ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2011 ವಿಶ್ವಕಪ್‌: ಚಿನ್ನಸ್ವಾಮಿ ಅಂಗಳದಲ್ಲಿ ‘ಟೈ’ ರಸದೌತಣ

Last Updated 23 ಮೇ 2019, 20:17 IST
ಅಕ್ಷರ ಗಾತ್ರ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆಬ್ರುವರಿ 27ರಂದು ನಡೆದಿದ್ದ ಆ ಪಂದ್ಯವನ್ನು ಕ್ರಿಕೆಟ್‌ಪ್ರಿಯರು ಎಂದಿಗೂ ಮರೆಯುವುದಿಲ್ಲ. ಬೆಂಗಳೂರಿನ ಕ್ರಿಕೆಟ್ ಇತಿಹಾಸದಲ್ಲಿಯೇ ಅದರಷ್ಟು ರೋಚಕತೆಯ ರಸದೌತಣ ಉಣಬಡಿಸಿದ ಪಂದ್ಯ ಮತ್ತೊಂದಿಲ್ಲ. ಆ ವರ್ಷ ವಿಶ್ವಕಪ್ ಗೆಲ್ಲುವ ನೆಚ್ಚಿನ ಎರಡು ತಂಡಗಳಾಗಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಣದ ಪಂದ್ಯ ಟೈ ಆಗಿತ್ತು. ಆ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನ ಎಲ್ಲ ನಾಟಕೀಯ, ಕಲಾತ್ಮಕತೆ, ರೋಚಕ ದೃಶ್ಯಾವಳಿಗಳು ತುಂಬಿದ್ದವು.

* ಆತಿಥೇಯ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

* ಆರಂಭಿಕ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ (120; 115ಎಸೆತ, 10ಬೌಂಡರಿ 5ಸಿಕ್ಸರ್) ಅವರ ಶತಕದ ಆಟ ಕಳೆಗಟ್ಟಿತು. ಅವರ ಅಪ್ಪರ್‌ ಕಟ್ ಪ್ರಯೋಗಕ್ಕೆ ಜನಮನ ಸೋತಿತು. ವೀರೇಂದ್ರ ಸೆಹ್ವಾಗ್ ಕೇವಲ 35 ರನ್‌ ಗಳಿಸಿ ಔಟಾದರು.

* ಮೂರನೇ ಕ್ರಮಾಂಕದಲ್ಲಿ ಆಡಿದ ಗೌತಮ್ ಗಂಭೀರ್ (51 ರನ್) ಅರ್ಧಶತಕ ಗಳಿಸಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಸಚಿನ್ ಮತ್ತು ಗೌತಮ್ 134 ರನ್‌ ಸೇರಿಸಿದರು.

* ಗಂಭೀರ್ ಔಟಾದ ನಂತರ ಕ್ರೀಸ್‌ಗೆ ಬಂದ ಯುವರಾಜ್ ಸಿಂಗ್ (58 ರನ್) ಮತ್ತು ಸಚಿನ್ ಸೇರಿ ಆಟಕ್ಕೆ ಚುರುಕು ನೀಡಿದರು. ಆದರೆ ನಂತರ ಬಂದ ಬ್ಯಾಟ್ಸ್‌ಮನ್‌ಗಳು ಮಿಂಚಲಿಲ್ಲ.

* ಇಂಗ್ಲೆಂಡ್ ತಂಡದ ಬಲಗೈ ಮಧ್ಯಮವೇಗಿ ಟಿಮ್ ಬ್ರೆಸ್ನನ್ ಐದು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಭಾರತ ತಂಡವು 50 ಓವರ್‌ಗಳಲ್ಲಿ 338 ರನ್‌ ಗಳಿಸಿ ಆಲೌಟ್ ಆಯಿತು.

* ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಮತ್ತು ಕೆವಿನ್ ಪೀಟರ್ಸನ್ ಉತ್ತಮ ಆರಂಭ ನೀಡಿದರು. ಸ್ಟ್ರಾಸ್ (158; 145ಎಸೆತ, 18ಬೌಂಡರಿ 1ಸಿಕ್ಸರ್) ಅವರಂತೂ ಭಾರತದ ಬೌಲಿಂಗ್ ದಾಳಿಯನ್ನು ನುಚ್ಚುನೂರು ಮಾಡಿದರು. ಅವರಿಗೆ ಇಯಾನ್ ಬೆಲ್ (69ರನ್) ಉತ್ತಮ ಜೊತೆ ನೀಡಿದರು.

* ಪಂದ್ಯದ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು 14 ರನ್‌ಗಳ ಅಗತ್ಯವಿತ್ತು. ಮಧ್ಯಮವೇಗಿ ಮುನಾಫ್ ಪಟೇಲ್ ಆ ಓವರ್‌ ಬೌಲ್ ಮಾಡಿದರು. ಗ್ರೆಮ್‌ ಸ್ವಾನ್ ಮತ್ತು ಶೆಹಜಾದ್ ಅವರು ಕ್ರೀಸ್‌ನಲ್ಲಿದ್ದರು. ಸ್ವಾನ್ ಮೊದಲ ಎಸೆತದಲ್ಲಿ ಎರಡು ಮತ್ತು ಎರಡನೇ ಎಸೆತದಲ್ಲಿ ಒಂದು ರನ್ ಗಳಿಸಿದರು. ಆದರೆ, ಮೂರನೇ ಎಸೆತದಲ್ಲಿ ಶೆಹಜಾದ್ ಸಿಕ್ಸರ್‌ ಬಾರಿಸಿದ್ದು ಇಂಗ್ಲೆಂಡ್ ಪಾಳಯದಲ್ಲಿ ಹರ್ಷದ ಹೊನಲು ಹರಿಸಿತು. ನಾಲ್ಕನೇ ಎಸೆತ ದಲ್ಲಿ ಬೈ ರೂಪದಲ್ಲಿ ಒಂದು ರನ್ ಲಭಿಸಿತು.

* ಕೊನೆಯ ಎರಡು ಎಸೆತಗಳಲ್ಲಿ ನಾಲ್ಕು ರನ್‌ ಗಳಿಸಿದರೆ ಗೆಲುವು, ಮೂರು ರನ್‌ ಗಳಿಸಿದರೆ ಸಮಬಲ ಎಂಬ ಸ್ಥಿತಿ ನಿರ್ಮಾಣವಾಯಿತು. ಐದನೇ ಎಸೆತದಲ್ಲಿ ಬೌಂಡರಿ ಹೊಡೆಯುವ ಸ್ವಾನ್ ಪ್ರಯತ್ನ ಕೈಗೂಡಲಿಲ್ಲ. ಆದರೆ ಎರಡು ರನ್ ಗಳಿಸಿದರು. ಕೊನೆಯ ಎಸೆತದಲ್ಲಿ ಒಂದು ರನ್ ಹೊಡೆದರು. ಅದರೊಂದಿಗೆ 100 ಓವರ್‌ಗಳ ಆಟವು ರೋಚಕ ಟೈ ಆಯಿತು. ಇಂಗ್ಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 338 ರನ್‌ ಗಳಿಸಿತು. ಭಾರತ ಸೋಲು ಮತ್ತು ಗೆಲುವು ಎರಡನ್ನೂ ತಪ್ಪಿಸಿಕೊಂಡಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT