ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಟಿಪೋಯ್‌ ಮಣಿಸಿದ ನೊವಾಕ್‌ ಜೊಕೊವಿಚ್‌

ಸೆರೆನಾ, ಒಸಾಕ ಮುನ್ನಡೆ
Last Updated 10 ಫೆಬ್ರುವರಿ 2021, 13:10 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಟೈಬ್ರೇಕ್‌ವರೆಗೆ ಸಾಗಿದ ಹಣಾಹಣಿಯಲ್ಲಿಅಗ್ರ ಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಚ್‌, ಅಮೆರಿಕದ ಫ್ರಾನ್ಸಿಸ್‌ ಟಿಫೋಯ್ ಅವರನ್ನು ಮಣಿಸಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು. ಬುಧವಾರ ನಡೆದ ಪಂದ್ಯದಲ್ಲಿ ಸರ್ಬಿಯಾ ಆಟಗಾರನಿಗೆ 6–3, 6–7, 7–6, 6–3ರಿಂದ ಪ್ರಯಾಸದ ಜಯ ಒಲಿಯಿತು. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್, ಜಪಾನ್‌ನ ನವೊಮಿ ಒಸಾಕ ಕೂಡ ಮೂರನೇ ಸುತ್ತು ಪ್ರವೇಶಿಸಿದರು.

ಅಗ್ರಕ್ರಮಾಂಕದ ಆಟಗಾರರನ್ನು ಒಮ್ಮೆಯೂ ಎದುರಿಸದ 23 ವರ್ಷದ ಟಿಫೋಯ್‌, ಪಂದ್ಯದಲ್ಲಿ ಆ ಖುಷಿ ಅನುಭವಿಸಿದರು. ಒಂದು ಗೇಮ್‌ ಕೂಡ ಗೆದ್ದುಕೊಂಡರು.

ಎರಡು ವರ್ಷಗಳ ಹಿಂದೆ ಈ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ವರೆಗೆ ತಲುಪಿದ್ದ ಟಿಫೋಯ್‌, ಎಂಟು ಬಾರಿ ಇಲ್ಲಿ ಚಾಂಪಿಯನ್ ಆಗಿರುವ ಜೊಕೊವಿಚ್ ಅವರಿಗೆ ಉತ್ತಮ ಪೈಪೋಟಿಯನ್ನೇ ನೀಡಿದರು. ಆದರೆ ರಾಡ್‌ ಲೇವರ್ ಅರೆನಾದಲ್ಲಿತಮ್ಮ ಅನುಭವವನ್ನು ಒರೆಗೆ ಹಚ್ಚಿದ ಜೊಕೊ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು. ಮೂರೂವರೆ ತಾಸುಗಳವರೆಗೆ ಈ ಹಣಾಹಣಿ ಪ್ರೇಕ್ಷಕರ ಮನ ರಂಜಿಸಿತು.

ಜೊಕೊವಿಚ್‌ 26 ಏಸ್‌ಗಳನ್ನು ಸಿಡಿಸಿದರೆ, ಟಿಫೋಯ್‌ ಸಿಡಿಸಿದ ಏಸ್‌ಗಳ ಸಂಖ್ಯೆ 23.

‘ಕಠಿಣ ಸವಾಲೊಡ್ಡಿದ ಕಾರಣಕ್ಕಾಗಿ ನಾನು ಟಿಫೋಯ್‌ಗೆ ಅಭಿನಂದಿಸುತ್ತೇನೆ‘ ಎಂದು ಪಂದ್ಯದ ಬಳಿಕ ಜೊಕೊವಿಚ್‌ ನುಡಿದರು.

ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಇತರ ಪಂದ್ಯಗಳಲ್ಲಿ ಅಸ್ಟ್ರಿಯಾದ ಡೊಮಿನಿಕ್ ಥೀಮ್‌ 6-4, 6-0, 6-2ರಿಂದ ಜರ್ಮನಿಯ ಡೊಮಿನಿಕ್ ಕೋಫರ್ ಎದುರು, ಡೆನಿಸ್ ಶಪಾವಲೊವ್ 6-1, 6-3, 6-2ರಿಂದ ಬರ್ನಾರ್ಡ್‌ ಟಾಮಿಕ್‌ ವಿರುದ್ಧ ಗೆದ್ದು ಮೂರನೇ ಸುತ್ತಿಗೆ ಮುನ್ನಡೆದರು.

ಸ್ಟ್ಯಾನ್ ವಾವ್ರಿಂಕಾ ಪರಾಭವ: ಸ್ವಿಟ್ಜರ್ಲೆಂಡ್‌ ಆಟಗಾರ ಸ್ಟ್ಯಾನ್ ವಾವ್ರಿಂಕಾ ಐದು ಸೆಟ್‌ಗಳ ಸುದೀರ್ಘ ಪಂದ್ಯದಲ್ಲಿ ಹಂಗರಿಯ ಮಾರ್ಟನ್ ಫಸ್ಕೊವಿಕ್ಸ್ ಎದುರು ಸೋತರು. 5–7, 1–6, 6–4, 6–2, 6–7ರಿಂದ ವಾವ್ರಿಂಕಾ ಪರಾಭವಗೊಂಡರು.

ಏಳು ಬಾರಿ ಇಲ್ಲಿ ಪ್ರಶಸ್ತಿ ಗೆದ್ದಿರುವ ಸೆರೆನಾ ವಿಲಿಯಮ್ಸ್ 6–3, 6–0ದಿಂದ ನೀನಾ ಸ್ಟಾಜನೊವಿಚ್ ಅವರನ್ನು ಮಣಿಸಿದರು. ಮೂರನೇ ಶ್ರೇಯಾಂಕದ ನವೊಮಿ ಒಸಾಕ 6-2, 6-3ರಿಂದ ಫ್ರಾನ್ಸ್‌ನ ಕರೋಲಿನಾ ಗಾರ್ಸಿಯಾ ಎದುರು ಗೆದ್ದರು. ಆದರೆ ಸೆರೆನಾ ಅವರ ಅಕ್ಕ ವೀನಸ್ ಅವರ ಅಭಿಯಾನ ಅಂತ್ಯವಾಯಿತು. ಪಾದದ ನೋವಿನಿಂದ ಬಳಲಿದ ಅವರು 1–6, 0–6ರಿಂದ ಸಾರಾ ಎರಾನಿ ಎದುರು ಸೋತು, ಕಣ್ಣೀರಿಡುತ್ತಲೇ ನಿರ್ಗಮಿಸಿದರು.

ಮಹಿಳಾ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಇತರ ಹಣಾಹಣಿಗಳಲ್ಲಿ ಸ್ಪೇನ್‌ನ ಗಾರ್ಬೈನ್ ಮುಗುರುಜಾ 6–3, 6–1ರಿಂದ ಲ್ಯೂಡ್‌ಮಿಲಾ ಸಮ್ಸೊನೊವಾ ಎದುರು, ತೈಪೇಯ ಶೇ ಸು ವೇಯ್ 6-3, 6-2ರಿಂದ ಕೆನಡಾದ ಬಿಯಾಂಕಾ ಆ್ಯಂಡ್ರಿಸ್ಕೂ ವಿರುದ್ಧ ಗೆದ್ದು ಬೀಗಿದರು.

ಬೋಪಣ್ಣ–ಜೋಡಿಗೆ ಸೋಲು: ಜಪಾನ್‌ನ ಬೆನ್ ಮೆಕ್‌ಲಾಚಲನ್ ಜೊತೆಯಾಗಿ ಕಣಕ್ಕಿಳಿದಿದ್ದ ಭಾರತ ರೋಹನ್ ಬೋಪಣ್ಣ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದರು. ಕೊರಿಯಾದ ಜಿ ಸಂಗ್ ನಾಮ್‌– ಮಿನ್‌ ಕ್ಯು ಸಾಂಗ್ ಎದುರು ಕಣಕ್ಕಿಳಿದಿದ್ದ ಭಾರತ–ಜಪಾನ್ ಜೋಡಿಯು 4–6, 6–7ರಿಂದ ನಿರಾಸೆ ಅನುಭವಿಸಿದರು. ಒಂದು ತಾಸು 17 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT