ಗುರುವಾರ , ಫೆಬ್ರವರಿ 27, 2020
19 °C
ಆಸ್ಟ್ರೇಲಿಯನ್‌ ಓಪನ್‌: ನಾಲ್ಕರ ಘಟ್ಟಕ್ಕೆ ಜೊಕೊವಿಚ್‌, ಫೆಡರರ್‌

ಥೀಮ್‌ಗೆ ಮಣಿದ ನಡಾಲ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌ : ಆರು ವರ್ಷಗಳಿಂದ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಹಸಿವಿನಲ್ಲಿರುವ ಡಾಮಿನಿಕ್‌ ಥೀಮ್‌ ವಿಶ್ವದ ಅಗ್ರಮಾನ್ಯ ಆಟಗಾರ ರಫೆಲ್‌ ನಡಾಲ್‌ ಅವರನ್ನು ನಾಲ್ಕು ಸೆಟ್‌ಗಳ ತೀವ್ರ ಹೋರಾಟದಲ್ಲಿ ಸೋಲಿಸಿದರು. ಬುಧವಾರ 7–6 (7–3), 7–6 (7–4), 4–6, 7–6 (8–6) ರಿಂದ ಗೆದ್ದ ಆಸ್ಟ್ರಿಯಾದ ಆಟಗಾರ ಮೊದಲ ಬಾರಿ ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿದರು.

ಹಾರ್ಡ್‌ಕೋರ್ಟ್‌ನಲ್ಲಿ ತಮ್ಮ ಸಾಮರ್ಥ್ಯದ ಬಗ್ಗೆಯಿದ್ದ ಅನು ಮಾನಗಳಿಗೆ ತೆರೆಯೆಳೆದ ಐದನೇ ಶ್ರೇಯಾಂಕದ ಥೀಮ್‌, ಶುಕ್ರವಾರ ನಡೆಯುವ ಸೆಮಿಫೈನಲ್‌ನಲ್ಲಿ ಏಳನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವೆರೇವ್‌ ಅವರನ್ನು ಎದುರಿಸಲಿದ್ದಾರೆ. ಆದರೆ ನಡಾಲ್‌ ಮೇಲಿನ ಗೆಲುವು 26 ವರ್ಷದ ಥೀಮ್‌ಗೆ ನಾಲ್ಕರ ಘಟ್ಟದ ಪಂದ್ಯವನ್ನು ವಿಶ್ವಾಸದಿಂದ ಎದುರಿಸಲು ನೆರವಾಗಲಿದೆ.

ಈ ಸೋಲಿನೊಂದಿಗೆ 20ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲುವ ನಡಾಲ್‌ ಕನಸು ಸದ್ಯಕ್ಕೆ ನುಚ್ಚುನೂರಾಯಿತು. ಕೊನೆಯ ಎರಡು ಫ್ರೆಂಚ್ ಓಪನ್‌ ಫೈನಲ್‌ಗಳು ಸೇರಿದಂತೆ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಈ ಹಿಂದೆ ಮುಖಾಮುಖಿಯಾದ ಐದೂ ಸಂದರ್ಭಗಳಲ್ಲಿ ನಡಾಲ್‌ ಕೈಮೇಲಾಗಿತ್ತು. ಈ ಬಾರಿ, ನಾಲ್ಕು ಗಂಟೆ ಹತ್ತು ನಿಮಿಷಗಳ ಸೆಣಸಾಟದಲ್ಲಿ ಸಂಭ್ರಮಿಸುವ ಸರದಿ ಥೀಮ್‌ ಅವರದ್ದಾಗಿತ್ತು.

ಥೀಮ್‌, ಮೆಲ್ಬರ್ನ್‌ ಪಾರ್ಕ್‌ನಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿದ ಆಸ್ಟ್ರಿಯಾದ ಎರಡನೇ ಆಟಗಾರ ಎನಿಸಿದರು. ಥಾಮಸ್‌ ಮುಸ್ಟರ್‌ 1989 ಮತ್ತು 97ರಲ್ಲಿ ಸೆಮಿಫೈನಲ್‌ ತಲುಪಿದ್ದರು.

‘ಅಗತ್ಯವಾಗಿದ್ದ ಸಂದರ್ಭದಲ್ಲಿ ನನಗೆ ಅದೃಷ್ಟ ಒಲಿಯಿತು. ನೆಟ್‌ ಕಾರ್ಡ್‌ ಪಾಯಿಂಟ್‌ಗಳು ನನ್ನ ಕಡೆಯಾದವು’ ಎಂದು ದಣಿದಿದ್ದ ಥೀಮ್‌ ಹೇಳಿದರು. ‘ನನಗೆ ಅದರ ಅಗತ್ಯವೂ ಇತ್ತು. ಏಕೆಂದರೆ ನನ್ನ ಎದುರಾಳಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರನ್ನು ಸೋಲಿಸಲು ಅದೃಷ್ಟ ಬೆಂಬಲವೂ ಬೇಕಾಗುತ್ತದೆ’ ಎಂದರು.

ಜರ್ಮನಿಯ ಜ್ವೆರೇವ್‌ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ 1–6, 6–3, 6–4, 6–2ರಿಂದ ಸ್ಟಾನಿಸ್ಲಾವ್‌ ವಾವ್ರಿಂಕಾ ಅವರನ್ನು ಮಣಿಸಿ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಸೆಮಿಫೈನಲ್‌ಗೆ ಕಾಲಿಟ್ಟರು.

ಜೊಕೊವಿಚ್‌ಗೆ ಜಯ:  ಸರ್ಬಿಯಾದ ನೊವಾಕ್‌ ಜೊಕೊವಿಚ್‌  6–4, 6–3, 7–6 (7–1) ರಿಂದ ಮಿಲೋಸ್‌ ರಾವೊನಿಕ್‌ ಅವರನ್ನು ಸೋಲಿಸಿ ಸೆಮಿಫೈನಲ್‌ ತಲುಪಿದರು.

ಎರಡನೇ ಕ್ರಮಾಂಕದ ಜೊಕೊವಿಚ್‌ ಸೆಮಿಫೈನಲ್‌ನಲ್ಲಿ ಮೂರನೇ ಕ್ರಮಾಂಕದ ರೋಜರ್‌ ಫೆಡರರ್‌ ಅವರನ್ನು ಎದುರಿಸಲಿದ್ದಾರೆ. ಸ್ಟಿಜರ್ಲೆಂಡ್‌ನ ಫೆಡರರ್‌ ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಟೆನ್ನಿಸ್‌ ಸ್ಯಾಂಡ್‌ಗ್ರೆನ್‌ ಅವರನ್ನು 6–3, 2–6, 2–6, 7–6 (10–8), 6–2 ರಿಂದ ಸೋಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)