ಇಂದಿನಿಂದ ಫೆಡ್‌ಕಪ್‌ ಟೆನಿಸ್‌: ಭಾರತದ ಹಾದಿ ಕಠಿಣ

7
ಅಂಕಿತಾ, ಕರ್ಮನ್‌ಕೌರ್‌ ಮೇಲೆ ನಿರೀಕ್ಷೆಯ ಭಾರ

ಇಂದಿನಿಂದ ಫೆಡ್‌ಕಪ್‌ ಟೆನಿಸ್‌: ಭಾರತದ ಹಾದಿ ಕಠಿಣ

Published:
Updated:
Prajavani

ಅಸ್ತಾನ, ಕಜಕಸ್ತಾನ: ‍ಪ್ರತಿಷ್ಠಿತ ಫೆಡ್‌ ಕಪ್‌ ಟೆನಿಸ್‌ ಟೂರ್ನಿಯ ಏಷ್ಯಾ, ಒಸೀನಿಯಾ ವಲಯದ ಪಂದ್ಯಗಳು ಬುಧವಾರದಿಂದ ನಡೆಯಲಿದ್ದು, ಭಾರತ ತಂಡ ವಿಶ್ವ ಗುಂಪು–2ಕ್ಕೆ ಅರ್ಹತೆ ಗಳಿಸುವತ್ತ ಚಿತ್ತ ನೆಟ್ಟಿದೆ. ತಂಡದ ಈ ಹಾದಿ ಅತ್ಯಂತ ಕಠಿಣ ಎನಿಸಿದೆ.

ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಥಾಯ್ಲೆಂಡ್‌ ಮತ್ತು ಆತಿಥೇಯ ಕಜಕಸ್ತಾನ ತಂಡಗಳೂ ಇದೇ ಗುಂಪಿನಲ್ಲಿವೆ. ಹೀಗಾಗಿ ಸಿಂಗಲ್ಸ್‌ ವಿಭಾಗದ ಆಟಗಾರ್ತಿಯರಾದ ಅಂಕಿತಾ ರೈನಾ ಮತ್ತು ಕರ್ಮನ್‌ಕೌರ್ ಥಾಂಡಿ ಅವರ ಮೇಲೆ ನಿರೀಕ್ಷೆಯ ಭಾರ ಬಿದ್ದಿದೆ.

ಗುರುವಾರ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಭಾರತ, ಥಾಯ್ಲೆಂಡ್‌ ಎದುರು ಸೆಣಸಲಿದ್ದು ಸುಲಭವಾಗಿ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ಶುಕ್ರವಾರ ನಿಗದಿಯಾಗಿರುವ ಕಜಕಸ್ತಾನ ಎದುರಿನ ಹೋರಾಟ ತಂಡದ ಪಾಲಿಗೆ ಕಠಿಣ ಎನಿಸಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 43ನೇ ಸ್ಥಾನದಲ್ಲಿರುವ ಯೂಲಿಯಾ ಪುಟಿನ್‌ತ್ಸೆವಾ ಮತ್ತು 96ನೇ ಸ್ಥಾನ ಹೊಂದಿರುವ ಜರೀನಾ ದಿಯಾಸ್‌ ಅವರು ಕಜಕಸ್ತಾನ ಪರ ಕಣಕ್ಕಿಳಿಯಲಿದ್ದಾರೆ. ಇವರ ಎದುರು ಅಂಕಿತಾ ಮತ್ತು ಕರ್ಮನ್‌ಕೌರ್‌ ಗೆಲ್ಲಬೇಕು. ಹಾಗಾದಲ್ಲಿ ವಿಶ್ವ ಗುಂಪಿಗೆ ಅರ್ಹತೆ ಗಳಿಸುವ ಭಾರತದ ಕನಸು ಕೈಗೂಡಬಹುದು.

ಹೋದ ವರ್ಷ ದೆಹಲಿಯಲ್ಲಿ ಪಂದ್ಯ ನಡೆದಿದ್ದಾಗ ಅಂಕಿತಾ ಅವರು ಪುಟಿನ್‌ತ್ಸೆವಾಗೆ ಆಘಾತ ನೀಡಿದ್ದರು. ಕರ್ಮನ್‌ ಅವರು ಜರೀನಾ ಎದುರು ನಿರಾಸೆ ಕಂಡಿದ್ದರು.

ಈ ಬಾರಿಯ ಆಸ್ಟ್ರೇಲಿಯಾ ಓಪನ್‌ ಅರ್ಹತಾ ಟೂರ್ನಿಯಲ್ಲಿ ಆಡಿದ್ದ ಅಂಕಿತಾ, ಇತ್ತೀಚೆಗೆ ನಡೆದಿದ್ದ ಸಿಂಗಪುರ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು. ಕರ್ಮನ್‌ಕೌರ್‌ ಕೂಡಾ ಈ ವರ್ಷ ನಡೆದ ಕೆಲ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಾರೆ.

ಪ್ರಾರ್ಥನಾ ತೊಂಬಾರೆ, ಮಹಕ್‌ ಜೈನ್‌ ಮತ್ತು ರಿಯಾ ಭಾಟಿಯಾ ಅವರು ಡಬಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದಾರೆ.

ಚೀನಾ, ದಕ್ಷಿಣ ಕೊರಿಯಾ, ಇಂಡೊನೇಷ್ಯಾ ಮತ್ತು ಪೆಸಿಫಿಕ್‌ ಒಸೀನಿಯಾ ತಂಡಗಳು ‘ಬಿ’ ಗುಂಪಿನಲ್ಲಿ ಆಡಲಿವೆ.

‘ಎ’ ಮತ್ತು ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸುವ ತಂಡಗಳು ವಿಶ್ವ ಗುಂಪು–2 ಅರ್ಹತಾ ಪಂದ್ಯದಲ್ಲಿ ಸೆಣಸಲಿವೆ.

‘ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವ ಸಲುವಾಗಿ ಸಾಕಷ್ಟು ಮುಂಚಿತವಾಗಿಯೇ ಕಜಕಸ್ತಾನಕ್ಕೆ ಬಂದಿದ್ದೇವೆ. ಥಾಯ್ಲೆಂಡ್‌ ತಂಡವನ್ನು ಮಣಿಸುವುದು ನಮ್ಮ ಮೊದಲ ಗುರಿ. ನಂತರ ಕಜಕಸ್ತಾನವನ್ನು ಹಣಿಯಲು ಸೂಕ್ತ ರಣನೀತಿ ಹೆಣೆಯುತ್ತೇವೆ. ನಮ್ಮ ಆಟಗಾರ್ತಿಯರು ಉತ್ತಮ ಲಯದಲ್ಲಿದ್ದು ಆ ತಂಡಕ್ಕೆ ಆಘಾತ ನೀಡಲಿದ್ದಾರೆ’ ಎಂದು ಭಾರತ ತಂಡದ ನಾಯಕ ವಿಶಾಲ್‌ ಉಪ್ಪಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !