ಸೋಮವಾರ, ಜನವರಿ 17, 2022
18 °C
ಮಹಿಳೆಯರ ಅಂತರರಾಷ್ಟ್ರೀಯ ಟೆನಿಸ್ ಟೂರ್ ಚಾಂಪಿಯನ್‌ಷಿಪ್: ಸೆಮಿಗೆ ಋತುಜಾ

ಟೆನಿಸ್ | ವೈದೇಹಿ ಸವಾಲು ಮೀರಿದ ಪ್ರಾಂಜಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತ್ಯಮೋಘ ಆಟವಾಡಿದ ಪ್ರಾಂಜಲ ಯಡ್ಲಪಲ್ಲಿ ಅವರು ಕೆಎಸ್‌ಎಲ್‌ಟಿಎ ಆಶ್ರಯದಲ್ಲಿ ನಡೆಯುತ್ತಿರುವ ಮಹಿಳೆಯರ ಐಟಿಎಫ್‌ ವಿಶ್ವ ಟೆನಿಸ್ ಟೂರ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿದರು. ಅರನೇ ಶ್ರೇಯಾಂಕಿತೆ ವೈದೇಹಿ ಚೌಧರಿ ಅವರ ಸವಾಲನ್ನು ಮೀರಿದ ನಾಲ್ಕನೇ ಶ್ರೇಯಾಂಕದ ಪ್ರಾಂಜಲ 6-7 (3), 6-4, 6-4ರಲ್ಲಿ ಗೆಲುವು ಸಾಧಿಸಿದರು.

ಕೆಎಸ್‌ಎಲ್‌ಟಿಎ ಅಂಗಣದಲ್ಲಿ ಶುಕ್ರವಾರ ನಡೆದ ಎರಡು ತಾಸು 27 ನಿಮಿಷಗಳ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 22 ವರ್ಷದ ಪ್ರಾಂಜಲ ಮೊದಲ ಸೆಟ್‌ ಸೋತಿದ್ದರು. ನಂತರ ಚೇತರಿಸಿಕೊಂಡು ಗೆಲುವಿನ ಹಾದಿಯಲ್ಲಿ ಮುನ್ನಡೆದರು.

ಆರಂಭದಲ್ಲೇ ಸರ್ವ್ ಕಳೆದುಕೊಂಡು ನಿರಾಸೆಗೊಂಡ ಪ್ರಾಂಜಲ 0–2ರ ಹಿನ್ನಡೆಯಲ್ಲಿದ್ದರು. ನಂತರ ಚೇತರಿಸಿಕೊಂಡರೂ ತಪ್ಪುಗಳನ್ನು ಎಸಗಿದ್ದರಿಂದ ಎದುರಾಳಿಗೆ ಪಾಯಿಂಟ್ ಗಳಿಸಲು ಅನುಕೂಲವಾಯಿತು. ಸೆಟ್‌ನ ಫಲಿತಾಂಶ ನಿರ್ಣಯಕ್ಕೆ ಟೈ ಬ್ರೇಕರ್ ಮೊರೆಹೋಗಬೇಕಾಯಿತು. ಅದರಲ್ಲಿ ವೈದೇಹಿ ಯಶಸ್ಸು ಸಾಧಿಸಿದರು.

ಎರಡನೇ ಸೆಟ್‌ ಜಿದ್ದಾಜಿದ್ದಿಯ ಹಣಾಹಣಿಗೆ ಸಾಕ್ಷಿಯಾಯಿತು. ಒಂಬತ್ತನೇ ಗೇಮ್ ವರೆಗೆ ಇಬ್ಬರೂ ಪಟ್ಟು ಬಿಡದೆ ಕಾದಾಡಿದರು. ನಂತರ ಮೇಲುಗೈ ಸಾಧಿಸಿದ ಪ್ರಾಂಜಲ 6–4ರಲ್ಲಿ ಸೆಟ್‌ ತಮ್ಮದಾಗಿಸಿಕೊಂಡರು.  ‌

ನಿರ್ಣಾಯಕ ಸೆಟ್‌ನಲ್ಲೂ ಪ್ರಾಂಜಲ್ ತಪ್ಪುಗಳನ್ನು ಎಸಗಿದರು. ಹೀಗಾಗಿ 2–3ರ ಹಿನ್ನಡೆ ಅನುಭವಿಸಿದರು. ಮುಂದಿನ ಮೂರು ಗೇಮ್‌ಗಳಲ್ಲಿ ಗೆಲುವು ಸಾಧಿಸಿದ ಅವರು 5–3ರಲ್ಲಿ ಮುನ್ನುಗ್ಗಿದರು. ಗುಜರಾತ್‌ನ ವೈದೇಹಿ ಚೆಂಡನ್ನು ನೆಟ್ ಮೇಲೆ ಹಾಕಿ ಕೊನೆಯ ಎರಡು ಪಾಯಿಂಟ್‌ಗಳನ್ನು ಕಳೆದುಕೊಂಡರು. ಇದರಿಂದ ಪ್ರಾಂಜಲ ಹಾದಿ ಸುಗಮವಾಯಿತು.

ಅಗ್ರ ಶ್ರೇಯಾಂಕದ ಋತುಜಾ ಭೋಸಲೆ ಅವರಿಗೆ ಎರಡನೇ ಸೆಟ್‌ನಲ್ಲಿ ಕಠಿಣ ಸವಾಲು ಎದುರಾಯಿತು. ಅರ್ಹತಾ ಸುತ್ತಿನ ಮೂಲಕ ಬಂದಿದ್ದ ಪ್ರತ್ಯೂಷಾ ರಾಚಪುಡಿ ಎದುರಿನ ಪಂದ್ಯದಲ್ಲಿ ಅವರು 6-0, 6-3ರಲ್ಲಿ ಜಯ ಸಾಧಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಅವರು ಮೂರನೇ ಶ್ರೇಯಾಂಕದ ಸೌಜನ್ಯ ಬಾವಿಸೆಟ್ಟಿ ಅವರನ್ನು ಎದುರಿಸುವರು. ಏಳನೇ ಶ್ರೇಯಾಂಕಿತೆ, ಕೊರಿಯಾದ ಸೊ ರಾ ಲೀ ವಿರುದ್ಧದ ‍ಪಂದ್ಯದಲ್ಲಿ ಸೌಜನ್ಯ 6-0, 6-4ರ ಜಯ ಸಾಧಿಸಿದ್ದರು.

ಅರ್ಹತಾ ಸುತ್ತಿನಲ್ಲಿ ಗೆದ್ದು ಮುಖ್ಯ ಸುತ್ತು ಪ್ರವೇಶಿಸಿದ್ದ ಶ್ರೀವಲ್ಲಿ ರಶ್ಮಿಕಾ ಭಾಮಿಪತಿ ಮತ್ತು ಆಕಾಂಕ್ಷ ನಿಟ್ಟುರೆ ಕೂಡ ಪ್ರಬಲ ಪೈಪೋಟಿ ನಡೆಸಿದರು. ಶ್ರೀವಲ್ಲಿ 7-6 (4), 6-4ರಲ್ಲಿ ಜಯ ಗಳಿಸಿದರು.

ವೈದೇಹಿ–ಮಿಹಿಕಾ ಜೋಡಿಗೆ ಜಯ

ಡಬಲ್ಸ್‌ನಲ್ಲಿ ವೈದೇಹಿ ಜೋಡಿ ಪಾರಮ್ಯ ಮೆರೆಯಿತು. ಮಿಹಿಕಾ ಯಾದವ್ ಅವರ ಜೊತೆಗೂಡಿ ಆಡಿದ ವೈದೇಹಿ ನಾಲ್ಕನೇ ಶ್ರೇಯಾಂಕದ ಶರ್ಮಡಾ ಬಾಲು ಮತ್ತು ಶ್ರವ್ಯ ಶಿವಾನಿ ಚಿಲಕಪುಡಿ ಅವರನ್ನು 6-1, 3-6, 10-7 ರಲ್ಲಿ ಮಣಿಸಿದರು. ಸಾಯಿ ಸಂಹಿತಾ–ಸಾದಿಕ್ ಸೋಹಾ ಮತ್ತು ಸೌಜನ್ಯ ಬಾವಿಸೆಟ್ಟಿ–ಋತುಜಾ ಭೋಸಲೆ ಜೋಡಿಯ ಹಣಾಹಣಿಗೆ ಮಳೆ ಅಡ್ಡಿಯಾಯಿತು. ಪಂದ್ಯ ನಿಂತಾಗ ಸೌಜನ್ಯ–ಋತುಜಾ 5–4ರ ಮುನ್ನಡೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು