ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಆ್ಯಂಡಿ ಮರ್ರೆ, ಮುಗುರುಜಾಗೆ ಆಘಾತ

ಮುಂದಿನ ಸುತ್ತಿಗೆ ವಾವ್ರಿಂಕಾ, ಸೆರೆನಾ
Last Updated 30 ಆಗಸ್ಟ್ 2018, 19:44 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಬ್ರಿಟನ್‌ನ ಆ್ಯಂಡಿ ಮರ್ರೆ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಆಘಾತ ಅನುಭವಿಸಿದ್ದಾರೆ.

ಬುಧವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಮರ್ರೆ, 5–7, 6–2, 4–6, 4–6ರಿಂದ ಸ್ಪೇನ್‌ನ ಫರ್ನಾಂಡೊ ವರ್ಡಾಸ್ಕೊ ಅವರ ಎದುರು ಮಣಿದರು. 2012ರ ಇದೇ ಟೂರ್ನಿಯಲ್ಲಿ ಬ್ರಿಟನ್‌ನ ಆಟಗಾರ ಚಾಂಪಿಯನ್‌ ಆಗಿದ್ದರು.

ಪಂದ್ಯದ ಆರಂಭದಿಂದಲೂ ಫರ್ನಾಂಡೊ ಆಕ್ರಮಣಕಾರಿ ಆಟವಾಡಿದರು. ಧೀರ್ಘ ರ‍್ಯಾಲಿ, ಮನಮೋಹಕ ರಿಟರ್ನ್‌ ಹಾಗೂ ಸರ್ವ್‌ಗಳಿಂದ ಎದುರಾಳಿಯನ್ನು ಕಟ್ಟಿಹಾಕಿದರು. ಮರ್ರೆ, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಆದರೆ, ಮೂರು ಹಾಗೂ ನಾಲ್ಕನೇ ಸೆಟ್‌ಗಳಲ್ಲಿ ಎದುರಾಳಿಯ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು ವಿಫಲರಾದರು.

ಸ್ವಿಟ್ಜರ್‌ಲೆಂಡ್‌ನ ಸ್ಟಾನ್‌ ವಾವ್ರಿಂಕಾ ಅವರು ಎರಡನೇ ಸುತ್ತಿನ ಪಂದ್ಯದಲ್ಲಿ 7–6, 4–6, 6–3, 7–5ರಿಂದ ಫ್ರಾನ್ಸ್‌ನ ಯುಗೊ ಹಂಬರ್ಟ್‌ ಎದುರು ಗೆದ್ದರು. ಪಂದ್ಯವು ಮೂರು ತಾಸು 21 ನಿಮಿಷಗಳ ಕಾಲ ನಡೆಯಿತು.

ಪಂದ್ಯದ ನಂತರ ಮಾತನಾಡಿದ ವಾವ್ರಿಂಕಾ, ‘ಎದುರಾಳಿಯು ಉತ್ತಮ ಪೈಪೋಟಿ ನೀಡಿದರು. ಶಸ್ತ್ರಚಿಕಿತ್ಸೆಯ ನಂತರವೂ ಇಷ್ಟು ಗಂಟೆಗಳ ಕಾಲ ಆಡಲು ಸಾಧ್ಯವಾಗಿದೆ. ಈ ಗೆಲುವು ನನ್ನ ವಿಶ್ವಾಸದ ಮಟ್ಟವನ್ನು ಹೆಚ್ಚಿಸಿದೆ’ ಎಂದು ಹೇಳಿದರು.

ಮೂರನೇ ಸುತ್ತಿಗೆ ನಡಾಲ್‌: ಹಾಲಿ ಚಾಂಪಿಯನ್‌ ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಎರಡನೇ ಸುತ್ತಿನ ಪಂದ್ಯದಲ್ಲಿ ನಡಾಲ್‌, 6–3, 6–4, 6–2ರಿಂದ ಕೆನಡಾದ ವಾಸೆಕ್‌ ಪೊಸ್ಪಿಸಿಲ್‌ ಅವರನ್ನು ಪರಾಭವಗೊಳಿಸಿದರು.

ಇದೇ ಸುತ್ತಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಡಾಮಿನಿಕ್‌ ಥೀಮ್‌ ಅವರು 6–7, 6–3, 5–7, 6–4, 6–1ರಿಂದ ಅಮೆರಿಕದ ಸ್ಟೀವ್‌ ಜಾನ್ಸನ್‌ ಅವರ ವಿರುದ್ಧ, ರಷ್ಯಾದ ಕೆವಿನ್‌ ಆ್ಯಂಡರ್ಸನ್‌, 6–2, 6–4, 6–4ರಿಂದ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಎದುರು ಗೆದ್ದರು.

ಗಾರ್ಬೈನ್‌ ಮುಗುರುಜಾಗೆ ನಿರಾಸೆ: ಎರಡು ಬಾರಿ ಗ್ರ್ಯಾನ್‌ ಸ್ಲ್ಯಾಮ್‌ ಪ್ರಶಸ್ತಿ ಗೆದ್ದಿರುವ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಅವರು ನಿರಾಸೆ ಅನುಭವಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಮುಗುರುಜಾ, 6–3, 4–6, 4–6ರಿಂದ ಜೆಕ್ ರಿಪಬ್ಲಿಕ್‌ನ ಕ್ಯಾರೋಲಿನಾ ಮಚುವಾ ಎದುರು ಸೋತರು.

ಸೋದರಿಯರ ಸವಾಲ್‌: ಅಮೆರಿಕದ ಸೆರೆನಾ ವಿಲಿಯಮ್ಸ್‌ ಹಾಗೂ ವೀನಸ್‌ ವಿಲಿಯಮ್ಸ್‌ ಅವರು ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಸೆರೆನಾ, 6–2, 6–2ರಿಂದ ಜರ್ಮನಿಯ ಕರಿನಾ ವಿಟ್‌ಹೋಫ್ಟ್‌ ವಿರುದ್ಧ ಜಯಿಸಿದರು. ವೀನಸ್‌, 6–4, 7–5ರಿಂದ ಇಟಲಿಯ ಕ್ಯಾಮಿಲಾ ಜಿಯೊರ್ಜಿ ಎದುರು ಜಯಿಸಿದರು. ಮೂರನೇ ಸುತ್ತಿನ ಪಂದ್ಯದಲ್ಲಿ ಈ ಇಬ್ಬರು ಸಹೋದರಿಯರು ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT