ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup | ಬಾಂಗ್ಲಾ ಎದುರು ಸೆಣಸಾಟ; ಮೊದಲ ಜಯದ ನಿರೀಕ್ಷೆಯಲ್ಲಿ ಇಂಗ್ಲೆಂಡ್

Published 10 ಅಕ್ಟೋಬರ್ 2023, 0:30 IST
Last Updated 10 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಧರ್ಮಶಾಲಾ: ವಿಶ್ವಕಪ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್‌ ಕೈಯಲ್ಲಿ ಎದುರಾಗಿದ್ದ ಸೋಲಿನ ಆಘಾತದಿಂದ ಹೊರಬರುವ ಪ್ರಯತ್ನದಲ್ಲಿರುವ  ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡ, ಮಂಗಳವಾರ ಇಲ್ಲಿ ಬಾಂಗ್ಲಾದೇಶ ವಿರುದ್ಧ ಹಣಾಹಣಿ ನಡೆಸಲಿದೆ.

ನ್ಯೂಜಿಲೆಂಡ್‌ ಎದುರು ಅನುಭವಿಸಿದ್ದ 9 ವಿಕೆಟ್‌ಗಳ ಸೋಲು ಇಂಗ್ಲೆಂಡ್‌ಗೆ ಟೂರ್ನಿಯ ಆರಂಭದಲ್ಲೇ ಎಚ್ಚರಿಕೆಯನ್ನು ನೀಡಿದೆ. ಆದ್ದರಿಂದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ತಂಡದ ಆಟಗಾರರು ಪುಟಿದೆದ್ದು ನಿಲ್ಲುವರು ಎಂಬ ವಿಶ್ವಾಸವನ್ನು ನಾಯಕ ಜೋಸ್‌ ಬಟ್ಲರ್‌ ಹೊಂದಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಇಂಗ್ಲೆಂಡ್‌ 282 ರನ್ ಪೇರಿಸಿತ್ತು. ಡೆವೊನ್‌ ಕಾನ್ವೆ ಮತ್ತು ರಚಿನ್‌ ರವೀಂದ್ರ ಅವರ ಅಬ್ಬರದ ಶತಕದ ನೆರವಿನಿಂದ ನ್ಯೂಜಿಲೆಂಡ್‌, 37 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತ್ತು.

ಕಿವೀಸ್‌ ಬ್ಯಾಟರ್‌ಗಳು ಇಂಗ್ಲೆಂಡ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದರು. ನ್ಯೂಜಿಲೆಂಡ್‌ನ ವೇಗಿಗಳಾದ ಟ್ರೆಂಟ್‌ ಬೌಲ್ಟ್‌, ಮ್ಯಾಟ್‌ ಹೆನ್ರಿ ಅವರು ಇಂಗ್ಲೆಂಡ್‌ ಬ್ಯಾಟರ್‌ಗಳಿಗೆ ಕಡಿವಾಣ ತೊಡಿಸಿದ್ದರು. ಆದರೆ ಅದೇ ಪಿಚ್‌ನಲ್ಲಿ ಇಂಗ್ಲೆಂಡ್‌ನ ಬೌಲರ್‌ಗಳಾದ ಕ್ರಿಸ್‌ ವೋಕ್ಸ್‌, ಮಾರ್ಕ್‌ ವುಡ್‌ ಮತ್ತು ಸ್ಯಾಮ್‌ ಕರನ್‌ ಅವರು ಪ್ರಭಾವಿ ಎನಿಸಿರಲಿಲ್ಲ. ಕಾನ್ವೆ ಮತ್ತು ರಚಿನ್‌ ಎರಡನೇ ವಿಕೆಟ್‌ಗೆ 272 ರನ್‌ಗಳ ಜತೆಯಾಟ ನೀಡಿದ್ದರು.

ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ತನ್ನ ಮೊದಲ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವನ್ನು ಮಣಿಸಿರುವ ಬಾಂಗ್ಲಾದೇಶ ತಂಡ ಆತ್ಮವಿಶ್ವಾಸದಲ್ಲಿದ್ದು, ಇಂಗ್ಲೆಂಡ್‌ಗೆ ಪ್ರಬಲ ಪೈಪೋಟಿ ಒಡ್ಡುವ ನಿರೀಕ್ಷೆಯಿದೆ.

ನಾಯಕ ಶಕೀಬ್‌ ಅಲ್‌ ಹಸನ್ ಅವರು ಯಾವುದೇ ಎದುರಾಳಿಗೂ ಸವಾಲಾಗಿ ಪರಿಣಮಿಸಬಲ್ಲರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಲಿಟನ್‌ ದಾಸ್, ಮೆಹಿದಿ ಹಸನ್‌ ಮಿರಾಜ್‌ ಮತ್ತು ನಜ್ಮುಲ್‌ ಹೊಸೇನ್‌ ಶಾಂತೊ ಅವರು ಈಚೆಗಿನ ಕೆಲ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

ಬಾಂಗ್ಲಾ ಎದುರು ಸೋತಿದ್ದ ಅಫ್ಗಾನಿಸ್ತಾನ ತಂಡದ ಕೋಚ್‌ ಜೊನಾಥನ್‌ ಟ್ರಾಟ್‌ ಅವರು ಧರ್ಮಶಾಲಾ ಅಂಗಳದ ಔಟ್‌ಫೀಲ್ಡ್‌ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಫೀಲ್ಡಿಂಗ್‌ ವೇಳೆ ಆಟಗಾರರು ಗಾಯಗೊಳ್ಳದೇ ಇದ್ದದ್ದು ಅದೃಷ್ಟ ಎಂದಿದ್ದರು.

ಟೂರ್ನಿಯ ಆರಂಭದಲ್ಲೇ ಯಾವುದೇ ಪ್ರಮುಖ ಆಟಗಾರ ಗಾಯಗೊಂಡರೆ ಅದು ತಂಡಕ್ಕೆ ಹಿನ್ನಡೆ ಉಂಟುಮಾಡಲಿದೆ. ಅಂತಹ ಸನ್ನಿವೇಶ ಎದುರಾಗದಂತೆ ನೋಡಿಕೊಳ್ಳುವ ಹೆಚ್ಚುವರಿ ಸವಾಲು ಕೂಡಾ ಉಭಯ ತಂಡಗಳ ಮೇಲಿದೆ.

ಇಂಗ್ಲೆಂಡ್‌ ತಂಡ ಗೆಲ್ಲುವ ‘ಫೇವರಿಟ್‌’ ಎನಿಸಿದೆಯಾದರೂ, ಅಚ್ಚರಿ ಉಂಟುಮಾಡಬಲ್ಲ ಸಾಮರ್ಥ್ಯ ಬಾಂಗ್ಲಾಕ್ಕೆ ಇರುವುದಿಂದ ಈ ಪಂದ್ಯ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಪಂದ್ಯ ಆರಂಭ: ಬೆಳಿಗ್ಗೆ 10.30

ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT