ನೀರಿಗೆ ತತ್ವಾರ; ಆಸ್ಟ್ರೋ ಟರ್ಫ್‌ ಭಾರ!

ಶುಕ್ರವಾರ, ಏಪ್ರಿಲ್ 26, 2019
21 °C
ಜಲರಹಿತ ಟರ್ಫ್ ಅಥವಾ ನೈಜ ಹುಲ್ಲಿನಂಕಣಕ್ಕೆ ಎಫ್‌ಐಎಚ್‌ ಸೂಚನೆ; 2024ರ ಒಲಿಂಪಿಕ್ಸ್‌ನಿಂದ ಜಾರಿ

ನೀರಿಗೆ ತತ್ವಾರ; ಆಸ್ಟ್ರೋ ಟರ್ಫ್‌ ಭಾರ!

Published:
Updated:

ಹಾಕಿ ಅಂಗಳದಲ್ಲಿ ಮತ್ತೆ ನೈಜ ಹುಲ್ಲಿನಂಕಣದ ಕಾಲ ಬರಲಿದೆಯೇ?

ಹೌದು; ಇಂತಹದೊಂದು ಕಾಲ ಮತ್ತೆ ಬರಲಿದೆ. ವಿಶ್ವದೆಲ್ಲೆಡೆ ನೀರಿಗೆ ಹಾಹಾಕಾರ ಆರಂಭವಾಗಿರುವುದರಿಂದ ಹಾಕಿ ಅಂಗಳದ ಆಸ್ಟ್ರೋ ಟರ್ಫ್‌ಗಳು ಜಾಗ ಖಾಲಿ ಮಾಡುವುದು ಅನಿವಾರ್ಯವಾಗಿದೆ.

ಈ ಟರ್ಫ್‌ಗಳನ್ನು ನಿರ್ವಹಿಸಲು ಮತ್ತು ಪಂದ್ಯಗಳು ನಡೆಯುವ ವೇಳೆಯಲ್ಲಿ ಅಪಾರ ಪ್ರಮಾಣದ ನೀರು ವ್ಯಯಿಸಬೇಕಾಗಿದೆ. ಆದರೆ ನೀರಿನ ಮೂಲಗಳು ವೇಗವಾಗಿ ಬತ್ತುತ್ತಿವೆ. ಜಲಕ್ಞಾಮದಿಂದ ಕ್ರೀಡಾಕೂಟಗಳನ್ನು ನಡೆಸುವುದೇ ಕಷ್ಟವಾಗುವ ಪರಿಸ್ಥಿತಿ ಬರಲಿದೆ. ಆದ್ದರಿಂದ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಆಸ್ಟ್ರೋ ಟರ್ಫ್‌ಗಳಿಗೆ ವಿದಾಯ ಹೇಳುವತ್ತ ಹೆಜ್ಜೆ ಇಟ್ಟಿದೆ.

ಹೋದ ಡಿಸೆಂಬರ್‌ನಲ್ಲಿ ನಡೆದಿದ್ದ ಎಫ್‌ಐಎಚ್ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯಿತು. 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೋ ಟರ್ಫ್‌ (ಸಿಂಥೆಟಿಕ್‌) ಬಳಸುವಂತಿಲ್ಲ. ನೀರುರಹಿತ ಟರ್ಫ್‌ ತಯಾರಿಕೆ ಸಾಧ್ಯವಾದರೆ, ಅದನ್ನೇ ಬಳಸಬೇಕು. ಒಂದೊಮ್ಮೆ ಸಾಧ್ಯವೇ ಆಗದಿದ್ದರೆ ನೈಜ ಅಂಕಣದಲ್ಲಿ ಆಟ ನಡೆಯಲಿ ಎಂದು ನಿರ್ಣಯಿಸಲಾಗಿದೆ.

ಹೋದ ವರ್ಷದ ಮಾರ್ಚ್‌–ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆಯುತ್ತಿದ್ದ ಹಲವು ಕ್ರೀಡಾಕೂಟಗಳು, ಕ್ರಿಕೆಟ್‌ ಟೂರ್ನಿಗಳಿಗೆ ಜಲಕ್ಷಾಮದ ಬಿಸಿ ತಟ್ಟಿತ್ತು. ಅದಕ್ಕಾಗಿ ಅಲ್ಲಿಯ ಸರ್ಕಾರ ಮತ್ತು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಬಳಸಿದ ನೀರಿನ ಪುನರ್ಬಳಕೆ,  ಅಪವ್ಯಯಗಳನ್ನು ತಡೆಯುವ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿತ್ತು.

ಒಂದು ಮೂಲದ ಪ್ರಕಾರ ಕ್ರಿಕೆಟ್‌ ಆಟಗಾರರ ಡ್ರೆಸ್ಸಿಂಗ್ ಕೋಣೆಗಳಲ್ಲಿಯೂ ಸ್ನಾನಕ್ಕೆ ನೀರಿನ ತತ್ವಾರವಾಗಿತ್ತಂತೆ. ಅಲ್ಲಿ ನಡೆಯುತ್ತಿದ್ದ ಕ್ಲಬ್‌ ಮ್ಯಾರಥಾನ್‌ ಸಂದರ್ಭದಲ್ಲಿ ಪುನರ್ಬಳಕೆ ನೀರಿನ ಶೌಚಾಲಯಗಳನ್ನು ಬಳಸಲಾಗಿತ್ತಂತೆ. ಆ ಸ್ಪರ್ಧೆಯಲ್ಲಿ 20 ಸಾವಿರಕ್ಕೂ ಹೆಚ್ಚು ಅಥ್ಲೀಟ್‌ಗಳು ಭಾಗವಹಿಸಿದ್ದರಂತೆ.  ಇದೆಲ್ಲದರ ಹಿನ್ನೆಲೆಯಲ್ಲಿ ಎಫ್‌ಐಎಚ್ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್ ಪರಿಹಾರ ಕ್ರಮಗಳಿಗೆ ಮುಂದಾಗಿವೆ.

‘ಕೃತಕ ಹುಲ್ಲಿನಂಕಣ ನಿರ್ವಹಿಸಲು ಅಪಾರ ಪ್ರಮಾಣದ ನೀರು ಬೇಕು. ಒಂದು ಅಂತರರಾಷ್ಟ್ರೀಯ ಪಂದ್ಯ ನಡೆಸುವ ಸಂದರ್ಭದಲ್ಲಿ ಪಂದ್ಯಕ್ಕೂ ಮುನ್ನ ಮತ್ತು ಪಂದ್ಯದ ಅವಧಿಯಲ್ಲಿ ನೀರು ಹಾಕಬೇಕು. ಸುಮಾರು 60 ಸಾವಿರ ಗ್ಯಾಲನ್ ನೀರು ಅವಶ್ಯಕ. ಇದು ದೊಡ್ಡ ಸವಾಲು. ಒಂದೊಂದು ಹಾಕಿ ಪಂದ್ಯಕ್ಕೆ ಇಷ್ಟೊಂದು ನೀರು ವ್ಯಯಿಸಲಾಗದು. ನಮ್ಮ ಅಕಾಡೆಮಿಯಲ್ಲಿಯೇ ಒಂದು ಟರ್ಫ್‌ ಹಾಕುವ ವಿಚಾರ ಇತ್ತು. ಆದರೆ ಬಹಳಷ್ಟು ಹಣ ಖರ್ಚಾಗುತ್ತದೆ. ಇನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಚನೆ ಮಾಡಿದರೆ ವೆಚ್ಚ ಇನ್ನೂ ಹೆಚ್ಚು’ ಎಂದು ಕೊಡಗು ಜಿಲ್ಲೆಯಲ್ಲಿರುವ ಕರುಂಬಯ್ಯ ಕ್ರೀಡಾ ಅಕಾಡೆಮಿಯ ಟ್ರಸ್ಟಿ ಮತ್ತು ಕ್ರೀಡಾಪಟು ದತ್ತಾ ಕರುಂಬಯ್ಯ ಹೇಳುತ್ತಾರೆ.

ಭಾರತಕ್ಕೆ ಲಾಭವೋ ನಷ್ಟವೋ?

1970ರ ದಶಕದಲ್ಲಿ ಆಸ್ಟ್ರೋ ಟರ್ಫ್‌ಗಳು ಬಳಕೆಗೆ ಬಂದವು. ಯುರೋಪ್ ದೇಶಗಳು ಅದರಲ್ಲಿ ಪರಿಣತಿ ಸಾಧಿಸಿದವು. ಈ ಟರ್ಫ್‌ಗಳಲ್ಲಿ ಆಡಲು ವಿಶೇಷ ರೀತಿಯ ಬೂಟುಗಳು, ಕೌಶಲ್ಯಗಳ ಅವಶ್ಯಕತೆ ಇದೆ. ಅವು ಕೂಡ ಮಾರುಕಟ್ಟೆಯಲ್ಲಿ ಬಂದವು. ಆದರೆ, ಬಡ ಮತ್ತು ಮಧ್ಯಮ  ಆರ್ಥಿಕ ಸ್ಥಿತಿಯುಳ್ಳ ದೇಶಗಳೂ ಈ ಸೌಲಭ್ಯಗಳನ್ನು ಹೊಂದಿಸಿಕೊಳ್ಳುವಲ್ಲಿ ಹಿಂದೆ ಬಿದ್ದವು. ಭಾರತ ಕೂಡ ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವಲ್ಲಿ ವಿಳಂಬವಾಯಿತು.

70ರ ದಶಕಕ್ಕಿಂತ ಮೊದಲು ಆವೆ ಮಣ್ಣಿನಂಕಣಗಳು ಮತ್ತು ನೈಜ ಹುಲ್ಲಿನ ಮೈದಾನಗಳಲ್ಲಿ ಹಾಕಿ ಟೂರ್ನಿಗಳು ನಡೆಯುತ್ತಿದ್ದವು. ಆ ಕ್ರೀಡಾಂಗಣದಲ್ಲಿ ಬೇಕಾಗಿದ್ದ ಕೌಶಲಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಆಟಗಾರರೇ ಸಾರ್ವಭೌಮರಾಗಿದ್ದರು. ಅದಕ್ಕಾಗಿಯೇ ಒಲಿಂಪಿಕ್ಸ್‌ನಲ್ಲಿ ಭಾರತವು ಅನಭಿಷಿಕ್ತ ದೊರೆಯಾಗಿತ್ತು.

ಕ್ರಮೇಣ ಹೊಸ ವ್ಯವಸ್ಥೆಗೆ ಭಾರತವು ಹೊಂದಿಕೊಂಡಿದೆ. ಅದಕ್ಕಾಗಿ ದೇಶದ ಹಲವು ಭಾಗಗಳಲ್ಲಿ ಜೂನಿಯರ್ ಹಂತದಲ್ಲಿಯೇ ಆಸ್ಟ್ರೋ ಟರ್ಫ್‌ಗಳ ಬಳಕೆಗೆ ಒತ್ತು ನೀಡಲಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಬೆಂಗಳೂರಿನಲ್ಲಿ ಎರಡು, ಗದಗ, ಕೊಡಗು ಮತ್ತು ಮೈಸೂರಿನಲ್ಲಿ ಒಂದೊಂದು ಟರ್ಫ್‌ ಅಳವಡಿಸಿಲಾಗಿದೆ. ಇವುಗಳ ನಿರ್ವಹಣೆಯೂ ಈಗ ತುಟ್ಟಿಯಾಗಿದೆ.

‘ನೀರು ಹಾಕದೇ ಹೋದರೆ ಕೃತಕ ಗ್ರಾಸ್ ಒಣಗಿ ಸೆಟೆದು ನಿಲ್ಲುತ್ತವೆ. ಚೆಂಡು ರೋಲ್ ಆಗುವುದಿಲ್ಲ. ಆಗ ಅನಿಯಂತ್ರಿತವಾಗಿ ಪುಟಿಯತೊಡಗುತ್ತದೆ. ಆಟಗಾರರಿಗೆ ಲಯವೂ ಸಿಗುವುದಿಲ್ಲ. ಗಾಯಗೊಳ್ಳುವ ಸಂಭವವೂ ಇರುತ್ತದೆ. ಆದ್ದರಿಂದ ಯಥೇಚ್ಛ ಪ್ರಮಾಣದ ನೀರು ಬೇಕೆ ಬೇಕು’ ಎಂದು ದತ್ತಾ ಹೇಳುತ್ತಾರೆ.

‘ನಮ್ಮ ಆಟಗಾರರು ಟರ್ಫ್‌ ಬಂದ ಹೊಸದರಲ್ಲಿ ಸ್ವಲ್ಪ ತೊಂದರೆಪಟ್ಟಿದ್ದರು. ಆದರೆ ನಂತರದ ದಿನಗಳಲ್ಲಿ ಆಟಗ ರೂಢಿಸಿಕೊಂಡಿದ್ದಾರೆ. ಆದರೆ ಟರ್ಫ್‌ ಬಂದ ಮೇಲೆ ಆಟದ ಶೈಲಿಯೇ ಬದಲಾಗಿದೆ. ವೇಗ ಹೆಚ್ಚಿದೆ. ಒಂದೊಮ್ಮೆ ಮತ್ತೆ ನೈಜ ಹುಲ್ಲಿನಂಕಣಗಳು ಬಂದರೆ, ಅದಕ್ಕೆ ತಕ್ಕಂತೆ ಶೈಲಿ ಬರಲಿದೆ. ನಮ್ಮ ದೇಶಕ್ಕೆ ಅನುಕೂಲವಾಗಬಹುದು. ಆದರೆ, ಇಷ್ಟು ದಿನ ವಿನಿಯೋಗಿಸಿದ ಸಂಪನ್ಮೂಲ ನಷ್ಟವಾಗಬಹುದು. ಆದರೆ, ನೀರಿನ ಸಮಸ್ಯೆಯನ್ನು ಮೀರಿ ನಿಲ್ಲಲು ನಷ್ಟ ಅನುಭವಿಸುವುದು ಅನಿವಾರ್ಯ’ ಎನ್ನುತ್ತಾರೆ ಹಿರಿಯ ಹಾಕಿ ಆಟಗಾರ ಅಶೋಕಕುಮಾರ್ ಧ್ಯಾನಚಂದ್.

ಒಟ್ಟಿನಲ್ಲಿ ನಿಸರ್ಗದ ಮುಂದೆ ಯಾರೂ ದೊಡ್ಡವರಲ್ಲ. ಪರಿಸರಕ್ಕೆ ನಷ್ಟ ಮಾಡಿದಷ್ಟೂ ಅದರ ಕಹಿ ನಮಗೇ ತಟ್ಟುತ್ತದೆ. ನೀರಿನ ಬಳಕೆಯ ಕುರಿತು ಎಲ್ಲ ಕ್ರೀಡಾ ಸಂಸ್ಥೆಗಳೂ ಎಚ್ಚರಗೊಳ್ಳಬೇಕಾದ ತುರ್ತು ಅಗತ್ಯ ಈಗ ಇದೆ. ಹಾಕಿ ಸಂಸ್ಥೆ ಮುಂದಡಿ ಇಟ್ಟು ಮಾದರಿಯಾಗುತ್ತಿದೆ.

***

ಕಾಲ ಬಂದಂಗೆ ಕೋಲ ಕಟ್ಟಬೇಕು!

ಕುಡಿಯಲು ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ. ನದಿಗಳು ತುಂಬುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೊದಲು ಜೀವನ ನಂತರ ಉಳಿದದ್ದು. ಜೀವ ಮತ್ತು ಜೀವನ ಇದ್ದರೆ ಕ್ರೀಡೆಯಲ್ಲವೇ. ನೈಜ ಅಂಕಣದಲ್ಲಿ ಆಡಿದರೆ ತಪ್ಪೇನಿಲ್ಲ. ನೀರು ಉಳಿಸುವುದು ಮುಖ್ಯ. ಆಸ್ಟ್ರೋ ಟರ್ಫ್ ನಿರ್ವಹಣೆಗೆ ಅಪಾರ ಪ್ರಮಾಣದ ನೀರು ಬೇಕು.  ಆದ್ದರಿಂದ ಕಾಲ ಬಂದಂಗೆ ಕೋಲ ಕಟ್ಟಬೇಕು.

– ಎಂ.ಪಿ. ಗಣೇಶ್, ಒಲಿಂಪಿಯನ್ ಹಾಕಿ ಪಟು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !