ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್: ಗ್ರ್ಯಾನ್‌ಸ್ಲಾಂನಲ್ಲಿ ಜೊಕೊವಿಚ್‌ ‘ತ್ರಿಶತಕ’

‘ಅರ್ಧಶತಕ’ ಗಳಿಸಿದ ಜ್ವೆರೆವ್‌; ಕ್ವಾರ್ಟರ್‌ ಫೈನಲ್‌ನಲ್ಲಿ ಸೆರೆನಾ–ಹಲೆಪ್ ಹಣಾಹಣಿ
Last Updated 14 ಫೆಬ್ರುವರಿ 2021, 14:52 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಕಿಬ್ಬೊಟ್ಟೆಯ ನೋವಿನಿಂದ ಬಳಲಿ ಟೂರ್ನಿಯಿಂದ ಹೊರಬೀಳುವ ಆತಂಕ ಎದುರಿಸಿದ್ದ ಸರ್ಬಿಯಾದ ನೊವಾಕ್ ಜೊಕೊವಿಚ್ ಪುಟಿದೆದ್ದು ಅಮೋಘ ಜಯ ಗಳಿಸಿದರು. ಭಾನುವಾರ ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಕೆನಡಾದ ಮಿಲಾಸ್ ರಾನಿಕ್ ಅವರ ಸವಾಲು ಮೀರಿನಿಂತ ಜೊಕೊವಿಚ್‌ ಗ್ರ್ಯಾನ್‌ಸ್ಲಾಂನಲ್ಲಿ ತಮ್ಮ 300ನೇ ಜಯ ದಾಖಲಿಸಿದರು.

ಶುಕ್ರವಾರ ಟೇಲರ್ ಫಿಟ್ಜ್ ವಿರುದ್ಧ ನಡೆದ ಐದು ಸೆಟ್‌ಗಳ ಪಂದ್ಯದಲ್ಲಿ ನೋವಿನಿಂದ ಬಳಲಿದ್ದ ವಿಶ್ವದ ಒಂದನೇ ಕ್ರಮಾಂಕದ ಆಟಗಾರ ಜೊಕೊವಿಚ್ ಭಾನುವಾರ ಕಣಕ್ಕೆ ಇಳಿಯುವುದು ಸಂದೇಹವಾಗಿತ್ತು. ಆದರೆ ಹಾಲಿ ಚಾಂಪಿಯನ್ ಆಗಿರುವ ಅವರು ನಿರಾಳವಾಗಿ ಆಡಿ7-6 (7/4), 4-6, 6-1, 6-4ರಲ್ಲಿ ಗೆಲುವು ಸಾಧಿಸಿದರು. ಈ ಮೂಲಕ 300 ಗ್ರ್ಯಾನ್‌ಸ್ಲಾಂ ಪಂದ್ಯಗಳನ್ನು ಗೆದ್ದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡರು. ರೋಜರ್ ಫೆಡರರ್‌ 362 ಪಂದ್ಯಗಳಲ್ಲಿ ಜಯ ಗಳಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಜೊಕೊವಿಚ್‌ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಸೆಣಸುವರು.

ಸರ್ಬಿಯಾದ ದೂಸನ್ ಲಾಜೊವಿಚ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಜ್ವೆರೆವ್ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಒಟ್ಟು 50ನೇ ಗೆಲುವು ಸಾಧಿಸಿದರು. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಜ್ವೆರೆವ್ ಎದುರಾಳಿಯನ್ನು6-4, 7-6 (7/5), 6-3ರಲ್ಲಿ ಮಣಿಸಿದರು. ಜ್ವೆರೆವ್ ಮತ್ತು ಲಾಜೊವಿಚ್ 2018 ಮತ್ತು 2019ರ ಫ್ರೆಂಚ್ ಓಪನ್ ಟೂರ್ನಿಗಳಲ್ಲಿ ಮುಖಾಮುಖಿಯಾಗಿದ್ದಾಗ ಪಂದ್ಯಗಳು ಐದು ಸೆಟ್‌ಗಳ ವರೆಗೆ ಸಾಗಿದ್ದವು. ಆದರೆ ಈ ಬಾರಿ ಜ್ವೆರೆವ್ ಸಂಪೂರ್ಣ ಆಧಿಪತ್ಯ ಸ್ಥಾಪಿಸಿದರು. ಎರಡನೇ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿದರೂ ತಿರುಗೇಟು ನೀಡಲು ಲಾಜೊವಿಚ್‌ಗೆ ಸಾಧ್ಯವಾಗಲಿಲ್ಲ. ಟೂರ್ನಿಯಲ್ಲಿ ಈ ವರೆಗೆ ಜ್ವೆರೆವ್ ಒಂದು ಸೆಟ್‌ನಲ್ಲಿ ಮಾತ್ರ ಸೋತಿದ್ದಾರೆ.

ಆಸ್ಟ್ರಿಯಾದ ಡೊಮಿನಿಕ್ ಥೀಮ್ ಬಲ್ಗೇರಿಯಾದ ಗ್ರಿಗರಿ ಡಿಮಿಟ್ರೊವ್‌ಗೆ ಮಣಿದರು. ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ವಿರುದ್ಧ ಅಮೋಘ ಐದು ಸೆಟ್‌ಗಳ ಆಟವಾಡಿ ಗೆಲುವು ದಾಖಲಿಸಿದ್ದ ಡೊಮಿನಿಕ್ ಥೀಮ್ ಭಾನುವಾರ ಎದುರಾಳಿಗೆ 4–6, 4–6, 0–6ರಲ್ಲಿ ಮಣಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಬೆಲಾರಸ್‌ನ ಅರೈನಾ ಸಬಲೆಂಕಾ ಸವಾಲನ್ನು ಮೀರಿದರೆ, ರೊಮೇನಿಯಾದ ಸಿಮೊನಾ ಹಲೆಪ್ ಪೋಲೆಂಡ್‌ನ ಇಗಾ ಸ್ವಾಟೆಕ್ ವಿರುದ್ಧ ಜಯ ಸಾಧಿಸಿದರು. ಜಪಾನ್‌ನ ನವೊಮಿ ಒಸಾಕ ಸ್ಪೇನ್‌ನ ಗಾರ್ಬೈನ್ ಮುಗುರುಜಾ ವಿರುದ್ಧ ಜಯ ಸಾಧಿಸಿದರು.

ಸಿಮೋನಾ ಹಲೆಪ್ ಚೆಂಡನ್ನು ರಿಟರ್ನ್ ಮಾಡಿದ ರೀತಿ –ಎಎಫ್‌ಪಿ ಚಿತ್ರ
ಸಿಮೋನಾ ಹಲೆಪ್ ಚೆಂಡನ್ನು ರಿಟರ್ನ್ ಮಾಡಿದ ರೀತಿ –ಎಎಫ್‌ಪಿ ಚಿತ್ರ

ಫ್ರೆಂಚ್ ಓಪನ್ ಟೂರ್ನಿಯ ಚಾಂಪಿಯನ್ ಇಗಾ ಸ್ವಾಟೆಕ್‌ ವಿರುದ್ಧದ ಪಂದ್ಯದ ಮೊದಲ ಸೆಟ್‌ನಲ್ಲಿ ಕೇವಲ ಮೂರು ಗೇಮ್‌ಗಳನ್ನು ಗೆದ್ದಿದ್ದ ಹಲೆಪ್ ಚೇತರಿಸಿಕೊಂಡು 3-6, 6-1, 6-4 ರಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು ಸೆರೆನಾ ವಿಲಿಯಮ್ಸ್ ವಿರುದ್ಧ ಸೆಣಸುವರು. ಸಬಲೆಂಕಾ ಅವರನ್ನು ವೃತ್ತಿಜೀವನದಲ್ಲಿ ಮೊದಲ ಬಾರಿ ಎದುರಿಸಿದ 39 ವರ್ಷದ ಸೆರೆನಾ ಮೊದಲ ಸೆಟ್‌ನಲ್ಲಿ ಜಯ ಸಾಧಿಸಿದರೂ ಎರಡನೇ ಸೆಟ್‌ನಲ್ಲಿ ನೀರಸ ಆಟವಾಡಿದರು. ಮೂರನೇ ಸೆಟ್‌ನಲ್ಲೂ ಸಬಲೆಂಕಾ ಪೈಪೋಟಿ ನೀಡಿದರು. ಆದರೆ 6-4, 2-6, 6-4ರಲ್ಲಿ ಪಂದ್ಯ ಗೆಲ್ಲುವಲ್ಲಿ ಸೆರೆನಾ ಯಶಸ್ವಿಯಾದರು.

ಮುಗುರುಜಾ ಎದುರಿನ ಪಂದ್ಯದ ಮೊದಲ ಸೆಟ್‌ ಕಳೆದುಕೊಂಡಿದ್ದ ಒಸಾಕ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ನಿರ್ಣಾಯಕ ಮೂರನೇ ಸೆಟ್‌ನ ಒಂದು ಹಂತದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದ್ದರು. ನಂತರ ಚೇತರಿಸಿಕೊಂಡು 4-6, 6-4, 7-5ರಲ್ಲಿ ಗೆದ್ದರು.

ಕ್ವಾರ್ಟರ್ ಫೈನಲ್‌ಗೆ ಸೂ ವೀ ಸೇಹ್

ಚೀನಾ ಥೈಪೆಯ ಸೂ ವೀ ಸೇಹ್ ಅವರು ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅತಿ ಹಿರಿಯ ಆಟಗಾರ್ತಿ ಎನಿಸಿಕೊಂಡರು. ವಿಶ್ವ ರ‍್ಯಾಂಕಿಂಗ್‌ನ 71ನೇ ಸ್ಥಾನದಲ್ಲಿರುವ 35 ವರ್ಷದ ಸೇಹ್‌ ಭಾನುವಾರದ ಪಂದ್ಯದಲ್ಲಿ ಜೆಕ್‌ ಗಣರಾಜ್ಯದ ಆಟಗಾರ್ತಿ, ತಮಗಿಂತ 14 ವರ್ಷ ಕಿರಿಯರಾದ ಮರ್ಕೆಟಾ ಒಂಡ್ರೊಸೊವಾ ವಿರುದ್ಧ6-4, 6-2ರಲ್ಲಿ ಜಯ ಗಳಿಸಿದರು. ಎಂಟರ ಘಟ್ಟದಲ್ಲಿ ಅವರು ನವೊಮಿ ಒಸಾಕ ವಿರುದ್ಧ ಸೆಣಸುವರು.

‌‘ಪ್ರತಿ ಪಂದ್ಯವನ್ನೂ ಖುಷಿಯಿಂದ ಆಡುತ್ತೇನೆ. ಸೋಲು ಗೆಲುವಿನ ಬಗ್ಗೆ ಹೆಚ್ಚು ಚಿಂತೆ ಮಾಡುವುದಿಲ್ಲ. ಆದರೆ ಎಷ್ಟು ಸಾಧ್ಯವಿದೆಯೋ ಅಷ್ಟು ಚೆನ್ನಾಗಿ ಆಡಲು ಪ್ರಯತ್ನಿಸುತ್ತೇನೆ. ಆಟದಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ಶೈಲಿ ಇದೆ. ಇದು ಕೆಲವರ ಕೈ ಹಿಡಿಯುತ್ತದೆ. ಕೆಲವರಿಗೆ ಸೋಲು ತಂದುಕೊಡುತ್ತದೆ’ ಎಂದು ಡಬಲ್ಸ್‌ನಲ್ಲಿ ಎರಡು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿರುವ ಸೇಹ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT