ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯನ್ ಓಪನ್ ಟೆನಿಸ್‌: ಸವಾಲು ಜಯಿಸಿದ ಜೊಕೊ, ಕೊಕೊ

Published 23 ಜನವರಿ 2024, 22:51 IST
Last Updated 23 ಜನವರಿ 2024, 22:51 IST
ಅಕ್ಷರ ಗಾತ್ರ

ಮೆಲ್ಬರ್ನ್: ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್‌ ಅವರು ಟೇಲರ್‌ ಫ್ರಿಟ್ಜ್‌ ಅವರ ಪ್ರಬಲ ಹೋರಾಟವನ್ನು ಪ್ರಯಾಸದಿಂದ ಬದಿಗೊತ್ತಿ ಮಂಗಳವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ 11ನೇ ಬಾರಿ ಸೆಮಿಫೈನಲ್ ತಲುಪಿದರು. ಇದಕ್ಕೆ ತದ್ವಿರುದ್ಧವಾಗಿ ಮಹಿಳಾ ವಿಭಾಗದ ಹಾಲಿ ಚಾಂಪಿಯನ್ ಅರಿನಾ ಸಬಲೆಂಕಾ ಅವರು ಅಧಿಕಾರಯುತವಾಗಿ ಗೆದ್ದು ಸೆಮಿಫೈನಲ್‌ಗೆ ದಾಪುಗಾಲಿಟ್ಟರು.

ಸರ್ಬಿಯಾದ ಜೊಕೊವಿಚ್‌ ರಾಡ್‌ ಲೇವರ್ ಅರೇನಾದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ 12ನೇ ಶ್ರೇಯಾಂಕದ ಫ್ರಿಟ್ಜ್ (ಅಮೆರಿಕ) ಅವರನ್ನು 7–6 (7–3), 4–6, 6–2, 6–3 ರಿಂದ ಸೋಲಿಸಿ ಅಭೂತಪೂರ್ವ 25ನೇ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆಯಿಟ್ಟರು. 32 ಡಿಗ್ರಿ ಬಿಸಿಲಿದ್ದು ಆಡುವುದು ತುಂಬಾ ಕಷ್ಟವಾಯಿತು ಎಂದು 36 ವರ್ಷದ ಸೂಪರ್‌ಸ್ಟಾರ್‌ ಆಟಗಾರ ಒಪ್ಪಿಕೊಂಡರು. ಅವರಿಗಿಂತ ಫ್ರಿಟ್ಜ್ 10 ವರ್ಷ ಚಿಕ್ಕವರು.

‘ದೈಹಿಕವಾಗಿ, ಭಾವನಾತ್ಮಕವಾಗಿ ತುಂಬಾ ಬಳಲಿದೆ. ಮೊದಲ ಎರಡು ಸೆಟ್‌ಗಳಲ್ಲಂತೂ ಸುಸ್ತುಹೊಡೆದಿದ್ದೆ’ ಎಂದು ಅವರು ಮೂರು ಗಂಟೆ 45 ನಿಮಿಷಗಳ ದೀರ್ಘ ಹೋರಾಟದ ನಂತರ ಪ್ರತಿಕ್ರಿಯಿಸಿದರು. ‘ಮೂರನೇ ಸೆಟ್‌ನ ಮಧ್ಯದಲ್ಲಿ ಆಟದ ಮಟ್ಟ ಎತ್ತರಿಸಿಕೊಂಡು, ಕೊನೆಯವರೆಗೂ ಉಳಿಸಿಕೊಂಡೆ’ ಎಂದು ಹೇಳಿದರು.

ಜೊಕೊವಿಚ್‌ ಅವರು ಸೆಮಿಫೈನಲ್‌ನಲ್ಲಿ, ನಾಲ್ಕನೇ ಶ್ರೇಯಾಂಕದ ಯಾನಿಕ್ ಸಿನ್ನರ್ ಅವರನ್ನು ಎದುರಿಸಲಿದ್ದಾರೆ. ಇಟಲಿಯ ಸಿನ್ನರ್‌ ಇನ್ನೊಂದು ಪಂದ್ಯದಲ್ಲಿ ಐದನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್‌ (ರಷ್ಯಾ) ಅವರನ್ನು 6–4, 7–5, 6–3ರಿಂದ ಸೋಲಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.

ಮೆಲ್ಬರ್ನ್‌ ಪಾರ್ಕ್‌ನಲ್ಲಿ ಈ ಹಿಂದೆ ಆಡಿದ ಎಲ್ಲಾ 10 ಸೆಮಿಫೈನಲ್‌ ಪಂದ್ಯಗಳಲ್ಲಿ ಜೊಕೊವಿಚ್‌ ವಿಜೇತರಾಗಿದ್ದಾರೆ. 2008ರಲ್ಲಿ ಮೊದಲ ಬಾರಿ ಟ್ರೋಫಿ ಎತ್ತಿದ್ದರು. ಸದ್ಯ 33 ಪಂದ್ಯಗಳಲ್ಲಿ ಅಜೇಯರಾಗುಳಿದಿದ್ದಾರೆ.

ಇನ್ನೊಂದೆಡೆ, ಮಹಿಳಾ ವಿಭಾಗದ ಹಾಲಿ ಚಾಂಪಿಯನ್ ಸಬಲೆಂಕಾ 6–2, 6–3 ರಿಂದ ಒಂಬತ್ತನೇ ಶ್ರೇಯಾಂಕದ ಬಾರ್ಬರಾ ಕ್ರಾಜಿಸಿಕೊವಾ ಮೇಲೆ ಗೆಲ್ಲಲು ಪ್ರಯಾಸಪಡಲಿಲ್ಲ. ಪಂದ್ಯ 71 ನಿಮಿಷ ನಡೆಯಿತು.

ಬೆಲಾರಸ್‌ ಆಟಗಾರ್ತಿಯ ಸೆಮಿಫೈನಲ್ ಎದುರಾಳಿ ನಾಲ್ಕನೇ ಶ್ರೇಯಾಂಕದ ಕೊಕೊ ಗಫ್‌. ಕಳೆದ ವರ್ಷ ಅಮೆರಿಕ ಓಪನ್ ಫೈನಲ್‌ನಲ್ಲಿ ಇವರಿಬ್ಬರು ಎದುರಾಳಿಗಳಾಗಿದ್ದರು.

ಅಮೆರಿಕದ ಕೊಕೊ, ಸುದೀರ್ಘವಾಗಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ್ತಿ, ಉಕ್ರೇನ್‌ನ ಮಾರ್ತಾ ಕೊಸ್ಟಿಯುಕ್ ಅವರನ್ನು 7–6 (8–6), 6–7 (3–7), 6–2 ರಿಂದ ಸೋಲಿಸಲು ಮೂರು ಗಂಟೆ ಬೆವರು ಹರಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT