ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ಬೋಪಣ್ಣ–ಭಾಂಬ್ರಿಗೆ ಆಘಾತ, ಪ್ರಿ ಕ್ವಾರ್ಟರ್‌ಗೆ ಅಂಕಿತಾ

Published 25 ಸೆಪ್ಟೆಂಬರ್ 2023, 18:32 IST
Last Updated 25 ಸೆಪ್ಟೆಂಬರ್ 2023, 18:32 IST
ಅಕ್ಷರ ಗಾತ್ರ

ಹಾಂಗ್‌ಝೌ: ಏಷ್ಯನ್‌ ಕ್ರೀಡಾಕೂಟದ ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಡುವ ನೆಚ್ಚಿನ  ಜೋಡಿ ಎನಿಸಿದ್ದ ರೋಹನ್‌ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಅನಿರೀಕ್ಷಿತ ಆಘಾತ ಅನುಭವಿಸಿದರು.

ಸೋಮವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಉಜ್ಬೆಕಿಸ್ತಾನದ ಸೆರ್ಜಿ ಫೋಮಿನ್– ಖುಮೊಯುನ್ ಸುಲ್ತಾನೋವ್ ಜೋಡಿ 2–6, 6–3, 10–6 ರಿಂದ ಇಲ್ಲಿ ಅಗ್ರಶ್ರೇಯಾಂಕದ ಹೊಂದಿದ್ದ ಭಾರತದ ಜೋಡಿಯನ್ನು ಮಣಿಸಿ ಅಚ್ಚರಿ ಉಂಟುಮಾಡಿತು.

ಎಟಿಪಿ ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ ಬೋಪಣ್ಣ ಅಗ್ರ 10ರೊಳಗೆ ಹಾಗೂ ಭಾಂಬ್ರಿ ಅವರು ಅಗ್ರ 100ರ ಒಳಗಿನ ಸ್ಥಾನದಲ್ಲಿದ್ದಾರೆ. ಆದರೆ ಉಜ್ಬೆಕಿಸ್ತಾನದ ಜೋಡಿ 300ರ ಒಳಗಿನ ಸ್ಥಾನದಲ್ಲೂ ಇಲ್ಲ. ಆದ್ದರಿಂದ ಈ ಸೋಲು ಭಾರತದ ಜೋಡಿಯನ್ನು ಬಹಳವಾಗಿ ಕಾಡಲಿದೆ.

ಮೊದಲ ಸೆಟ್‌ ಜಯಿಸಿದ್ದ ಭಾರತದ ಜೋಡಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಎರಡನೇ ಸೆಟ್‌ನಲ್ಲಿ ಭಾಂಬ್ರಿ ಅವರು ಲಯ ಕಳೆದುಕೊಂಡದ್ದು ಮುಳುವಾಗಿ ಪರಿಣಮಿಸಿತು. ನಿರ್ಣಾಯಕ ಘಟ್ಟದಲ್ಲಿ ಡಬಲ್‌ಫಾಲ್ಟ್‌ ಎಸಗಿದ ಅವರ ರಿಟರ್ನ್‌ಗಳಲ್ಲೂ ನಿಖರತೆ ಸಾಧಿಸಲು ವಿಫಲರಾದರು.

‘ರೋಹನ್‌ ಈ ಪಂದ್ಯದಲ್ಲಿ ಚೆನ್ನಾಗಿ ಆಡಿದರು. ಆದರೆ ಪಂದ್ಯ ಗೆಲ್ಲಲು ಬೇಕಾದ ಬೆಂಬಲ ಸಹ ಆಟಗಾರನಿಂದ ಅವರಿಗೆ ಲಭಿಸದೇ ಇದ್ದುದು ದುರದೃಷ್ಟಕರ’ ಎಂದು ಭಾರತ ತಂಡದ ಕೋಚ್‌ ಜೀಶನ್‌ ಅಲಿ ಪ್ರತಿಕ್ರಿಯಿಸಿದರು.

ಎಂಟರಘಟ್ಟಕ್ಕೆ ರಾಮಕುಮಾರ್‌– ಮೈನೇನಿ: ರಾಮಕುಮಾರ್ ರಾಮ ನಾಥನ್– ಸಾಕೇತ್‌ ಮೈನೇನಿ ಜೋಡಿ 6–3, 6–2 ರಿಂದ ಇಂಡೊನೇಷ್ಯಾದ ಇಗ್ನೇಷಿಯಸ್‌ ಆಂಥೋನಿ ಸುಸಾಂತೊ– ಡೇವಿಡ್‌ ಅಗಂಗ್‌ ಸುಸಾಂತೊ ವಿರುದ್ಧ ಗೆದ್ದು ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಥಾನ ಪಡೆಯಿತು.

ಪ್ರಿ ಕ್ವಾರ್ಟರ್‌ಗೆ ಅಂಕಿತಾ, ರುತುಜಾ: ಅಂಕಿತಾ ರೈನಾ ಮತ್ತು ರುತುಜಾ ಭೋಸಲೆ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಭಾರತದ ಅಗ್ರ ರ್‍ಯಾಂಕ್‌ನ ಆಟಗಾರ್ತಿ ಅಂಕಿತಾ 6–0, 6–0 ರಿಂದ ಉಜ್ಬೆಕಿಸ್ತಾನದ ಸಬ್ರಿನಾ ಆಲಿಮ್ಜೊನೊವಾ ಅವರನ್ನು ಮಣಿಸಿದರು. ಇದಕ್ಕಾಗಿ ಅವರು 51 ನಿಮಿಷಗಳನ್ನು ತೆಗೆದುಕೊಂಡರು.

2018ರ ಕೂಟದ ಕಂಚಿನ ಪದಕ ವಿಜೇತೆ ಹಾಗೂ ವಿಶ್ವ ರ್‍ಯಾಂಕಿಂಗ್‌ನಲ್ಲಿ 198ನೇ ಸ್ಥಾನದಲ್ಲಿರುವ ಅಂಕಿತಾ ಮುಂದಿನ ಸುತ್ತಿನಲ್ಲಿ ಹಾಂಗ್‌ಕಾಂಗ್‌ನ ಆದಿತ್ಯ ಪಿ. ಕರುಣರತ್ನೆ ಅವರನ್ನು ಎದುರಿಸುವರು.

ಇನ್ನೊಂದು ಪಂದ್ಯದಲ್ಲಿ ರುತುಜಾ 7–6, 6–2 ರಿಂದ ಕಜಕಸ್ತಾನದ ಅರುಝನ್ ಸಂಗಂದಿಕೊವಾ ಅವರನ್ನು ಮಣಿಸಿದರು. ಸುಮಾರು ಎಂಟು ಗಂಟೆ ನಡೆದ ಹಣಾಹಣಿಯ ಮೊದಲ ಸೆಟ್‌ ಗೆಲ್ಲಲು ರುತುಜಾ ಪ್ರಯಾಸಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT