ಬುಧವಾರ, ಜೂನ್ 29, 2022
23 °C
ಪತ್ರಿಕಾಗೋಷ್ಠಿಗೆ ಹಾಜರಾಗುವುದಿಲ್ಲ ಎಂಬ ವಿವಾದಕ್ಕೆ ಕಹಿ ಅಂತ್ಯ

ಟೆನಿಸ್‌: ಫ್ರೆಂಚ್‌ ಓಪನ್‌ನಿಂದ ಹಿಂದೆ ಸರಿದ ಒಸಾಕಾ

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ವಿಶ್ವದ ಎರಡನೇ ಕ್ರಮಾಂಕದ ಆಟಗಾರ್ತಿ ನವೊಮಿ ಒಸಾಕಾ ಅವರು ಮಾನಸಿಕ ಆರೋಗ್ಯದ ಕಾರಣ ನೀಡಿ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಆ ಮೂಲಕ ಜಪಾನ್‌ನ ಆಟಗಾರ್ತಿ ಮತ್ತು ಟೆನಿಸ್‌ನ ನಾಲ್ಕು ಗ್ರ್ಯಾಂಡ್‌ಸ್ಲಾಮ್‌ ಟೂರ್ನಿ ಅಧಿಕಾರಿಗಳ ನಡುವಣ ವಾರದಿಂದ ನಡೆಯುತ್ತಿದ್ದ ಕಲಹ ಸೋಮವಾರ ನಾಟಕೀಯ ಅಂತ್ಯ ಕಂಡಿತು.

ವಿಶ್ವದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ಮಹಿಳಾ ಕ್ರೀಡಾ ತಾರೆಯಾಗಿರುವ ಒಸಾಕಾ ಟೆನಿಸ್‌ನಲ್ಲಿ ಅತ್ಯಲ್ಪ ಅವಧಿಯಲ್ಲಿ ಆಕರ್ಷಣೆಯ ತಾರೆಯಾಗಿ ಬೆಳೆದವರು. ಆದರೆ ಟೆನಿಸ್‌ನ ಅತಿ ಪ್ರಭಾವಶಾಲಿ ಅಧಿಕಾರಿಗಳ ಜೊತೆಗಿನ ಸಂಘರ್ಷ 23 ವರ್ಷದ ಆಟಗಾರ್ತಿಯ ಮೇಲೆ ಒತ್ತಡ ಉಂಟುಮಾಡಿತ್ತು. ಫ್ರೆಂಚ್‌ ಓಪನ್‌ ಟೂರ್ನಿಯ ಅವಧಿಯಲ್ಲಿ ತಾವು ಯಾವುದೇ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಒಸಾಕಾ ಕಳೆದ ವಾರ ಹೇಳಿದ್ದರು.

‘ನಾನು ಹಿಂದೆ ಸರಿಯುವುದು, ಟೂರ್ನಿಯ, ಇತರ ಆಟಗಾರರ ಮತ್ತು ನನ್ನ ಸ್ವಾಸ್ಥ್ಯದ ದೃಷ್ಟಿಯಿಂದ ಉತ್ತಮ. ಇದರಿಂದ ಪ್ಯಾರಿಸ್‌ನಲ್ಲಿ ಎಲ್ಲ ಆಟಗಾರರು ಟೆನಿಸ್‌ ಆಟದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬಹುದು’ ಎಂದು ಒಸಾಕಾ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ತಾವು ಖಿನ್ನತೆ ಮತ್ತು ಉದ್ವೇಗದಿಂದ ತೊಳಲಾಡುತ್ತಿರುವುದಾಗಿ ಆ ಪೋಸ್ಟ್‌ನಲ್ಲಿ ಬರೆದಿದ್ದಾರೆ.

‘ಟೂರ್ನಿಯ ವೇಳೆ ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವುದಿಲ್ಲ. ಅಲ್ಲಿ ಕೇಳುವ ನಕಾರಾತ್ಮಕ ಪ್ರಶ್ನೆಗಳಿಂದ ತಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂದು ಒಸಾಕಾ ಕಳೆದ ಬುಧವಾರ ಹೇಳಿದ್ದರು. ಇದು ಈ ಆಟಗಾರ್ತಿ ಮತ್ತು ಟೂರ್ನಿಯ ಅಧಿಕಾರಿಗಳ ನಡುವೆ ವಿವಾದ ಶುರುವಾಗಿತ್ತು. ಇದಾಗಿ ಒಂದೇ ಗಂಟೆಯಲ್ಲಿ ಒಸಾಕಾ ಅವರಿಗೆ 15 ಸಾವಿರ ಡಾಲರ್‌ ದಂಡ ವಿಧಿಸಲಾಗಿತ್ತು.

ಮಾಧ್ಯಮಕ್ಕೆ ಸಂಬಂಧಿಸಿ ಒಸಾಕಾ ಹೊಣೆಗಾರಿಕೆಯಿಂದ ನುಣುಚಿಕೊಂಡರೆ ಅವರಿಗೆ ಭಾರಿ ದಂಡ ವಿಧಿಸಲಾಗುವುದು ಮತ್ತು ಟೂರ್ನಿಯಿಂದ ಹೊರಗಟ್ಟಲಾಗುವುದು ಎಂದು ಆಸ್ಟ್ರೇಲಿಯನ್‌, ಫ್ರೆಂಚ್‌, ಅಮೆರಿಕ ಓಪನ್‌ ಮತ್ತು ವಿಂಬಲ್ಡನ್‌ ಟೂರ್ನಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.

ಆದರೆ ಜಪಾನ್‌ನ ಕ್ರೀಡಾಪ್ರೇಮಿಗಳು ಒಸಾಕಾ ಬೆಂಬಲಕ್ಕೆ ನಿಂತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು