ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS Final | ರೋಹಿತ್ ಶಾಂತಚಿತ್ತದ ಮಾತು; ತಂಡದ ಧೃಡತೆ ಬಿಚ್ಚಿಟ್ಟ ನಾಯಕ

Published 19 ನವೆಂಬರ್ 2023, 3:45 IST
Last Updated 19 ನವೆಂಬರ್ 2023, 3:45 IST
ಅಕ್ಷರ ಗಾತ್ರ

ಅಹಮದಾಬಾದ್: ದೇಶ, ವಿದೇಶಗಳ ಮಾಧ್ಯಮಗಳ ಅಪಾರ ಸಂಖ್ಯೆಯ ಪ್ರತಿನಿಧಿಗಳ  ಮುಂದೆ ಶನಿವಾರ ಸಂಜೆ ಬಂದು ಕುಳಿತಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಎಂದಿನಂತೆ ಮಂದಹಾಸದೊಂದಿಗೆ ಮಾತನಾಡಿದರು.

ಮುಂಬೈ ಶೈಲಿಯ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟರು. ಅವರ ಸ್ಪೋಟಕ ಶೈಲಿಯ ಬ್ಯಾಟಿಂಗ್‌ಗೆ ತದ್ವಿರುದ್ಧವಾದ ಮಾತುಕತೆಯ ಶೈಲಿ ಅವರದ್ದು. ಪತ್ರಿಕಾಗೋಷ್ಠಿಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿ ಕೆಲಕ್ಷಣ ಸ್ಥಗಿತಗೊಂಡಾಗ ಮತ್ತು ಗೋಷ್ಠಿಯ ನಡುವೆ ಕೆಲವರ ಮೊಬೈಲ್ ಫೋನ್‌ಗಳು ಕಿರುಗುಟ್ಟಿದಾಗಲೂ ಅವರು ಸಹನೆ ಕಳೆದುಕೊಳ್ಳಲಿಲ್ಲ.

ಸುಮಾರು ಅರ್ಧಗಂಟೆ ಮಾತನಾಡಿದರು. ಶಾಂತಚಿತ್ತ ಮತ್ತು ಸಮಾಧಾನದ ನಡವಳಿಕೆಗಳಿಂದಲೇ ತಾವು ಹಾಗೂ ತಮ್ಮ ತಂಡ ಇಲ್ಲಿಯವರೆಗೂ ಬಂದಿರುವುದು ಎಂದು ಪದೇ ಪದೇ ಒತ್ತಿ ಹೇಳಿದರು.

‘ದೇಶದ ಜನರ ನಿರೀಕ್ಷೆಯ ಬಗ್ಗೆ ನನಗೆ ಚೆನ್ನಾಗಿ ಅರಿವು ಇದೆ. ಇದೊಂದೇ ವಿಶ್ವಕಪ್ ಅಲ್ಲ. ನಾವು ಪ್ರತಿಬಾರಿ ಯಾವುದೇ ಪಂದ್ಯ ಆಡಿದರೂ ಅಭಿಮಾನಿಗಳ ನಿರೀಕ್ಷೆ ಇದೇ ರೀತಿಯಾಗಿರುತ್ತದೆ. ಬಸ್‌ ನಿಲ್ದಾಣ, ರೈಲುಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಹೋಟೆಲ್‌ಗಳಲ್ಲಿ ಎಲ್ಲಿಯೇ ನಮ್ಮನ್ನು ನೋಡಿದರೂ ಗೆಲ್ಲಬೇಕು ನೀವು ಎನ್ನುತ್ತಾರೆ. ಶತಕ, ದ್ವಿಶತಕ, ಸಿಕ್ಸರ್‌, ಬೌಂಡರಿ ಬೇಡಿಕೆಯನ್ನು ಕೂಗುತ್ತಾರೆ. ಬೌಲರ್‌ಗಳು ಐದು ವಿಕೆಟ್ ಪಡೆಯಬೇಕು ಎಂದು ಯಾವಾಗಲೂ ಬಯಸುತ್ತಾರೆ. ಅವರೆಲ್ಲರ ಮಾತುಗಳು ನಮ್ಮ ಕಿವಿಯಲ್ಲಿ ಸದಾ ಗುಂಯ್‌ಗುಡುತ್ತಿರುತ್ತವೆ. ಅವರಿಗಾಗಿ ನಾವು ಚೆನ್ನಾಗಿ ಆಡಲು ಬದ್ಧರಾಗಿದ್ದೇವೆ’ ಎಂದು ಮುಂಬೈಕರ್ ಹೇಳಿದರು.

ಮೊಹಮ್ಮದ್ ಶಮಿಗೆ ಟೂರ್ನಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿಯುವ ಅವಕಾಶ ನೀಡದ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ಶಮಿ ಅತ್ಯಂತ ದೃಢಚಿತ್ತ ಮತ್ತು ಗಟ್ಟಿ ಮನೋಬಲದ ವ್ಯಕ್ತಿ. ಅವರು ಆರಂಭಿಕ ಹಂತದಲ್ಲಿ ಆಡಲು ಫಿಟ್‌ನೆಸ್‌ ಜೊತೆ ನೀಡದಿರುವ ಸಾಧ್ಯತೆ ಇತ್ತು. ಅಲ್ಲದೇ ತಂಡದ ಸಂಯೋಜನೆ ಮತ್ತು ತಂತ್ರಗಾರಿಕೆಗೆ ತಕ್ಕಂತೆ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಶಮಿ ಪ್ರತಿದಿನವೂ ತಮ್ಮನ್ನು ತಾವು ಗಟ್ಟಿಗೊಳಿಸಿಕೊಂಡು ಸಿದ್ಧವಾದರು. ಅವಕಾಶ ಸಿಕ್ಕ ಮೇಲೆ ಅವರು ವಿಜೃಂಭಿಸುತ್ತಿರುವುದನ್ನು ನೀವೇ ನೋಡುತ್ತಿದ್ದೀರಿ. ಅವರಷ್ಟೇ ಅಲ್ಲ. ತಂಡದಲ್ಲಿ ಎಲ್ಲರ ಮನೋಬಲವೂ ಇದೇ ರೀತಿಯಾಗಿದೆ. ಯಾರಿಗೆ ಎಲ್ಲಿ, ಯಾವಾಗ ಅವಕಾಶ ಸಿಗುವುದೋ ಗೊತ್ತಿಲ್ಲ. ಸಿಕ್ಕಾಗ ಸಮರ್ಥವಾಗಿ ನಿಭಾಯಿಸಲು ಸಿದ್ಧರಾಗಿರಬೇಕು. ಅಂತಹ ಮನೋಭಾವ ನಮ್ಮಲ್ಲಿ ಎಲ್ಲರಿಗೂ ಇದೆ’ ಎಂದರು.

‘ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಹನ್ನೊಂದರ ಬಳಗದ ಬದಲಾವಣೆ ಬಗ್ಗೆ ಈಗಲೇ ನಿರ್ಧಾರ ಮಾಡಿಲ್ಲ. ಇರುವ 15 ಆಟಗಾರರಲ್ಲಿ ಯಾರಿಗೆ ಬೇಕಾದರೂ ಅವಕಾಶ ದೊರೆಯಬಹುದು. ಭಾನುವಾರ ಪಿಚ್ ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.

ಪಿಚ್ ಹೇಗಿದೆ?

ಲೀಗ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವು ಇಲ್ಲಿಯೇ ನಡೆದಿತ್ತು. ಇನಿಂಗ್ಸ್ ಆರಂಭದಲ್ಲಿ ವೇಗಿಗಳಿಗೆ ನಂತರದ ಹಂತದಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ಲಭಿಸಿತ್ತು. ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್ ಮಿಂಚಿದ್ದರು. ಭಾರತವು ಪಾಕ್ ತಂಡವನ್ನು ಕೇವಲ 191 ರನ್‌ಗಳಿಗೆ ಕಟ್ಟಿಹಾಕಿತ್ತು. ಏಳು ವಿಕೆಟ್‌ಗಳಿಂದ ಗೆದ್ದಿತ್ತು.

‘ಆಗ ಇಲ್ಲಿ ಹೆಚ್ಚು ಉಷ್ಣಾಂಶವಿತ್ತು. ಆದರೆ ಈಗ ಸ್ವಲ್ಪ ಕಡಿಮೆ ಇದೆ. ತಂಪು ವಾತಾವರಣವೂ ಇದೆ. ಪಂದ್ಯದ ದಿನ ಇಬ್ಬನಿ ಬೀಳುವುದನ್ನು ಗಮನಿಸಿ ತಂತ್ರ ರೂಪಿಸಬೇಕು. ಮೊದಲು ಬ್ಯಾಟಿಂಗ್ ಮತ್ತು ಚೇಸಿಂಗ್ ಯಾವುದೇ ಇರಲಿ ಸಮರ್ಥವಾಗಿ ಎದುರಿಸುತ್ತೇವೆ’ ಎಂದು ರೋಹಿತ್ ಹೇಳಿದ್ದಾರೆ.

ಇದುವರೆಗೆ ಇಲ್ಲಿ 31 ಏಕದಿನ  ಪಂದ್ಯಗಳು (ಮರುನಿರ್ಮಾಣಕ್ಕಿಂತ ಮುಂಚೆ ಮತ್ತು ನಂತರ ಸೇರಿ) ನಡೆದಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಇದರಲ್ಲಿ 17 ಬಾರಿ ಗೆದ್ದಿವೆ. ಚೇಸಿಂಗ್‌ ಮಾಡಿದ ತಂಡಗಳು 15 ಸಲ ಜಯಿಸಿವೆ.  

ರಾಜಕಾರಣಿಗಳ ದಂಡು

ಪಂದ್ಯ ವೀಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಸಚಿವರು ಆಗಮಿಸಲಿದ್ದಾರೆ. ಅವರೊಂದಿಗೆ ಗುಜರಾತ್ ರಾಜ್ಯದ ಪ್ರಮುಖ ರಾಜಕಾರಣಿಗಳೂ ಹಾಜರಿರಲಿದ್ದಾರೆ. 

ಅದರಿಂದಾಗಿ ಬಿಗಿಯಾದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪೊಲೀಸರು ಮತ್ತು ಎಸ್‌ಪಿಜಿ ಪಡೆಗಳು ಕಟ್ಟೆಚ್ಚರ ವಹಿಸಿವೆ. ಹೆಜ್ಜೆಹೆಜ್ಜೆಗೂ ತಪಾಸಣೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT