ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಸ್‌ ಓಪನ್ ಫೈನಲ್: ಗ್ರ್ಯಾನ್‌ ಸ್ಲಾಂ ಅಂಗಣದ ಹೊಸ ದೊರೆ ಥೀಮ್‌

ಜ್ವೆರೆವ್‌ಗೆ ಸೋಲುಣಿಸಿದ ಆಸ್ಟ್ರಿಯಾ ಆಟಗಾರ; ಎರಡು ಹೊಸ ದಾಖಲೆ
Last Updated 14 ಸೆಪ್ಟೆಂಬರ್ 2020, 16:52 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಮೂರು ಫೈನಲ್‌ಗಳಲ್ಲಿ ನಿರಾಸೆ ಅನುಭವಿಸಿದ್ದ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಚಾಂಪಿಯನ್ ಆದರು. ಈ ಮೂಲಕ ಮೊದಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯ ಸಂಭ್ರಮದ ಅಲೆಯಲ್ಲಿ ಮಿಂದರು.

ಇಲ್ಲಿನ ಆರ್ಥರ್ ಆ್ಯಶ್ ಅಂಗಣದಲ್ಲಿ ಭಾನುವಾರ ತಡರಾತ್ರಿ (ಭಾರತೀಯ ಕಾಲಮಾನ) ನಡೆದಿದ್ದ ಜಿದ್ದಾಜಿದ್ದಿಯ ಹಣಾಹಣಿಯಲ್ಲಿ ಥೀಮ್, ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಮಣಿಸಿದರು. ನಾಲ್ಕು ತಾಸು ಎರಡು ನಿಮಿಷಗಳ ರೋಚಕ ಹಣಾಹಣಿಯಲ್ಲಿ ಮೊದಲು ಹಿನ್ನಡೆ ಅನುಭವಿಸಿದರೂ ಛಲದಿಂದ ಕಾದಾಡಿ ಗೆಲುವು ಸಾಧಿಸಿದರು. ಅಮೆರಿಕ ಓಪನ್ ಫೈನಲ್‌ನಲ್ಲಿ ಮೊದಲ ಎರಡು ಸೆಟ್‌ಗಳ ಹಿನ್ನಡೆಯಿಂದ ಚೇತರಿಸಿಕೊಂಡು ಜಯ ಸಾಧಿಸಿದ್ದು ಮತ್ತು ಟೈಬ್ರೇಕರ್‌ನಲ್ಲಿ ಚಾಂಪಿಯನ್‌ಷಿಪ್ ಪಾಯಿಂಟ್ ಗಳಿಸಿದ್ದು ಇದೇ ಮೊದಲು.

ಅಮೆರಿಕ ಓಪನ್‌ನಲ್ಲಿ 2014ರ ನಂತರ ಮತ್ತು ಒಟ್ಟಾರೆಗ್ರ್ಯಾನ್‌ ಸ್ಲಾಂ ಟೂರ್ನಿಗಳಲ್ಲಿ 2016ರ ನಂತರ ಸರ್ಬಿಯಾದ ನೊವಾಕ್ ಜೊಕೊವಿಚ್, ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಅವರದೇ‌ ಆಧಿಪತ್ಯವಿತ್ತು.ಅಮೆರಿಕ ಓಪನ್‌ನಲ್ಲಿ ಕ್ರೊವೇಷ್ಯಾದ ಮರಿನ್ ಸಿಲಿಕ್ ಮತ್ತು ಇತರ ಟೂರ್ನಿಗಳಲ್ಲಿ ಸ್ಟಾನ್ ವಾವ್ರಿಂಕಾ ಈ ತ್ರಿವಳಿಗಳ ಹೊರತಾಗಿ ಕೊನೆಯದಾಗಿ ಪ್ರಶಸ್ತಿ ಗೆದ್ದಿದ್ದರು. ಈಗ ಥೀಮ್ ಅವರು ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗೆ ಹೊಸ ಒಡೆಯ.

ಆರಂಭದಲ್ಲಿ ಜ್ವೆರೆವ್ ಭರ್ಜರಿ ಆಟ:23 ವರ್ಷದ ಜ್ವೆರೆವ್ ಆರಂಭದಲ್ಲಿ ಅಮೋಘ ಆಟವಾಡಿ ಎದುರಾಳಿಯನ್ನು ಕಂಗೆಡಿಸಿದರು. ಮೊದಲ ಸೆಟ್‌ನಲ್ಲಿ ‌ನಾಲ್ಕು ಏಸ್ ಸಿಡಿಸಿದ ಅವರು ಅರ್ಧ ತಾಸಿನಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಮೂರು ಮತ್ತು ಏಳನೇ ಗೇಮ್‌ಗಳಲ್ಲಿ ಎರಡು ಬಾರಿ ಎದುರಾಳಿಯ ಸರ್ವ್‌ ಮುರಿದರು.

ಎರಡನೇ ಸೆಟ್‌ನಲ್ಲಿ 5–1ರ ಮುನ್ನಡೆ ಗಳಿಸಿದ್ದ ಜ್ವೆರೆವ್ ಮೂರು ಬಾರಿ ಸೆಟ್‌ಪಾಯಿಂಟ್‌ಗಳನ್ನು ಕಳೆದುಕೊಂಡರು. ಆದರೂ ಎದೆಗುಂದದೆ ಮುನ್ನುಗ್ಗಿದರು.

ಮೂರು ಮತ್ತು ನಾಲ್ಕನೇ ಸೆಟ್‌ನಲ್ಲಿ ಪಂದ್ಯದ ಗತಿ ಬದಲಾಯಿತು. ಜ್ವೆರೆವ್‌ ತಮ್ಮ ಸರ್ವ್‌ಗಳಲ್ಲಿ ಮುಗ್ಗರಿಸಿದರು. ಫೋರ್ ಹ್ಯಾಂಡ್ ಹೊಡೆತಗಳಲ್ಲಿ ಅವರಿಗಿರುವ ದೌರ್ಬಲ್ಯ ಹೆಚ್ಚು ಕಾಡಿತು. ‌ಆದರೆ ಐದನೇ ಸೆಟ್‌ನಲ್ಲಿ ಚೇತರಿಸಿಕೊಂಡರು.

ಒಂದು ಹಂತದಲ್ಲಿ 5–3ರ ಮುನ್ನಡೆಯಲ್ಲಿದ್ದ ಅವರು ಚಾಂಪಿಯನ್‌ಷಿಪ್‌ಗಾಗಿ ಸರ್ವ್ ಮಾಡಲು ಸಜ್ಜಾಗಿದ್ದರು. ಆದರೆ ಕೆಚ್ಚೆದೆಯ ಆಟದ ಮೂಲಕ ಅವರ ಕನಸನ್ನು ನುಚ್ಚುನೂರು ಮಾಡಿದ ಥೀಮ್ 6–5ರ ಮುನ್ನಡೆ ಗಳಿಸಿ ತಿರುಗೇಟು ನೀಡಿದರು. ಅವರಿಗೂ ಗೆಲುವು ಸುಲಭವಾಗಿರಲಿಲ್ಲ. ಈಗಾಗಿ ಪಂದ್ಯ ಟೈಬ್ರೇಕರ್‌ಗೆ ಸಾಗಿತು. ಅಲ್ಲಿ ಥೀಮ್ ಮೇಲುಗೈ ಸಾಧಿಸಿದರು. ಬ್ಯಾಕ್‌ಹ್ಯಾಂಡ್‌ನಲ್ಲಿ ಜ್ವೆರೆವ್ ಹೊಡೆದ ಚೆಂಡು ’ವೈಡ್‌‘ ಆಗುತ್ತಿದ್ದಂತೆ ಥೀಮ್‌ ಸಂಭ್ರಮದ ಅಲೆಯಲ್ಲಿ ತೇಲಿದರು. ಪಂದ್ಯದ ನಂತರ ಮಾತನಾಡಿದ ಜ್ವೆರೆವ್ ಕಣ್ಣೀರಿನಲ್ಲಿ ಮಿಂದರು.

***

ಅಭಿನಂದನೆ ನನಗಷ್ಟೇ ಅಲ್ಲ, ಜ್ವೆರೆವ್‌ಗೂ ಸಲ್ಲಬೇಕು. ಈ ಪ್ರಶಸ್ತಿಗೆ ಅವರೂ ಅರ್ಹರಾಗಿದ್ದಾರೆ. ಅವರು ಅಷ್ಟು ಸೊಗಸಾದ ಆಟ ಪ್ರದರ್ಶಿಸಿದ್ದಾರೆ.

-ಡೊಮಿನಿಕ್ ಥೀಮ್, ಪ್ರಶಸ್ತಿ ಗೆದ್ದ ಆಸ್ಟ್ರಿಯಾ ಆಟಗಾರ

***

*ಹಿಂದಿನ ಮೂರು ಗ್ರ್ಯಾನ್‌ಸ್ಲಾಂ ಫೈನಲ್‌ ಪಂದ್ಯಗಳಲ್ಲಿ ಸೋತಿದ್ದ ಥೀಮ್

*ಎರಡು ಸೆಟ್‌ಗಳ ಹಿನ್ನಡೆಯಿಂದ ಚೇತರಿಸಿಕೊಂಡ ಆಸ್ಟ್ರಿಯಾ ಆಟಗಾರ

*ಚಾಂಪಿಯನ್ ಪಟ್ಟದ ಸನಿಹ ತಲುಪಿ ಕೈಚೆಲ್ಲಿದ ಅಲೆಕ್ಸಾಂಡರ್ ಜ್ವೆರೆವ್

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT