋರಿ ಮೂರು ಗೇಮ್‌ಗಳನ್ನು ತಮ್ಮದಾಗಿಸಿಕೊಂಡು ಗೆಲುವು ಕಂಡರು. ಇನ್ನೊಂದು ಪಂದ್ಯದಲ್ಲಿ ಆರ್ಯನ್‌ ಪತಂಗೆ 6–2, 6–2ರಲ್ಲಿ ನೇಸರ ಜೇವೂರ ವಿರುದ್ಧ ಗೆದ್ದರು.

ರೋಚಕ ಪಂದ್ಯ: ತೀವ್ರ ಸ್ಪರ್ಧೆ ಒಡ್ಡಿದ ಶಾಹುಲ್‌ ಅನ್ವರ್‌ 7–5, 2–6, 4–6ರಲ್ಲಿ ಆಂಧ್ರಪ್ರದೇಶದ ಸಾಜಿದ್‌ ರೆಹಮಾನ್‌ ಎದುರು ವೀರೋಚಿತ ಸೋಲು ಕಂಡರು. ಶಾಹುಲ್‌ ಎರಡು ಗೇಮ್‌ ಬ್ರೇಕ್‌ ಮಾಡಿ ಮೊದಲ ಸೆಟ್‌ ಗೆದ್ದು ಮುನ್ನಡೆ ಸಾಧಿಸಿದ್ದರು. ಆದರೆ, ಎರಡನೇ ಸೆಟ್‌ನಲ್ಲಿ ಲಯ ಕಳೆದುಕೊಂಡರು. ಮೂರನೇ ಸೆಟ್‌ನಲ್ಲಿ 4–4ರ ಸಮಬಲ ಸಾಧಿಸಿದರೂ ಗೆಲುವಿನ ಸನಿಹದಲ್ಲಿ ಎಡವಿದ ಶಾಹುಲ್‌ ಸತತ ಎರಡು ಗೇಮ್‌ಗಳನ್ನು ಎದುರಾಳಿಗೆ ಬಿಟ್ಟುಕೊಟ್ಟು ಸೋಲೊಪ್ಪಿಕೊಂಡರು. ತೆಲಂಗಾಣದ ತಹಾ ಕಪಾಡಿಯಾ 5–7, 6–2, 6–2ರಲ್ಲಿ ಅಸ್ಸಾಂ ಶೇಖ್‌ ಇಫ್ತಿಯಾರ್‌ ಮಹಮ್ಮದ್‌ ಅವರನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದರು.

ಡಬಲ್ಸ್‌ ಫಲಿತಾಂಶ:  ಪುರುಷರ ಡಬಲ್ಸ್ ಕ್ವಾರ್ಟರ್‌ ಫೈನಲ್‌ನಲ್ಲಿ ಬಿ.ಆರ್‌. ನಿಕ್ಷೇಪ್‌, ನೇಸರ ಜೇವೂರ ವಿರುದ್ಧ 6–3, 6–1ರಲ್ಲಿ ಆರ್ಯನ್‌ ಪತಂಗೆ, ಅರ್ಜುನ್‌ ಶ್ರೀರಾಮ್‌ ಎದುರು; ತಹಾ ಕಪಾಡಿಯಾ, ಫಯಾಜ್‌ ಹುಸೇನ್‌ ಎದುರು 6–3, 6–1ರಲ್ಲಿ, ತಥಾಗತ್‌ ಚರಂತಿಮಠ, ವಿ.ರೋಹಿತ್‌ ವಿರುದ್ಧ; ಅಲೋಕ್‌ ಆರಾಧ್ಯ, ರಿಭವ್‌ ರವಿಕಿರಣ್‌ ವಿರುದ್ಧ 6–1, 6–1ರಲ್ಲಿ, ಎ.ಕೆ. ರೋಹಿತ್‌, ವಿನಯ್‌ ಕುಮಾರ್‌ ಎದುರು; ಶೇಖ್‌ ಉಮೇರ್‌–ಇಫ್ತಿಯಾರ್‌, ಶೇಖ್‌ ಮಹಮ್ಮದ್‌ ವಿರುದ್ಧ 6–3, 3–6ರಲ್ಲಿ, ಬಾಬಜಿ ಶಿವ ಅತ್ತೂರ, ಸಾಜಿದ್‌ ರೆಹಮಾನ್‌ ವಿರುದ್ಧ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT