ಛಲದ ಹೋರಾಟದಲ್ಲಿ ಗೆದ್ದ ನಡಾಲ್‌

7
ಅಮೆರಿಕ ಓಪನ್‌ ಟೆನಿಸ್‌: ಡಾಮಿನಿಕ್‌ ಥೀಮ್‌ಗೆ ಸೋಲು, ಸೆಮಿಗೆ ಸೆರೆನಾ

ಛಲದ ಹೋರಾಟದಲ್ಲಿ ಗೆದ್ದ ನಡಾಲ್‌

Published:
Updated:
Deccan Herald

ನ್ಯೂಯಾರ್ಕ್‌: ಶ್ರೇಷ್ಠ ಆಟವಾಡಿದ ಹಾಲಿ ಚಾಂಪಿಯನ್‌ ಸ್ಪೇನ್‌ನ ರಫೆಲ್‌ ನಡಾಲ್‌ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 

ಮಂಗಳವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ನಡಾಲ್‌, 0–6, 6–4, 7–5, 6–7, 7–6ರಿಂದ ಆಸ್ಟ್ರೀಯಾದ ಡಾಮಿನಿಕ್‌ ಥೀಮ್‌ ಅವರನ್ನು ಮಣಿಸಿದರು. 4 ಗಂಟೆ 49 ನಿಮಿಷ ನಡೆದ ಈ ಮ್ಯಾರಥಾನ್‌ ಹೋರಾಟವು ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಆರಂಭದಲ್ಲಿ ಅಕ್ರಮಣಕಾರಿ ಆಟವಾಡಿದ ಡಾಮಿನಿಕ್‌, ಮೊದಲ ಸೆಟ್‌ ಅನ್ನು 6–0ಯಿಂದ ತಮ್ಮದಾಗಿಸಿಕೊಂಡರು. ಈ ಸೆಟ್‌ನಲ್ಲಿ ನಡಾಲ್‌ ಒಂದು ಪಾಯಿಂಟ್‌ ಗಳಿಸಲು ಸಾಧ್ಯವಾಗಲಿಲ್ಲ. ಆಟದ ಎಲ್ಲ ಹಂತದಲ್ಲೂ ಅಧಿಪತ್ಯ ಸಾಧಿಸಿದ ಥೀಮ್‌ ಮುಂದೆ ನಡಾಲ್‌ ಧೃತಿಗೆಟ್ಟರು. ಆದರೆ, ಮುಂದಿನ ಎರಡು ಸೆಟ್‌ಗಳಲ್ಲಿ ಸ್ಪೇನ್‌ನ ಆಟಗಾರ ತಿರುಗೇಟು ನೀಡಿದರು. ಈ ಅವಧಿಯಲ್ಲಿ ಅವರ ಆಟ ರಂಗೇರಿತು. ಧೀರ್ಘ ರ‍್ಯಾಲಿ, ಮನಮೋಹಕ ಸರ್ವ್‌, ಅಮೋಘ ಫೋರ್‌ಹ್ಯಾಂಡ್‌ ಹಾಗೂ ಬ್ಯಾಕ್‌ಹ್ಯಾಂಡ್‌ ಹೊಡೆತಗಳಿಂದ ಆಸ್ಟ್ರೀಯಾದ ಆಟಗಾರನನ್ನು ಕಟ್ಟಿಹಾಕಿದರು. 

ನಾಲ್ಕನೇ ಸೆಟ್‌ನಲ್ಲಿ ಥೀಮ್‌ ಮತ್ತೆ ಲಯಕ್ಕೆ ಮರಳಿದರು. ಹಿಂದಿನ ಸೆಟ್‌ಗಳಲ್ಲಿ ಮಾಡಿದ್ದ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿದರು. ಈ ಸೆಟ್‌ ಟೈ ಬ್ರೇಕರ್‌ನಲ್ಲಿ ಕೊನೆಗೊಂಡಿತು. ಇದರಲ್ಲಿ ಗೆದ್ದ ಡಾಮಿನಿಕ್‌ ಸಮಬಲ ಸಾಧಿಸಿದರು. 

ಐದನೇ ಸೆಟ್‌ನಲ್ಲಿ ಉಭಯ ಆಟಗಾರರು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಬೇಸ್‌ಲೈನ್‌ ಹೊಡೆತಗಳು ಆಟಕ್ಕೆ ಮೆರುಗು ತುಂಬಿದವು. ಇಬ್ಬರೂ ಕೊನೆಯವರೆಗೂ ಸಮಬಲ ಸಾಧಿಸಿದರು. ನಿರ್ಣಾಯಕವಾಗಿದ್ದ ಟೈ ಬ್ರೇಕರ್‌ನಲ್ಲಿ ಡಾಮಿನಿಕ್‌ ತಪ್ಪೆಸಗಿದರು. ಪಾಯಿಂಟ್‌ ತನ್ನದಾಗಿಸಿಕೊಂಡ ನಡಾಲ್‌ ಗೆದ್ದು ಬೀಗಿದರು. ತಮ್ಮ ಎದುರಾಳಿಯನ್ನು ಬಿಗಿದಪ್ಪಿ ಸಂಭ್ರಮಿಸಿದರು. 

ಪಂದ್ಯದ ನಂತರ ಮಾತನಾಡಿದ ಡಾಮಿನಿಕ್‌, ‘ವಿಶ್ವ ಟೆನಿಸ್‌ ಜಗತ್ತಿನ ಅತ್ಯುತ್ತಮ ಆಟಗಾರನ ಎದುರು ಆಡಿದ ಈ ಪಂದ್ಯ ವಿಶೇಷವಾಗಿತ್ತು. ಈ ಹಣಾಹಣಿಯ ನೆನಪುಗಳು ಅವಿಸ್ಮರಣೀಯ. ನನ್ನ ಜೀವಮಾನದ ಶ್ರೇಷ್ಠ ಪಂದ್ಯ ಇದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಹೇಳಿದರು. 

ಡೆಲ್‌ ಪೊಟ್ರೊಗೆ ಜಯ: ಅರ್ಜೆಂಟೀನಾದ ವುವಾನ್‌ ಡೆಲ್‌ ಪೊಟ್ರೊ ಅವರು ಸಿಂಗಲ್ಸ್‌ ವಿಭಾಗದಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ. ‌

ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾದ ಆಟಗಾರ 6–7, 6–3, 7–6, 6–2ರಿಂದ ಅಮೆರಿಕದ ಜಾನ್‌ ಇಸ್ನರ್‌ ಅವರನ್ನು ಪರಾಭವಗೊಳಿಸಿದರು. ಸೆಮಿಫೈನಲ್‌ನಲ್ಲಿ ನಡಾಲ್‌ ಹಾಗೂ ವುವಾನ್‌ ಅವರು ಮುಖಾಮುಖಿಯಾಗಲಿದ್ದಾರೆ. 

ಸೆಮಿಗೆ ಸೆರೆನಾ: ಆರು ಬಾರಿಯ ಚಾಂಪಿಯನ್‌ ಅಮೆರಿಕದ ಸೆರೆನಾ ವಿಲಿಯಮ್ಸ್‌ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ತಲುಪಿದ್ದಾರೆ.  

ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸೆರೆನಾ, 6–4, 6–3ರಿಂದ ಜೆಕ್‌ ರಿಪಬ್ಲಿಕ್‌ನ ಕರೊಲಿನಾ ಲಿಸ್ಕೊವಾ ವಿರುದ್ಧ ಗೆದ್ದರು. ಇದರೊಂದಿಗೆ ದಾಖಲೆಯ 24ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವ ಕನಸು ಜೀವಂತವಾಗಿಟ್ಟುಕೊಂಡರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !