ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಎಟಿಪಿ ಚಾಲೆಂಜರ್‌ ಟೂರ್ನಿ: ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯ

Last Updated 17 ಫೆಬ್ರುವರಿ 2022, 14:55 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ರಾಮ್‌ಕುಮಾರ್ ರಾಮನಾಥನ್‌ ಮತ್ತು ಸಾಕೇತ್‌ ಮೈನೇನಿ ಜೋಡಿಯು ಬೆಂಗಳೂರು ಓಪನ್‌ 2 ಟೆನಿಸ್‌ ಎಟಿಪಿ ಚಾಲೆಂಜರ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪುವ ಮೂಲಕ ಪ್ರಶಸ್ತಿ ಗೆಲುವಿನತ್ತ ಮತ್ತೊಂದು ಹೆಜ್ಜೆಯಿಟ್ಟರು. ಎನ್‌. ಶ್ರೀರಾಮ್‌ ಬಾಲಾಜಿ ಮತ್ತು ವಿಷ್ಣುವರ್ಧನ್ ಜೋಡಿಯೂ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು.

ಅರ್ಜುನ್‌ ಖಾಡೆ ಮತ್ತು ಸಿದ್ಧಾರ್ಥ್‌ ರಾವತ್‌ ವೀರೋಚಿತ ಹೋರಾಟದಲ್ಲಿ ಸೋಲು ಕಾಣುವುದರೊಂದಿಗೆ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯವಾಯಿತು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಡಬಲ್ಸ್ ವಿಭಾಗದ ಎಂಟರ ಘಟ್ಟದ ಹಣಾಹಣಿಯಲ್ಲಿ ರಾಮ್‌ಕುಮಾರ್– ಸಾಕೇತ್‌6-4, 7-6 (3)ರಿಂದ ವ್ಲಾಡಿಸ್ಲಾವ್ ಒರ್ಲೊವ್‌ ಮತ್ತು ಕಾಯ್ ವೆನೆಲ್ಟ್‌ ಅವರನ್ನು ಪರಾಭವಗೊಳಿಸಿದರು.

ತೀವ್ರ ಪೈಪೋಟಿ ನಡೆದ ಪಂದ್ಯವು ಟೈಬ್ರೇಕ್‌ವರೆಗೆ ಸಾಗಿತು. ಆದರೆ ಮನಮೋಹಕ ಆಟವಾಡಿದ ಭಾರತದ ಆಟಗಾರರು ಉಕ್ರೇನ್‌– ಜರ್ಮನಿಯ ಜೋಡಿಯ ಸವಾಲು ಮೀರುವಲ್ಲಿ ಯಶಸ್ವಿಯಾದರು.

ಬೆಂಗಳೂರು ಓಪನ್ 1 ಟೂರ್ನಿಯ ಡಬಲ್ಸ್‌ನಲ್ಲಿ ರಾಮ್‌ಕುಮಾರ್ ಮತ್ತು ಸಾಕೇತ್ ಜೋಡಿಗೆ ಪ್ರಶಸ್ತಿ ಒಲಿದಿತ್ತು.

ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನ ಮತ್ತೊಂದು ಜಿದ್ದಾಜಿದ್ದಿನ ಸೆಣಸಾಟದಲ್ಲಿ ಶ್ರೀರಾಮ್‌ ಮತ್ತು ವಿಷ್ಣುವರ್ಧನ್‌6-3, 4-6, 11-9ರಿಂದ ಗ್ರೇಟ್‌ ಬ್ರಿಟನ್‌ನ ಮಾರ್ಕೊಸ್ ಕಲೊವೆಲೊನಿಸ್‌ ಮತ್ತು ಜಪಾನ್‌ನ ತೋಶಿದೆ ಮತ್ಸುಯಿ ಅವರನ್ನು ಸೋಲಿಸಿದರು. ಸಿಂಗಲ್ಸ್‌ನಲ್ಲಿ ಅನುಭವಿಸಿದ ಸೋಲಿನಿಂದ ಕಳೆದಕೊಂಡ ಖುಷಿಯನ್ನು ಅರ್ಜುನ್ ಖಾಡೆ ಡಬಲ್ಸ್‌ನಲ್ಲಿ ಮರಳಿ ಪಡೆದರು. ಅಸ್ಟ್ರಿಯಾದ ಅಲೆಕ್ಸಾಂಡರ್‌ ಎರ್ಲರ್ ಜೊತೆಗೂಡಿದ ಅವರು ಭಾರತದವರೇ ಆದ ಎಸ್‌.ಡಿ. ಪ್ರಜ್ವಲ್‌ ದೇವ್‌ ಮತ್ತು ನಿಕಿ ಕೆ. ಪೂಣಚ್ಚ ಅವರನ್ನು6-1, 3-6, 10-6ರಿಂದ ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.

ಮತ್ತೊಂದು ಪಂದ್ಯದಲ್ಲಿ ಭಾರತದ ಜೀವನ್ ನೆಡುಂಚೆರಿಯನ್‌ ಮತ್ತು ಪೂರವ್ ರಾಜ ಅವರು ಫ್ರಾನ್ಸ್‌ನ ಎಂಜೊ ಕೌಸಾಡ್‌– ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಹ್ಯಾರಿಸ್‌ ಎದುರು 6–3, 2–6, 11–13ರಿಂದ ಮಣಿದರು.

ಸಿಂಗಲ್ಸ್‌ನಲ್ಲಿ ಕೊನೆಗೊಂಡ ಭಾರತದ ಅಭಿಯಾನ: ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸುವ ಭಾರತದ ಆಟಗಾರರ ಕನಸು ಈ ಟೂರ್ನಿಯಲ್ಲೂ ಕೈಗೂಡಲಿಲ್ಲ.

ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದ ಅರ್ಜುನ್‌ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 6-7 (7), 5-7ರಿಂದ ಎಂಜೊ ಕೌಸಾಡ್‌ ಎದುರು ಎಡವಿದರೆ, ಸಿದ್ಧಾರ್ಥ್‌ 4–6, 6–2, 4–6ರಿಂದ ಸ್ವಿಟ್ಜರ್ಲೆಂಡ್‌ನ ಅಂಟೋನಿ ಬೆಲ್ಲಿಯರ್ ಎದುರು ಸೋತರು.

ಸ್ವಿಟ್ಜರ್ಲೆಂಡ್‌ನ ಜೊಹಾನ್ ನಿಕಲ್ಸ್ ಮತ್ತು ಕ್ರೊವೇಷ್ಯಾದ ಬೋರ್ನಾ ಗೊಜೊ ಕೂಡ ಎಂಟರಘಟ್ಟ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT