ಭಾನುವಾರ, ಆಗಸ್ಟ್ 25, 2019
21 °C

ಲಾಸ್‌ ಕ್ಯಾಬೋಸ್‌ ಟೆನಿಸ್‌: ಭಾರತದ ಪ್ರಜ್ಞೇಶ್‌ಗೆ ಸೋಲು

Published:
Updated:

ಲಾಸ್‌ ಕ್ಯಾಬೊಸ್‌, ಮೆಕ್ಸಿಕೊ: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌, ಎಟಿಪಿ ಲಾಸ್‌ ಕ್ಯಾಬೊಸ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಗುರುವಾರ, 28ನೇ ಕ್ರಮಾಂಕದ ಆಟಗಾರ ಟೇಲರ್‌ ಫ್ರಿಟ್ಜ್‌ ಎದುರು ಸೋಲನುಭವಿಸಿದರು.

ವಿಶ್ವ ಕ್ರಮಾಂಕದಲ್ಲಿ 90ನೇ ಸ್ಥಾನದಲ್ಲಿರುವ ಎಡಗೈ ಆಟಗಾರ ಫ್ರಜ್ಞೇಶ್‌ 6–4, 3–6, 2–6ರಲ್ಲಿ ಅಮೆರಿಕದ ಟೇಲರ್ ಅವರಿಗೆ ಮಣಿದರು. ಇಲ್ಲಿ 20 ಎಟಿಪಿ ಪಾಯಿಂಟ್ಸ್‌ ಸಂಗ್ರಹಿಸಿದ ಪ್ರಜ್ಞೇಶ್‌ ಈಗ ಎರಡು ಕ್ರಮಾಂಕದಲ್ಲಿ ಎರಡು ಸ್ಥಾನ ಮೇಲೇರಲಿದ್ದಾರೆ. ಅವರಿಗೆ ₹ 8.97 ಲಕ್ಷ  (12,825 ಡಾಲರ್‌) ಬಹುಮಾನವೂ ದೊರೆಯಿತು.

ಇದೇ ವೇಳೆ ದಿವಿಜ್‌ ಶರಣ್‌ ಮತ್ತು ಜೊನಾಥನ್‌ ಎಲ್ರಿಚ್‌ ಜೋಡಿ 7–5, 6–1ರಲ್ಲಿ ನೇರ ಸೆಟ್‌ಗಳಿಂದ ನಾಲ್ಕನೇ ಶ್ರೇಯಾಂಕದ ಬೆನ್‌ ಮೆಕ್‌ಲಾಚ್ಲನ್‌– ಜಾನ್‌ ಪ್ಯಾಟ್ರಿಕ್‌ ಸ್ಮಿತ್‌ ಜೋಡಿಯನ್ನು ಹಿಮ್ಮೆಟ್ಟಿಸಿ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯಿತು. 

ವಾಷಿಂಗ್ಟನ್‌ನಲ್ಲಿ ನಡೆದ ಎಟಿಪಿ 500 ಸಿಟಿ ಓಪನ್‌ ಟೂರ್ನಿಯಲ್ಲಿ ವೈಲ್ಡ್‌ ಕಾರ್ಡ್ ಪಡೆದಿದ್ದ ಲಿಯಾಂಡರ್‌ ಪೇಸ್‌ – ಜಾಕ್‌ ಸಾಕ್‌ ಜೋಡಿ ಗುರುವಾರ 5–7, 2–6 ರಿಂದ ಆಸ್ಟ್ರೇಲಿಯಾದ ಅಲೆಕ್ಸ್‌ ಡಿ ಮಿನಾರ್‌– ಜಾನ್‌ ಪೀರ್ಸ್‌ ಎದುರು ಸೋಲನುಭವಿಸಿತು.

ಇದಕ್ಕೆ ಮೊದಲು ರೋಹನ್‌ ಬೋಪಣ್ಣ–ಬೆನೊಯಿ ಪೈರೆ ಜೋಡಿ ಎರಡನೇ ಸುತ್ತಿನಲ್ಲಿ 6–2, 3–6, 8–10ರಲ್ಲಿ ಮ್ಯಾಥ್ಯೂ ಎಬ್ಡೆನ್‌– ನಿಕೋಲಸ್‌ ಮೊನ್ರೊ ಎದುರು ಮಣಿಯಿತು.

Post Comments (+)