ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಓಪನ್ ಟೆನಿಸ್: ಕ್ವಾರ್ಟರ್‌ ಫೈನಲ್‌ಗೆ ಜೊಕೊವಿಚ್

ಲೈಲಾ ಫರ್ನಾಂಡಸ್, ಮಾರ್ಟಿನಾ ಟ್ರೆವಿಸನ್ ಜಯಭೇರಿ
Last Updated 29 ಮೇ 2022, 14:25 IST
ಅಕ್ಷರ ಗಾತ್ರ

ಪ್ಯಾರಿಸ್‌: ಅರ್ಜೆಂಟೀನಾದ ಡಿಯೆಗೊ ಸ್ಟಾರ್ಟ್ಸ್‌ಮನ್‌ ವಿರುದ್ಧ ಸುಲಭ ಜಯ ಗಳಿಸಿದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಭಾನುವಾರ ನಡೆದ ಪಂದ್ಯದಲ್ಲಿ 15ನೇ ಶ್ರೇಯಾಂಕದ ಸ್ವಾರ್ಟ್ಸ್‌ಮನ್‌ ವಿರುದ್ಧ 6-1, 6-3, 6-3ರಲ್ಲಿ ಜೊಕೊವಿಚ್ ಗೆದ್ದರು. ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ನಿಷೇಧಕ್ಕೆ ಒಳಗಾದ ಕಾರಣ ವರ್ಷದ ಆರಂಭದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಜೊಕೊವಿಚ್‌ ಆಡಿರಲಿಲ್ಲ. ಆದ್ದರಿಂದ ಫ್ರೆಂಚ್ ಓಪನ್ ಈ ವರ್ಷದ ಅವರ ಮೊದಲ ‘ಮೇಜರ್’ ಟೂರ್ನಿಯಾಗಿದೆ. ಟೂರ್ನಿಯಲ್ಲಿ ಮೂರನೇ ಪ್ರಶಸ್ತಿ ಮೇಲೆ ಅವರು ಕಣ್ಣಿಟ್ಟಿದ್ದಾರೆ.

ಸ್ವಾರ್ಟ್ಸ್‌ಮನ್‌ ವಿರುದ್ಧ ಈ ಹಿಂದೆ ಆಡಿದ್ದ ಆರು ಪಂದ್ಯಗಳನ್ನು ಕೂಡ ಗೆದ್ದಿರುವ ಜೊಕವಿಚ್‌ ಭಾನುವಾರ ಮೊದಲ ಸೆಟ್‌ನಿಂದಲೇ ಅಮೋಘ ಆಟವಾಡಿದರು. ಹೀಗಾಗಿ ಯಾವ ಹಂತದಲ್ಲೂ ಹಿನ್ನಡೆ ಕಾಣಲಿಲ್ಲ. ಕೆನಡಾದ ಯುವ ಆಟಗಾರ್ತಿ ಲೈಲಾ ಫರ್ನಾಂಡಸ್ ಮತ್ತುವಿಶ್ರ ಕ್ರಮಾಂಕದಲ್ಲಿ 59ನೇ ಸ್ಥಾನದಲ್ಲಿರುವ ಇಟಲಿಯ ಮಾರ್ಟಿನಾ ಟ್ರೆವಿಸನ್ ಅವರು ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

2019ರ ಆವೃತ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಅಮೆರಿಕದ ಅಮಾಂಡ ಅನಿಸಿಮೊವ ವಿರುದ್ಧದ ಹಣಾಹಣಿಯಲ್ಲಿ ಲೈಲಾ ಫರ್ನಾಂಡಸ್ 6-3, 4-6, 6-3ರಲ್ಲಿ ಗೆಲುವು ಸಾಧಿಸಿದರು. ಶ್ರೇಯಾಂಕರಹಿತ ಮಾರ್ಟಿನಾ 7-6(10) 7-5ರಲ್ಲಿ ಬೆಲಾರಸ್‌ನ ಅಲೆಕ್ಸಾಂಡ್ರ ಸಾಸ್ನೊವಿಚ್ ಎದುರು ಗೆದ್ದರು.

17ನೇ ಶ್ರೇಯಾಂಕದ ಲೈಲಾ ಕಳೆದ ಬಾರಿ ಅಮೆರಿಕ ಓಪನ್ ಟೂರ್ನಿಯ ರನ್ನರ್ ಅಪ್‌ ಆಗಿ ಗಮನ ಸೆಳೆದಿದ್ದರು. 19 ವರ್ಷ ವಯಸ್ಸಿನ ಲೈಲಾ ಪ್ರೀ ಕ್ವಾರ್ಟರ್ ಫೈನಲ್‌ನ ಎರಡನೇ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರೂ ನಿರ್ಣಾಯಕ ಸೆಟ್‌ನಲ್ಲಿ ಚೇತರಿಸಿಕೊಂಡು ಗೆಲುವಿನತ್ತ ಹೆಜ್ಜೆ ಹಾಕಿದರು.

ಅಮೆರಿಕದ ಯುವ ಆಟಗಾರ್ತಿ ಕೊಕೊ ಗಫ್‌ ಕೂಡ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಜಯ ಗಳಿಸಿದರು. ಈ ಮೂಲಕ ಸತತ ಎರಡನೇ ಬಾರಿ ಎಂಟರ ಘಟ್ಟ ಪ್ರವೇಶಿಸಿದರು. ಬೆಲ್ಜಿಯಂನ ಎಲಿಸ್ ಮರ್ಟೆನ್ಸ್‌ ಎದುರಿನ ಪಂದ್ಯದಲ್ಲಿ 18 ವರ್ಷದ ಕೊಕೊ ಗಫ್ 6-4, 6-0ರಲ್ಲಿ ಜಯ ಗಳಿಸಿದರು.

ಪ್ರೀ ಕ್ವಾರ್ಟರ್ ಫೈನಲ್‌ ಫಲಿತಾಂಶಗಳು: ಸರ್ಬಿಯಾದ ನೊವಾಕ್ ಜೊಕೊವಿಚ್‌ಗೆ ಅರ್ಜೆಂಟೀನಾದ ಡಿಯೆಗೊ ಸ್ಟಾರ್ಟ್ಸ್‌ಮನ್‌ ವಿರುದ್ಧ 6-1, 6-3, 6-3ರಲ್ಲಿ ಜಯ. ಡೆನ್ಮಾರ್ಕ್‌ನ ಹಾಲ್ಗರ್ ರೂನ್‌ಗೆ ಫ್ರಾನ್ಸ್‌ನ ಹ್ಯೂಗೊ ಗಸ್ಟನ್‌ ವಿರುದ್ಧ 6–3, 6–3, 6–3ರಲ್ಲಿ ಜಯ.

ಮಹಿಳಾ ವಿಭಾಗ: ಇಟಲಿಯ ಮಾರ್ಟಿನಾ ಟ್ರೆವಿಸನ್‌ಗೆ ಬೆಲಾರಸ್‌ನ ಅಲೆಕ್ಸಾಂಡ್ರ ಸಾಸ್ನೊವಿಚ್ ವಿರುದ್ಧ 7-6 (12/10), 7-5ರಲ್ಲಿ ಜಯ; ಕೆನಡಾದ ಲೈಲಾ ಫರ್ನಾಂಡಸ್‌ಗೆ ಅಮೆರಿಕದ ಅಮಾಂಡ ಅನಿಸಿಮೊವ ಎದುರು 6-3, 4-6, 6-3ರಲ್ಲಿ ಗೆಲುವು. ಅಮೆರಿಕದ ಕೊಕೊ ಗಫ್‌ಗೆ ಬೆಲ್ಜಿಯಂನ ಎಲಿಸ್ ಮರ್ಟೆನ್ಸ್‌ ಎದುರು 6-4, 6-0ರಲ್ಲಿ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT