ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್‌ ಕಪ್‌ ಟೆನಿಸ್‌: ಪಾಕ್‌ ವಿರುದ್ಧ ಭಾರತಕ್ಕೆ 4–0 ಗೆಲುವು

ವಿಶ್ವ ಗುಂಪಿಗೆ ಅರ್ಹತೆ
Last Updated 30 ನವೆಂಬರ್ 2019, 18:47 IST
ಅಕ್ಷರ ಗಾತ್ರ

ನೂರ್‌ ಸುಲ್ತಾನ್‌, ಕಜಕ್‌ಸ್ತಾನ: ಹಿರಿಯ ಆಟಗಾರ ಲಿಯಾಂಡರ್‌ ಪೇಸ್‌ ಡೇವಿಸ್‌ ಕಪ್‌ ಡಬಲ್ಸ್‌ನಲ್ಲಿ 44ನೇ ಗೆಲುವನ್ನು ಪಡೆದು ತಮ್ಮದೇ ದಾಖಲೆಯನ್ನು ಉತ್ತಮಪಡಿಸಿದರು. ಜೀವನ್‌ ನೆಡುಂಚೆಳಿಯನ್‌ ಜೊತೆಗೂಡಿ ಅವರು ಶನಿವಾರ ಗಳಿಸಿದ ಗೆಲುವಿನಿಂದ ಭಾರತ ನಿರೀಕ್ಷೆಯಂತೆ 4–0 ಅಂತರದಿಂದ ಪಾಕಿಸ್ತಾನ ತಂಡವನ್ನು ಸದೆಬಡಿಯಿತು.

ಈ ಗೆಲುವಿನೊಡನೆ ಭಾರತ ಮುಂದಿನ ವರ್ಷ ಡೇವಿಸ್‌ ಕಪ್‌ ಟೆನಿಸ್‌ ವಿಶ್ವ ಗುಂಪಿನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಂಡಿತು. ಹಳೆಯ ಹುಲಿ ಪೇಸ್‌– ಉತ್ಸಾಹಿ ಯುವಕ ಜೀವನ್‌ ಜೋಡಿಗೆ ಪಾಕ್‌ ತಂಡದ ಹದಿಹರೆಯದ ಆಟಗಾರರಾದ ಮೊಹಮ್ಮದ್‌ ಶೋಯೆಬ್‌– ಹುಫೈಜಾ ಅಬ್ದುಲ್‌ ರೆಹಮಾನ್‌ ಅವರಿಂದ ಹೆಚ್ಚು ಪ್ರತಿರೋಧ ಎದುರಾಗಲಿಲ್ಲ. ಭಾರತದ ಜೋಡಿ 6–1, 6–3 ರಿಂದ ಜಯಗಳಿಸಿತು.

ಪೇಸ್‌, ಡೇವಿಸ್‌ ಕಪ್‌ ಡಬಲ್ಸ್‌ನಲ್ಲಿ 44ನೇ ಗೆಲುವಿನಿಂದ ಅತ್ಯಂತ ಯಶಸ್ವಿ ಆಟಗಾರ ಎನಿಸಿದರು. ಇಟಲಿಯ ಆಟಗಾರ ನಿಕೊಲಾ ಪೀಟ್ರಾಂಗೆಲಿ ಅವರ 42 ಗೆಲುವಿನ ದಾಖಲೆಯನ್ನು ಅವರು ಮುರಿದರು. 42 ವರ್ಷ ವಯಸ್ಸಿನ ಪೇಸ್‌ 56 ಪಂದ್ಯಗಳನ್ನು ಆಡಿದ್ದರೆ, ಪೀಟ್ರಾಂಗೆಲಿ 66 ಪಂದ್ಯಗಳನ್ನು (1960 ಮತ್ತು 70’ರ ದಶಕದ ಅವಧಿ) ಆಡಿದ್ದಾರೆ.

ಬೆಲಾರಸ್‌ನ ಮ್ಯಾಕ್ಸ್‌ ಮಿರ್ನಿ 36 ಗೆಲುವನ್ನು ಕಂಡಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ಅವರು 2018ರ ನಂತರ ಯಾವುದೇ ಪಂದ್ಯಗಳನ್ನು ಆಡಿಲ್ಲ. ಹೀಗಾಗಿ ಪೇಸ್‌ ಅವರ ದಾಖಲೆ ಸದ್ಯಕ್ಕೆ ಸುರಕ್ಷಿತವಾಗಿ ಉಳಿಯುವಂತೆ ಕಾಣುತ್ತಿದೆ.

‘ಡೇವಿಸ್‌ ಕಪ್‌ ಪಂದ್ಯದಲ್ಲಿ ಮೊದಲ ಬಾರಿ ಪಾಲ್ಗೊಂಡ ಜೀವನ್‌ ಜೊತೆ ಆಡುವುದು ಖುಷಿ ಎನಿಸಿತು. ಆರಂಭದಿಂದಲೇ ಚೆನ್ನಾಗಿ ಆಡಿದ. ಅವನ ಜೊತೆ ಅಂಕಣ ಹಂಚಿಕೊಂಡಿದ್ದು ಹೆಮ್ಮೆ ಮೂಡಿಸಿತು’ ಎಂದು ಕಿರಿಯ ಜೊತೆಗಾರನ ಬಗ್ಗೆ ಪೇಸ್‌ ಪ್ರಶಂಸೆಯ ಮಾತುಗಳನ್ನಾಡಿದರು.

ರಿವರ್ಸ್‌ ಸಿಂಗಲ್ಸ್‌ ಪಂದ್ಯದಲ್ಲಿ ಸುಮಿತ್‌ ನಗಾಲ್‌ 6–1, 6–0 ಯಿಂದ ಯೂಸುಫ್‌ ಖಲೀಲ್‌ ಅವರನ್ನು ಸೋಲಿಸಿದರು. ಭಾರತ 4–0 ಗೆಲುವಿನ ಅಂತರ ಸಾಧಿಸಿದ್ದ ಕಾರಣ ಔಪಚಾರಕ್ಕಷ್ಟೇ ಆಡಬೇಕಾಗಿದ್ದ ಕೊನೆಯ ಸಿಂಗಲ್ಸ್‌ ಆಡದೇ ಇರಲು ಉಭಯ ತಂಡಗಳು ನಿರ್ಧರಿಸಿದವು.

ಭಾರತ, 2014 ಫೆಬ್ರುವರಿ ನಂತರ ಮೊದಲ ಬಾರಿ ಡೇವಿಸ್‌ ಕಪ್‌ನಲ್ಲಿ ಎದುರಾಳಿಗಳ ವಿರುದ್ಧ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಂತಾಯಿತು. ಆ ವರ್ಷ ಚೀನಾ ತೈಪಿ ವಿರುದ್ಧ ಭಾರತ ಇಂದೋರ್‌ನಲ್ಲಿ 5–0 ಅಂತರದ ಜಯಗಳಿಸಿತ್ತು.

ಭಾರತ, ಮುಂದಿನ ವರ್ಷ ನಡೆಯುವ ವಿಶ್ವ ಗುಂಪಿನ ಪಂದ್ಯದಲ್ಲಿ ಕ್ರೊವೇಷಿಯಾ ವಿರುದ್ಧ ಅಲ್ಲಿಯೇ ಆಡಲಿದೆ. ಡೇವಿಸ್‌ ಕಪ್‌ ಫೈನಲ್‌ ಹಂತದಲ್ಲಿ 12 ತಂಡಗಳಿಗೆ ಆಡುವ ಅವಕಾಶವಿದೆ. ಇದಕ್ಕಾಗಿ 24 ತಂಡಗಳು ಸೆಣಸಲಿವೆ. ಸೋಲುವ 12 ತಂಡಗಳು, 2020ರ ಸೆಪ್ಟೆಂಬರ್‌ನಲ್ಲಿ ವಿಶ್ವ ಗುಂಪು 1ರಲ್ಲಿ ಆಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT