ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಯ ಆರನೇ ಪ್ರಶಸ್ತಿ ಮೇಲೆ ಜೋಕೊವಿಚ್‌ ಕಣ್ಣು

ಎಟಿಪಿ ಫೈನಲ್ಸ್ ಟೂರ್ನಿ; ನಡಾಲ್‌ಗೆ ಮೊದಲ ಟ್ರೋಫಿ ಗೆಲ್ಲುವ ತವಕ
Last Updated 14 ನವೆಂಬರ್ 2020, 6:43 IST
ಅಕ್ಷರ ಗಾತ್ರ

ಲಂಡನ್‌: ದಾಖಲೆಯ ಆರನೇ ಬಾರಿ ಟ್ರೋಫಿ ತಮ್ಮದಾಗಿಸಿಕೊಳ್ಳುವ ಹಂಬದಲ್ಲಿರುವ ನೊವಾಕ್‌ ಜೊಕೊವಿಚ್‌ ಹಾಗೂ ಮೊದಲ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಫೆಲ್‌ ನಡಾಲ್‌ ಅವರು ಎಟಿಪಿ ಫೈನಲ್ಸ್ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಭಾನುವಾರದಿಂದ ನಡೆಯಲಿರುವ ಟೂರ್ನಿಗೆ ಇಲ್ಲಿಯ ಓ2 ಅರೆನಾ ಸಜ್ಜುಗೊಂಡಿದೆ.

ವಿಶ್ವ ಪುರುಷರ ರ‍್ಯಾಂಕಿಂಗ್‌ನಲ್ಲಿ ಅಗ್ರ 8 ಸ್ಥಾನಗಳಲ್ಲಿರುವ (ರೋಜರ್ ಫೆಡರರ್ ಅವರನ್ನು ಹೊರತುಪಡಿಸಿ) ಆಟಗಾರರು ಈ ವರ್ಷಾಂತ್ಯದ ಟೂರ್ನಿಯಲ್ಲಿ ಸೆಣಸಲಿದ್ದಾರೆ. ಕೊರೊನಾ ವೈರಾಣು ಹಾವಳಿಯ ಹಿನ್ನೆಲೆಯಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ.

ಟೂರ್ನಿಯ 50ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಎರಡು ರೌಂಡ್‌ ರಾಬಿನ್‌ ಗುಂಪುಗಳಿಗೆ ಟೋಕಿಯೊ 1970 ಹಾಗೂ ಲಂಡನ್‌ 2020 ಎಂದು ಹೆಸರಿಡಲಾಗಿದೆ. ಮೊದಲ ಬಾರಿ ಟೂರ್ನಿಯು 1970ರಲ್ಲಿ ಟೋಕಿಯೊದಲ್ಲಿ ನಡೆದಿತ್ತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಜೊಕೊವಿಚ್‌, ಡೇನಿಯಲ್‌ ಮೆಡ್ವಡೆವ್‌, 2018ರ ಚಾಂಪಿಯನ್‌ ಅಲೆಕ್ಸಾಂಡರ್‌ ಜ್ವೆರೆವ್‌ ಹಾಗೂ ಮೊದಲ ಬಾರಿ ಇಲ್ಲಿ ಕಣಕ್ಕಿಳಿಯುತ್ತಿರುವ ಅರ್ಜೆಂಟೀನಾದ ಡಿಗೊ ಸ್ವಾರ್ಟ್ಜ್‌ಮನ್‌ ಅವರು ‘ಟೋಕಿಯೊ‘ ಗುಂಪಿನಲ್ಲಿದ್ದಾರೆ.

’ಲಂಡನ್‌ 2020‘ ಗುಂಪಿನಲ್ಲಿ ಎರಡನೇ ಶ್ರೇಯಾಂಕದ ಸ್ಪೇನ್‌ನ ನಡಾಲ್‌, ಹಾಲಿ ಚಾಂಪಿಯನ್‌ ಸ್ಟೆಫನೊಸ್‌ ಸಿಸಿಪಸ್‌, ಡಾಮಿನಿಕ್‌ ಥೀಮ್‌ ಹಾಗೂ ಆ್ಯಂಡ್ರೆ ರುಬ್ಲೆವ್‌ ಸೆಣಸಲಿದ್ದಾರೆ. ರುಬ್ಲೆವ್‌ ಕೂಡ ಇಲ್ಲಿ ಮೊದಲ ಬಾರಿ ಆಡಲಿದ್ದಾರೆ.

ಆರು ಬಾರಿಯ ಚಾಂಪಿಯನ್ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಅವರು ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಕಣಕ್ಕಿಳಿಯುತ್ತಿಲ್ಲ.

ಜೊಕೊವಿಚ್ ಅವರು ಈ ಋತುವಿನಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಸೋತಿದ್ದಾರೆ. 2015ರಿಂದ ಅವರಿಗೆ ಎಟಿಪಿ ಫೈನಲ್ಸ್ ಟ್ರೋಫಿ ಒಲಿದಿಲ್ಲ.

‘ಈ ವರ್ಷವನ್ನು ಅಗ್ರ ಕ್ರಮಾಂಕದೊಂದಿಗೆ ಕೊನೆಗೊಳಿಸಲಿದ್ದೇನೆ. ಇಲ್ಲಿ ಟ್ರೋಫಿ ಗೆಲ್ಲುವ ವಿಶ್ವಾಸವಿದೆ. ಹಾಗೆಯೇ ಗೆಲ್ಲಬೇಕಾದ ಒತ್ತಡವೂ ಇದೆ‘ ಎಂದು ಜೊಕೊವಿಚ್‌ ಹೇಳಿದ್ದಾರೆ.

ಫ್ರೆಂಚ್‌ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಜೊಕೊವಿಚ್‌ ಅವರನ್ನು ಪರಾಭವಗೊಳಿಸಿ ಪ್ರಶಸ್ತಿ ಎತ್ತಿಹಿಡಿದಿದ್ದ ನಡಾಲ್ ಅವರು ಸತತ 16ನೇ ಬಾರಿ ಎಟಿಪಿ ಫೈನಲ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

‘ವೃತ್ತಿಬದುಕಿನ ಆರಂಭದಲ್ಲಿ ಆಡಿದ್ದಕ್ಕಿಂತಲೂ ಕಳೆದ ಎರಡು ವರ್ಷಗಳಿಂದಒಳಾಂಗಣ ಕ್ರೀಡಾಂಗಣಗಳಲ್ಲಿ ನನ್ನ ಸಾಮರ್ಥ್ಯ ಸುಧಾರಿಸಿದೆ ಎಂದುಕೊಂಡಿದ್ದೇನೆ. ಆದರೆ ಅದು ಸಂಖ್ಯೆಗಳಲ್ಲಿ ಮಾತ್ರ. ಆದರೂ ಇಲ್ಲಿ ಉತ್ತಮವಾಗಿ ಆಡುವ ವಿಶ್ವಾಸವಿದೆ‘ ಎಂದು 34 ವರ್ಷದ ನಡಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT