ಗುರುವಾರ , ಆಗಸ್ಟ್ 18, 2022
26 °C
ಮರಿಯಾಗೆ ಗೆಲುವಿನ ಸಕ್ಕರೆ

ವಿಂಬಲ್ಡನ್ ಟೆನಿಸ್ ಟೂರ್ನಿ: ಸೆಲೆಸ್‌ ದಾಖಲೆ ಸರಿಗಟ್ಟಿದ ಸ್ವೆಟೆಕ್‌

ಎಪಿ/ ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ವಿಂಬಲ್ಡನ್‌, ಇಂಗ್ಲೆಂಡ್: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಇಗಾ ಸ್ವೆಟೆಕ್‌ ಸತತ 36ನೇ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದರು. ಇದರೊಂದಿಗೆ ಅಮೆರಿಕದ ಮೋನಿಕಾ ಸೆಲೆಸ್‌ 1990ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದರು.

ಇಲ್ಲಿ ನಡೆಯುತ್ತಿರುವ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಜಯ ಸಾಧಿಸುವ ಮೂಲಕ ಪೋಲೆಂಡ್‌ನ ಸ್ವೆಟೆಕ್‌ ಈ ಶ್ರೇಯ ಗಳಿಸಿದರು. ಸ್ವೆಟೆಕ್‌ 6–0, 6–3ರಿಂದ ಕ್ರೊವೇಷ್ಯಾದ, ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಆಟಗಾರ್ತಿ ಜಾನಾ ಫೆಟ್‌ ಅವರನ್ನು ಮಣಿಸಿದರು. 

ಅಂಗಣದಲ್ಲಿ ಬೀಸುತ್ತಿದ್ದ ಬಿರುಗಾಳಿಯ ಮಧ್ಯೆಯೂ ಸ್ವೆಟೆಕ್ ಸುಲಭದ ಜಯ ಸಂಪಾದಿಸಿದರು. ಚುರುಕಿನ ಸರ್ವ್‌ಗಳ ಮೂಲಕ ಗಮಸೆಳೆದ ಅವರು ಮೊದಲ ಸೆಟ್‌ಅನ್ನು ಒಂದೂ ಗೇಮ್‌ ಕಳೆದುಕೊಳ್ಳದೆ ತಮ್ಮದಾಗಿಸಿಕೊಂಡರು. ಈ ವರ್ಷ 17ನೇ ಬಾರಿ 6–0 ಅಂತರದ ಸೆಟ್‌ ಜಯಿಸಿದರು.

ಎರಡನೇ ಸೆಟ್‌ನಲ್ಲಿ ಫೆಟ್‌ ತಿರುಗೇಟು ನೀಡುವ ಭರವಸೆ ಮೂಡಿಸಿದರು. ಆರಂಭದಲ್ಲೇ 3–1ರಿಂದ ಮುನ್ನಡೆ ಸಾಧಿಸಿದರು. ಆದರೆ ಅತಿ ವೇಗವಾಗಿ ಐದು ಗೇಮ್ ಗಳಿಸಿದ ಸ್ವೆಟೆಕ್‌ ಸೆಟ್‌ ಹಾಗೂ ಪಂದ್ಯ ಗೆದ್ದು ಬೀಗಿದರು.

ಇನ್ನೊಂದು ಹಣಾಹಣಿಯಲ್ಲಿ ಗ್ರೀಕ್‌ನ ಮರಿಯಾ ಸಕ್ಕರಿ 6-1, 6-4ರಿಂದ ಆಸ್ಟ್ರೇಲಿಯಾದ ಜೊ ಹಿವೆಸ್‌ ಅವರನ್ನು ಸೋಲಿಸಿದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನ ಹಣಾಹಣಿಯಲ್ಲಿ ಅಮೆರಿಕದ ರೆಲಿ ಒಪೆಲ್ಕಾ 7-6 (7/5), 6-4, 6-4ರಿಂದ ಸ್ಪೇನ್‌ನ ಕಾರ್ಲೊಸ್‌ ಟ್ಯಾಬನರ್ ಅವರನ್ನು ಮಣಿಸಿದರು. ಮೊದಲ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಸ್ವಿಡನ್‌ನ ಮಿಖಾಯಿಲ್‌ ಯಮರ್ 6-3, 7-5, 7-5ರಿಂದ ಜರ್ಮನಿಯ ಡೇನಿಯಲ್ ಅಲ್ಟ್‌ಮೇರ್ ಎದುರು, ಬೆಲ್ಜಿಯಂನ ಡೇವಿಡ್‌ ಗಫಿನ್‌ 6-2, 6-2, 7-6 (7/5)ರಿಂದ ಮೊಲ್ಡೊವಾದ ರಡು ಅಲ್ಬೊಟ್ ಎದುರು ಗೆದ್ದರು.

ಡಿಮಿಟ್ರೊವ್ ನಿವೃತ್ತಿ: ಅಮೆರಿಕದ ಸ್ಟೀವ್ ಜಾನ್ಸನ್ ಎದುರು ಕಣಕ್ಕಿಳಿದಿದ್ದ ಬಲ್ಗೇರಿಯದ ಗ್ರಿಗೊರ್ ಡಿಮೆಟ್ರೊವ್‌ ಪಂದ್ಯದ ನಡುವೆಯೇ ಗಾಯದಿಂದಾಗಿ ನಿವೃತ್ತಿ ಪಡೆದರು. ಈ ವೇಳೆ ಸ್ಟೀವ್‌– ಡಿಮಿಟ್ರೊವ್ ಸ್ಕೋರ್ 4–6, 5–2 ಆಗಿತ್ತು. 

ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಜೆಕ್‌ ಗಣರಾಜ್ಯದ ಬಾರ್ಬರಾ ಕ್ರೇಸಿಕೊವಾ 7-6 (7/4), 6-3ರಿಂದ ಬೆಲ್ಜಿಯಂನ ಮರಿನಾ ಜನೆವ್‌ಸ್ಕಾ ಎದುರು, ಚೀನಾದ ಜಾಂಗ್‌ ಶುಯಿ 6-4, 6-0ಯಿಂದ ಜಪಾನ್‌ನ ಮಿಸಾಕಿ ಡೊಯಿ ವಿರುದ್ಧ, ಲಾಟ್ವಿಯಾದ ಎಲೆನಾ ಒಸ್ಟಾಪೆಂಕೊ 6-4, 6-4ರಿಂದ ಫ್ರಾನ್ಸ್‌ನ ಒಸೀನ್‌ ದೊಡಿನ್ ವಿರುದ್ಧ ಜಯ ಸಾಧಿಸಿ ಮುನ್ನಡೆದರು.

ಬೆನ್ಸಿಚ್‌ಗೆ ಆಘಾತ: ಸ್ವಿಟ್ಜರ್ಲೆಂಡ್‌ ಆಟಗಾರ್ತಿ, 14ನೇ ಶ್ರೇಯಾಂಕದ ಬೆಲಿಂಡಾ ಬೆನ್ಸಿಚ್‌ 4–6, 7–5, 2–6ರಿಂದ ಚೀನಾದ ವಾಂಗ್‌ ಕಿಯಾಂಗ್‌ ಎದುರು ಸೋತರು.

ಬೆರೆಟಿನಿಗೆ ಕೋವಿಡ್‌; ಟೂರ್ನಿಯಿಂದ ಹೊರಕ್ಕೆ

2021ರ ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್ ರನ್ನರ್‌ಅಪ್‌ ಮ್ಯಾಟಿಯೊ ಬೆರೆಟಿನಿ ಅವರಿಗೆ ಕೋವಿಡ್‌ ಖಚಿತಪಟ್ಟಿದ್ದು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮಂಗಳವಾರ ಮೊದಲ ಸುತ್ತಿನ ಪಂದ್ಯ ಆರಂಭವಾಗುವ ತಾಸಿನ ಮೊದಲು ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಇಟಲಿಯ ಆಟಗಾರ ಟೂರ್ನಿಯಿಂದ ಹಿಂದೆ ಸರಿದಿರುವುದನ್ನು ಆಲ್ ಇಂಗ್ಲೆಂಡ್‌ ಕ್ಲಬ್‌ ಪ್ರಕಟಿಸಿದೆ. ಈ ವಿಷಯವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಬೆರೆಟಿನಿ ‘ಕಳೆದ ಕೆಲವು ದಿನಗಳಿಂದ ಜ್ವರದ ರೀತಿಯ ಲಕ್ಷಣಗಳಿದ್ದವು. ಹೀಗಾಗಿ ಪ್ರತ್ಯೇಕವಾಸಲ್ಲಿದ್ದೆ. ಇದು ನೋವಿನ ವಿಚಾರ‘ ಎಂದು ಹೇಳಿದ್ದಾರೆ.

ಟೂರ್ನಿ ಆರಂಭವಾದ ಎರಡು ದಿನಗಳೊಳಗೆ ಇಬ್ಬರು ಆಟಗಾರರು ಕೋವಿಡ್‌ ಕಾರಣದಿಂದ ಹಿಂದೆ ಸರಿದಂತಾಗಿದೆ. 2014ರ ಅಮೆರಿಕ ಓಪನ್ ಚಾಂಪಿಯನ್‌ ಹಾಗೂ 2017ರ ವಿಂಬಲ್ಡನ್ ಫೈನಲಿಸ್ಟ್‌, ಕ್ರೊವೇಷ್ಯಾದ ಮರಿನ್ ಸಿಲಿಚ್‌ ಹಿಂದೆ ಸರಿದ ಇನ್ನೊಬ್ಬ ಆಟಗಾರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು