ಬುಧವಾರ, ಜೂನ್ 29, 2022
23 °C
ಮಿಂಚಿದ ಅಮೆರಿಕದ ಅಮಾಂಡ ಅನಿಸಿಮೊವ

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಒಸಾಕಗೆ ಆಘಾತ, ಸ್ವಾಟೆಕ್‌ ಅಜೇಯ ಓಟ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್: ನಾಲ್ಕು ಬಾರಿಯ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ವಿಜೇತೆ ಜಪಾನ್‌ನ ನವೊಮಿ ಒಸಾಕ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಮಹಿಳೆಯರ ವಿಭಾಗದ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನ್ನಲಾಗುವ ಇಗಾ ಸ್ವಾಟೆಕ್ ಎರಡನೇ ಸುತ್ತು ಪ್ರವೇಶಿಸಿದರು.

ಸೋಮವಾರ ನಡೆದ ಪಂದ್ಯದಲ್ಲಿ ಒಸಾಕ 7–5, 6–4ರಲ್ಲಿ ಅಮೆರಿಕದ ಅಮಾಂಡ ಅನಿಸಿಮೊವ ಎದುರು ಸೋತರು. ಈ ಹಿಂದೆ ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿದ್ದ ಒಸಾಕ ಈಗ 38ನೇ ಸ್ಥಾನದಲ್ಲಿದ್ದಾರೆ. ಅಮಾಂಡ 28ನೇ ಸ್ಥಾನದಲ್ಲಿದ್ದು ಟೂರ್ನಿಯಲ್ಲಿ ಅವರಿಗೆ 27ನೇ ಶ್ರೇಯಾಂಕ ನೀಡಲಾಗಿದೆ. ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲೂ ಒಸಾಕ ಅವರು ಅಮಾಂಡಗೆ ಮಣಿದಿದ್ದರು. 

ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳಲು ನಿರಾಕರಿಸಿ ಕಳೆದ ಬಾರಿ ಟೂರ್ನಿಯನ್ನು ಬಹಿಷ್ಕರಿಸಿ ಒಸಾಕ ಸುದ್ದಿಯಾಗಿದ್ದರು. ಸೋಮವಾರದ ಪಂದ್ಯದಲ್ಲಿ ಎಂಟು ಡಬಲ್‌ ಫಾಲ್ಟ್‌ಗಳನ್ನು ಎಸಗಿದ ಅವರು 29 ಸ್ವಯಂ ತಪ್ಪುಗಳನ್ನು ಮಾಡಿದರು. ಅಮಾಂಡ ಮೂರು ವರ್ಷಗಳ ಹಿಂದೆ ಫ್ರೆಂಚ್ ಓಪನ್‌ನ ಸೆಮಿಫೈನಲ್ ಪ್ರವೇಶಿಸಿದ್ದರು.  

ಸ್ವಾಟೆಕ್‌ ಅಜೇಯ ಓಟ
ಪೋಲೆಂಡ್‌ನ ಇಗಾ ಸ್ವಾಟೆಕ್ ಅರ್ಹತಾ ಸುತ್ತಿನಲ್ಲಿ ಆಡಿ ಬಂದಿದ್ದ ಉಕ್ರೇನ್‌ನ ಲಿಸಿಯಾ ಸುರೆಂಕೊ ವಿರುದ್ಧ 6-2, 6-0ಯಿಂದ ಗೆದ್ದು ಸತತ 29 ಪಂದ್ಯಗಳಲ್ಲಿ ಜಯ ಗಳಿಸಿದ ಸಾಧನೆ ಮಾಡಿದರು. ಫಿಲಿಪ್ ಚಾಟ್ರಿಯರ್ ಅಂಗಣದ ಹೊರಗೆ ಮಳೆ ಸುರಿಯುತ್ತಿದ್ದರೆ, ಒಳಗೆ ಅಮೋಘ ಆಟವಾಡಿದ ಸ್ವಾಟೆಕ್ 54 ನಿಮಿಷಗಳಲ್ಲಿ ಎದುರಾಳಿಯನ್ನು ಮಣಿಸಿದರು. 

ಆ್ಯಶ್ಲಿ ಬಾರ್ಟಿ ದಿಢೀರ್ ನಿವೃತ್ತಿ ಪ್ರಕಟಿಸಿದ ನಂತರ ವಿಶ್ವ ಕ್ರಮಾಂಕದ ಒಂದನೇ ಸ್ಥಾನಕ್ಕೇರಿರುವ 20 ವರ್ಷದ ಸ್ವಾಟೆಕ್ ಈ ಹಿಂದೆ ಆಡಿರುವ ಐದು ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. 2020ರಲ್ಲಿ ಅವರು ಚಾಂಪಿಯನ್ ಆಗಿದ್ದರು.

ಎರಡು ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವ ಅವರು ಹಂಗರಿಯ ಅನಾ ಬೋಂದಾರ್ ವಿರುದ್ಧ ಗೆದ್ದು ಎರಡನೇ ಸುತ್ತಿಗೆ ಲಗ್ಗೆ ಇರಿಸಿದರು. ಮುಂದಿನ ಹಂತದಲ್ಲಿ ಅವರು ಆಸ್ಟ್ರೇಲಿಯಾದ ದರಿಯಾ ಸವಿಲ್ಲೆ ವಿರುದ್ಧ ಸೆಣಸುವರು. ‌

ಫಲಿತಾಂಶಗಳು: ಮಹಿಳೆಯರ ವಿಭಾಗ
* ಪೋಲೆಂಡ್‌ನ ಇಗಾ ಸ್ವಾಟೆಕ್‌ಗೆ ಉಕ್ರೆನ್‌ನ ಲಿಸಾ ಸುರೆಂಕೊ ವಿರುದ್ಧ 6-2, 6-0ರಲ್ಲಿ ಜಯ
* ಅಮೆರಿಕದ ಅಮಾಂಡ ಅನಿಸಿನಿಮೊವಗೆ ಜಪಾನ್‌ನ ನವೊಮಿ ಒಸಾಕ ವಿರುದ್ಧ 7-5, 6-4ರಲ್ಲಿ ಗೆಲುವು
* ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಗೆ ಹಂಗರಿಯ ಅನಾ ಬೋಂದಾರ್‌ ಎದುರು 7-6 (7/0), 6-1ರಲ್ಲಿ ಜಯ
* ಆಸ್ಟ್ರೇಲಿಯಾದ ದರಿಯಾ ಸವಿಲ್ಲೆಗೆ ಗ್ರೀಸ್‌ನ ವೆಲೆಂಟಿನಿ ಗ್ರಾಮಟಿಕೊಪೊಲು ವಿರುದ್ಧ 6-1, 6-2ರಲ್ಲಿ ಜಯ
* ಚೀನಾದ ಜೆಂಗ್ ಕ್ವಿವೆನ್‌ಗೆ ಬೆಲ್ಜಿಯಂನ ಮರಿನಾ ಜನೆವ್‌ಸ್ಕ ವಿರುದ್ಧ 6-3, 6-1ರಲ್ಲಿ ಗೆಲುವು
* ಇಟಲಿಯ ಮಾರ್ಟಿನಾ ಟ್ರೆವಿಸನ್‌ಗೆ ಬ್ರಿಟನ್‌ನ ಹರಿಯೆಟ್‌ ಡಾರ್ಟ್‌ ವಿರುದ್ಧ 6-0, 6-2ರಲ್ಲಿ ಜಯ
* ಜರ್ಮನಿಯ ಆ್ಯಂಡ್ರಿಯಾ ಪೆಟ್ಕೊವಿಚ್‌ಗೆ ಫ್ರಾನ್ಸ್‌ನ ಒಶಿಯಾನಿ ದೊಡಿನ್‌ ವಿರುದ್ಧ 6-4, 6-2ರಲ್ಲಿ ಜಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು