ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ನ 'ಶ್ರೇಷ್ಠ ಆಟಗಾರ' ರೇಸ್‌ನಲ್ಲಿ 9 ಕ್ರಿಕೆಟಿಗರು: ನಿಮ್ಮ ಆಯ್ಕೆ ಯಾರು?

Published 19 ನವೆಂಬರ್ 2023, 7:53 IST
Last Updated 19 ನವೆಂಬರ್ 2023, 7:53 IST
ಅಕ್ಷರ ಗಾತ್ರ

ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಅಂತಿಮ ಹಂತ ತಲುಪಿದೆ. ಇಂದು (ನವೆಂಬರ್‌ 19ರಂದು) ನಡೆಯುವ ಫೈನಲ್‌ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲು ತುದಿಗಾಲಲ್ಲಿ ನಿಂತಿವೆ.

1.3 ಲಕ್ಷ ಆಸನ ಸಾಮರ್ಥ್ಯದ ಈ ಕ್ರೀಡಾಂಗಣಕ್ಕೆ ದೇಶ, ವಿದೇಶಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ.

ಲೀಗ್‌ ಹಂತದ ಎಲ್ಲ ಪಂದ್ಯಗಳೂ ಸೇರಿದಂತೆ ಸತತವಾಗಿ 10 ಪಂದ್ಯಗಳನ್ನು ಗೆದ್ದಿರುವ ರೋಹಿತ್‌ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮೂರನೇ ಬಾರಿ ಏಕದಿನ ವಿಶ್ವಕಪ್‌ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ. ಮೊದಲೆರಡು ಪಂದ್ಯಗಳಲ್ಲಿ ಸೋತರೂ, ಬಳಿಕ ಪುಟಿದೆದ್ದಿರುವ ಆಸ್ಟ್ರೇಲಿಯಾ, ಆತಿಥೇಯ ತಂಡಕ್ಕೆ ಸೋಲುಣಿಸಿ 6ನೇ ಬಾರಿ ಚಾಂಪಿಯನ್‌ ಎನಿಸಿಕೊಳ್ಳುವ ಛಲದಲ್ಲಿದೆ.

ಟ್ರೋಫಿ ಎತ್ತಿ ಹಿಡಿಯುವ ನೆಚ್ಚಿನ ತಂಡಗಳು ಎನಿಸಿದ್ದ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ಸೆಮಿಫೈನಲ್‌ನಲ್ಲಿ ಮುಗ್ಗರಿಸಿವೆ. ಹಾಲಿ ಚಾಂಪಿಯನ್‌ ಇಂಗ್ಲೆಂಡ್‌, ಏಷ್ಯಾದ ಪ್ರಮುಖ ತಂಡಗಳಾದ ಪಾಕಿಸ್ತಾನ ಮತ್ತು ಶ್ರೀಲಂಕಾ ಈ ಬಾರಿ ಹೀನಾಯ ಪ್ರದರ್ಶನ ನೀಡಿ ಗುಂಪು ಹಂತದಲ್ಲೇ ನಿರ್ಗಮಿಸಿದವು. ದುರ್ಬಲ ತಂಡಗಳೆನಿಸಿದ್ದ ಅಫ್ಗಾನಿಸ್ತಾನ ಮತ್ತು ನೆದರ್ಲೆಂಡ್ಸ್‌ ಅಚ್ಚರಿಯ ಫಲಿತಾಂಶಗಳ ಮೂಲಕ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದವು.

ಸೆಮಿಫೈನಲ್‌ ಪಂದ್ಯಗಳ ಮುಕ್ತಾಯದ ವೇಳೆಗೆ ಬರೋಬ್ಬರಿ 711 ರನ್‌ ಗಳಿಸಿರುವ ವಿರಾಟ್‌ ಕೊಹ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕ ಸಿಡಿಸಿದ ದಾಖಲೆಯನ್ನೂ ಬರೆದಿದ್ದಾರೆ. ಅಫ್ಗಾನಿಸ್ತಾನ ವಿರುದ್ಧದ ಲೀಗ್‌ ಪಂದ್ಯದಲ್ಲಿ ಗುರಿ ಬೆನ್ನತ್ತುವ ವೇಳೆ ಅಮೋಘ ದ್ವಿಶತಕ ಸಿಡಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಏಕದಿನ ಕ್ರಿಕೆಟ್‌ ಇತಿಹಾಸದ ಶ್ರೇಷ್ಠ ಇನಿಂಗ್ಸ್‌ ಆಡಿದ್ದಾರೆ. ಅದೇ ಪಂದ್ಯದಲ್ಲಿ 129 ರನ್‌ ಗಳಿಸಿದ್ದ ಇಬ್ರಾಹಿಂ ಜದ್ರಾನ್‌, ವಿಶ್ವಕಪ್‌ನಲ್ಲಿ ಅಫ್ಗನ್‌ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್‌ ಎನಿಸಿದ್ದಾರೆ.

ಆಡಿದ ಕೇವಲ ಆರೇ ಪಂದ್ಯಗಳಲ್ಲಿ ಮೂರು ಬಾರಿ ಐದು ವಿಕೆಟ್‌ ಗೊಂಚಲು ಜೇಬಿಗಿಳಿಸಿಕೊಂಡಿರುವ ಮೊಹಮ್ಮದ್‌ ಶಮಿ, ಭಾರತದ ಪಾಲಿಗೆ ಫೈನಲ್‌ ಪಂದ್ಯದಲ್ಲಿ ಟ್ರಂಪ್‌ ಕಾರ್ಡ್‌ ಆಗಲಿದ್ದಾರೆ. ಬಿರುಸಾಗಿ ಬ್ಯಾಟ್‌ ಬೀಸುವ ಮೂಲಕ ಎದುರಾಳಿಗಳ ತಂತ್ರಗಳನ್ನು ಆರಂಭದಲ್ಲೇ ಪುಡಿಗಟ್ಟುತ್ತಿರುವ ರೋಹಿತ್‌ ಶರ್ಮಾ, ಟೀಂ ಇಂಡಿಯಾದ ಬ್ಯಾಟಿಂಗ್‌ಗೆ ಸಾಣೆ ಹಿಡಿದಿದ್ದಾರೆ.

ಬ್ಯಾಟರ್‌ಗಳನ್ನು ಸ್ಪಿನ್‌ ಸುಳಿಯಲ್ಲಿ ಸಿಲುಕಿಸುತ್ತಿರುವ ಆ್ಯಡಂ ಜಂಪಾ, ಆಸ್ಟ್ರೇಲಿಯಾ ತಂಡದ ಫೈನಲ್‌ ಸಾಧನೆಯ ಹಿಂದೆ ಇದ್ದಾರೆ. ಚೊಚ್ಚಲ ವಿಶ್ವಕಪ್‌ನಲ್ಲೇ ಗಮನ ಸೆಳೆದ ನ್ಯೂಜಿಲೆಂಡ್‌ನ ರಚಿನ್‌ ರವೀಂದ್ರ ಮತ್ತು ಡೆರಿಲ್‌ ಮಿಚೆಲ್‌ ಆಟವನ್ನೂ ಮರೆಯುವಂತಿಲ್ಲ.

ಹೀಗೆ ಈ ವಿಶ್ವಕಪ್‌ನಲ್ಲಿ ಮಿಂಚಿರುವ 9 ಆಟಗಾರರು, 'ಟೂರ್ನಿಯ ಶ್ರೇಷ್ಠ ಆಟಗಾರ' ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಕ್ರಿಕೆಟ್‌ ಪ್ರಿಯರು ತಮ್ಮ ನೆಚ್ಚಿನ ಆಟಗಾರನನ್ನು ಆಯ್ಕೆ ಮಾಡಲು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಅವಕಾಶ ಕಲ್ಪಿಸಿದೆ. ವಿಶ್ವಕಪ್‌ ಟೂರ್ನಿಗೆ ಸಂಬಂಧಿಸಿದ ವೆಬ್‌ಸೈಟ್‌ನ (https://www.cricketworldcup.com) ಅವಾರ್ಡ್ಸ್‌ ವಿಭಾಗದಲ್ಲಿ (https://www.icc-cricket.com/awards/player-of-the-tournament) ವೋಟ್‌ ಮಾಡಬಹುದಾಗಿದೆ.

ರೇಸ್‌ನಲ್ಲಿರುವ ಆಟಗಾರರು

01. ವಿರಾಟ್‌ ಕೊಹ್ಲಿ: 711 ರನ್‌

ಟೂರ್ನಿಯಲ್ಲಿ ಆಡಿರುವ 10 ಪಂದ್ಯಗಳ ಪೈಕಿ ಎಂಟರಲ್ಲಿ 50ಕ್ಕಿಂತ ಹೆಚ್ಚು ರನ್‌ ಗಳಿಸಿದ ದಾಖಲೆ ಬರೆದಿರುವ ವಿರಾಟ್‌, ಮೂರು ಸಲ ಮೂರಂಕಿ ದಾಟಿದ್ದಾರೆ. ಕೊಹ್ಲಿ ಖಾತೆಯಲ್ಲಿ ಒಟ್ಟು 711 ರನ್‌ ಇವೆ. ಇದು ಬ್ಯಾಟರ್‌ವೊಬ್ಬ ಒಂದೇ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಗಳಿಸಿದ ಗರಿಷ್ಠ ರನ್‌ ಆಗಿದೆ. ಇದಕ್ಕೂ ಮೊದಲು ಈ ಸಾಧನೆ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ (673 ರನ್) ಅವರ ಹೆಸರಿನಲ್ಲಿತ್ತು.

ಎರಡು ಪಂದ್ಯಗಳ ವೈಫಲ್ಯ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲೂ ಮಿಂಚಿರುವ ಕೊಹ್ಲಿ, ಭಾರತ ತಂಡದ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ಅಂತಿಮ ಹಣಾಹಣಿಯಲ್ಲೂ ಇದೇ ಲಯದಲ್ಲಿ ರನ್ ಗಳಿಸಿದರೆ 'ಈ ಸಲ ಕಪ್ ನಮ್ಮದೇ'

02. ಆ್ಯಡಂ ಜಂಪಾ: 22 ವಿಕೆಟ್‌

ಆಸ್ಟ್ರೇಲಿಯಾ ತಂಡವು 2021ರ ಟಿ-20 ವಿಶ್ವಕಪ್‌ ಜಯಿಸಲು ನೆರೆವಾಗಿದ್ದ ಆ್ಯಡಂ ಜಂಪಾ, ಈ ಬಾರಿ ಏಕದಿನ ವಿಶ್ವಕಪ್‌ ಗೆದ್ದುಕೊಡಲು ಪಣತೊಟ್ಟಿದ್ದಾರೆ. ಟೂರ್ನಿಯಲ್ಲಿ ಎಲ್ಲ ಪಂದ್ಯಗಳಲ್ಲಿಯೂ ತಮ್ಮ ತಂಡದ ಪರ ಕಣಕ್ಕಿಳಿದಿರುವ ಅವರು ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮೂರು ಬಾರಿ 4 ವಿಕೆಟ್‌, ಎರಡು ಸಲ ಮೂರು ವಿಕೆಟ್‌ ಕಿತ್ತಿರುವ ಜಂಪಾ, ಪ್ರತಿ 3.3 ಓವರ್‌ಗೆ ಒಂದರಂತೆ ವಿಕೆಟ್‌ ಉರುಳಿಸಿದ್ದಾರೆ. ಅವರ ಖಾತೆಯಲ್ಲಿ ಬರೋಬ್ಬರಿ 22 ವಿಕೆಟ್‌ಗಳಿವೆ. ಫೈನಲ್‌ನಲ್ಲಿ ಭಾರತದ ಎದುರು ಆಸಿಸ್‌ ಗೆಲ್ಲಬೇಕಾದರೆ ಜಂಪಾ ತಮ್ಮ ಮಣಿಕಟ್ಟಿನ್ನು ಚೆನ್ನಾಗಿ ತಿರುಗಿಸಬೇಕಿದೆ.

03. ಕ್ವಿಂಟನ್‌ ಡಿ ಕಾಕ್: 594 ರನ್‌

ಆಡುವ ಪ್ರಮುಖ ಟೂರ್ನಿಗಳಲ್ಲಿ ಅಧಿಕ ರನ್‌ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಕಾಣಿಸಿಕೊಳ್ಳುವ ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್‌ ಕ್ವಿಂಟನ್‌ ಡಿ ಕಾಕ್‌, ಈ ಬಾರಿ 594 ರನ್‌ ಕಲೆಹಾಕಿದ್ದಾರೆ.

ಟೂರ್ನಿಯಲ್ಲಿ ನಾಲ್ಕು ಶತಕ ಗಳಿಸಿದ ಕ್ವಿಂಟನ್‌, ಆಫ್ರಿಕಾ ಪಡೆ ಸೆಮಿಫೈನಲ್‌ ತಲುಪಲು ನೆರವಾದರು. ಆದರೆ, ನಾಕೌಟ್‌ ಪಂದ್ಯದಲ್ಲಿ ಇವರ ಬ್ಯಾಟ್‌ ಸದ್ದು ಮಾಡಲಿಲ್ಲ. ಹೀಗಾಗಿ ಈ ತಂಡಕ್ಕೆ ಚೋಕರ್ಸ್‌ ಪಟ್ಟ ತಪ್ಪಲಿಲ್ಲ.

04. ಮೊಹಮ್ಮದ್‌ ಶಮಿ: 23 ವಿಕೆಟ್‌

ತಂಡದ ಪ್ರಮುಖ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಗಾಯಗೊಂಡಿದ್ದರಿಂದ ಅವಕಾಶ ಪಡೆದ ಮೊಹಮ್ಮದ್‌ ಶಮಿ, ಆರಂಭದ ಪಂದ್ಯಗಳಲ್ಲಿ ತಂಡದ ಆದ್ಯತೆಯ ಬೌಲರ್‌ ಆಗಿರಲಿಲ್ಲ. ಆದರೆ, ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡ ಅವರು, ಫೈನಲ್‌ನಲ್ಲಿ ಭಾರತ ತಂಡಕ್ಕೆ ʼಅನಿವಾರ್ಯʼ ಆಟಗಾರನಾಗಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯವು ಶಮಿಯ ಮಹತ್ವವನ್ನು ಸಾರಿದಂತಿತ್ತು. ಈ ಪಂದ್ಯದಲ್ಲಿ ಅವರು 7 ವಿಕೆಟ್‌ ಪಡೆಯುವ ಮೂಲಕ ತಂಡದ ಫೈನಲ್‌ ಹಾದಿಯನ್ನೂ ಸುಗಮಗೊಳಿಸಿದರು.

ಮೊದಲ ನಾಲ್ಕು ಪಂದ್ಯಗಳಲ್ಲಿ ಬೆಂಚ್‌ ಬಿಸಿ ಮಾಡಿದ್ದ ಶಮಿ, ಟೂರ್ನಿಯಲ್ಲಿ ತಾವಾಡಿದ ಮೊದಲ (ನ್ಯೂಜಿಲೆಂಡ್‌ ವಿರುದ್ಧ) ಪಂದ್ಯದಲ್ಲಿ ಬೆಂಕಿಯುಗುಳಿದರು. ಈ ಪಂದ್ಯದಲ್ಲಿ 5 ವಿಕೆಟ್‌ ಜೇಬಿಗಿಳಿಸುವುದರೊಂದಿಗೆ ವಿಕೆಟ್‌ ಬೇಟೆ ಶುರು ಮಾಡಿದ ಅವರು ಸದ್ಯ ಹೆಚ್ಚು ವಿಕೆಟ್‌ ಗಳಿಸಿದ ಬೌಲರ್‌ ಎನಿಸಿದ್ದಾರೆ. ಮೂರು ಬಾರಿ 5 ವಿಕೆಟ್‌ ಕಿತ್ತ ಈ ವೇಗಿಯ ಹೆಸರಿನ ಮುಂದೆ 23 ವಿಕೆಟ್‌ಗಳಿವೆ. ವಿಶ್ವಕಪ್‌ನಲ್ಲಿ ವೇಗವಾಗಿ 50 ವಿಕೆಟ್‌ಗಳ ಗಡಿ ದಾಟಿದ ಆಟಗಾರ ಎಂಬ ಶ್ರೇಯವೂ ಅವರದ್ದಾಗಿದೆ.

ಶಮಿಯ ಲಯ ತಪ್ಪದ ಸೀಮ್‌, ಸ್ವಿಂಗ್‌ ಎಸೆತಗಳು ಭಾರತಕ್ಕೆ ವಿಶ್ವಕಪ್‌ ತಂದುಕೊಡುವತ್ತ ನುಗ್ಗುತ್ತಿವೆ.

05. ರಚಿನ್‌ ರವಿಂದ್ರ: 579 ರನ್‌, 5 ವಿಕೆಟ್‌

ಆಡಿದ ಚೊಚ್ಚಲ ವಿಶ್ವಕಪ್‌ನಲ್ಲೇ ಮೂರು ಶತಕ ಹಾಗೂ ಎರಡು ಅರ್ಧಶತಕ ಸಿಡಿಸಿದ ರಚಿನ್‌ ರವೀಂದ್ರ, ನ್ಯೂಜಿಲೆಂಡ್‌ನ ಭರವಸೆಯ ಕ್ರಿಕೆಟಿಗ ಎನಿಸಿದ್ದಾರೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್ ಬೌಲರ್‌ಗಳನ್ನು ಉದ್ಘಾಟನಾ ಪಂದ್ಯದಲ್ಲಿ ಲೀಲಾಜಾಲವಾಗಿ ದಂಡಿಸುವ ಮೂಲಕ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯವನ್ನು ಅನಾವರಣಗೊಳಿಸಿದ್ದಾರೆ. ಬೌಲಿಂಗ್‌ನಲ್ಲಿಯೂ ಉಪಯುಕ್ತ ಕೊಡುಗೆ ನೀಡಿರುವ ಅವರು 5 ವಿಕೆಟ್‌ ಸಾಧನೆಯೊಂದಿಗೆ ಆಲ್‌ರೌಂಡ್ ಆಟವಾಡಿದ್ದಾರೆ.

06. ಗ್ಲೆನ್‌ ಮ್ಯಾಕ್ಸ್‌ವೆಲ್‌: 398 ರನ್‌, 5 ವಿಕೆಟ್‌

ಸೆಮಿಫೈನಲ್‌ ತಲುಪಲು ಮಹತ್ವದ್ದೆನಿಸಿದ್ದ ಅಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್‌ ಅಮೋಘ ದ್ವಿಶತಕ ಸಿಡಿಸಿದ್ದು, ಕ್ರಿಕೆಟ್‌ ಪ್ರಿಯರ ಮನದಲ್ಲಿ ಬಹುಕಾಲದ ವರೆಗೆ ಉಳಿಯಲಿದೆ. ಅಫ್ಗನ್‌ ನೀಡಿದ್ದ 292 ರನ್ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ, 97 ರನ್‌ಗೆ 7 ವಿಕೆಟ್‌ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಈ ವೇಳೆ ಮ್ಯಾಕ್ಸಿ ಪವಾಡಸದೃಶ ರೀತಿಯಲ್ಲಿ ಬ್ಯಾಟ್‌ ಬೀಸಿದ್ದರು.

ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ವೇಗದ ಶತಕ (40 ಎಸೆತ) ಸಿಡಿಸಿದ್ದೂ ಕಡಿಮೆ ಸಾಧನೆಯೇನಲ್ಲ.

ಟೂರ್ನಿಯಲ್ಲಿ ತಲಾ ಒಂದು ದ್ವಿಶತಕ, ಶತಕ ಸಹಿತ 398 ರನ್‌ ಗಳಿಸಿರುವ ಈ ಆಲ್‌ರೌಂಡರ್, ಐದು ವಿಕೆಟ್‌ಗಳನ್ನೂ ಪಡೆದಿದ್ದಾರೆ. ಇದರೊಂದಿಗೆ ಆಸಿಸ್‌ಗೆ ಬೌಲಿಂಗ್‌ನಲ್ಲಿಯೂ ಶಕ್ತಿ ತುಂಬುತ್ತಿದ್ದಾರೆ.

07. ರೋಹಿತ್‌ ಶರ್ಮಾ: 550 ರನ್‌

ತವರಿನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ನಾಯಕತ್ವದ ಒತ್ತಡದ ನಡುವೆಯೂ ಬ್ಯಾಟಿಂಗ್‌ನಲ್ಲಿ ಯಶಸ್ಸು ಸಾಧಿಸಿರುವ ರೋಹಿತ್‌ ಶರ್ಮಾ, ಭಾರತ ತಂಡಕ್ಕೆ ಬಿರುಸಿನ ಆರಂಭ ನೀಡುತ್ತಿದ್ದಾರೆ.

120ಕ್ಕೂ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿರುವ ಅವರು, ಎದುರಾಳಿ ಬೌಲರ್‌ಗಳ ಆತ್ಮ ವಿಶ್ವಾಸ ಕುಸಿಯುವಂತೆ ಮಾಡುತ್ತಿದ್ದಾರೆ. ಇದರಿಂದ ಉಳಿದ ಬ್ಯಾಟರ್‌ಗಳು ನಿರಾಯಾಸವಾಗಿ ಬ್ಯಾಟ್‌ ಬೀಸಲು ಸಾಧ್ಯವಾಗುತ್ತಿದೆ.

ಒಂದು ಶತಕ ಹಾಗೂ ಮೂರು ಅರ್ಧಶತಕಗಳು ರೋಹಿತ್‌ ಬ್ಯಾಟ್‌ನಿಂದ ಬಂದಿದ್ದು, ಒಟ್ಟು 550 ರನ್‌ ಗಳಿಸಿದ್ದಾರೆ.

08. ಜಸ್‌ಪ್ರಿತ್‌ ಬೂಮ್ರಾ: 18 ವಿಕೆಟ್‌

ಭಾರತ ತಂಡದ ಪ್ರಮುಖ ವೇಗಿ ಜಸ್‌ಪ್ರಿತ್‌ ಬೂಮ್ರಾ, ತಮ್ಮ ಶಿಸ್ತಿನ ಬೌಲಿಂಗ್‌ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ದಿಕ್ಕೆಡಿಸುತ್ತಿದ್ದಾರೆ. ಒಂದು ಬಾರಿ ನಾಲ್ಕು ವಿಕೆಟ್‌ ಸಾಧನೆಯೊಂದಿಗೆ ಒಟ್ಟು 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಟೂರ್ನಿಯಲ್ಲಿ ಅತಿಹೆಚ್ಚು (7) ಮೇಡನ್‌ ಓವರ್‌ ಎಸೆದಿರುವ ಇವರು ಕೇವಲ 3.98ರ ಎಕಾನಮಿಯಲ್ಲಿ ರನ್‌ ನೀಡಿದ್ದಾರೆ. ನಿರಂತರವಾಗಿ ವಿಕೆಟ್‌ ಪಡೆಯದಿದ್ದರೂ, ರನ್‌ ಬಿಟ್ಟುಕೊಡದೆ ಒತ್ತಡ ಹೇರುವುದರಲ್ಲಿ ಬೂಮ್ರಾ ನಿಸ್ಸೀಮ. ಇದು, ತಂಡದ ಉಳಿದ ಬೌಲರ್‌ಗಳ ಯಶಸ್ಸಿಗೂ ಕಾರಣವಾಗುತ್ತಿದೆ.

09. ಡೆರಿಲ್‌ ಮಿಚೆಲ್:‌ 552 ರನ್‌

ಟೂರ್ನಿಯಲ್ಲಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕೊಹ್ಲಿ, ಡಿ ಕಾಕ್‌ ಮತ್ತು ರವೀಂದ್ರ ನಂತರದ ಸ್ಥಾನದಲ್ಲಿರುವ ಡೆರಿಲ್‌ ಮಿಚೆಲ್‌ 552 ರನ್‌ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕಗಳು ಸೇರಿವೆ.

ಎರಡೂ ಶತಕಗಳು ಭಾರತದ ವಿರುದ್ಧವೇ ಬಂದಿರುವುದು ವಿಶೇಷ. ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ನೀಡಿದ್ದ 398 ರನ್‌ ಗುರಿ ಎದುರು ಮಿಚೆಲ್‌ ಬ್ಯಾಟ್‌ ಬೀಸಿದ ಶೈಲಿ ಉಲ್ಲೇಖಾರ್ಹ. ತಮ್ಮ ತಂಡಕ್ಕೆ ಜಯ ತಂದುಕೊಡಲು ಭಾರಿ ಹೋರಾಟ ನಡೆಸಿದ್ದ ಅವರು 124 ರನ್‌ ಗಳಿಸಿ ಔಟಾಗಿದ್ದರು. ರೋಹಿತ್ ಪಡೆಗೆ ಗೆಲುವು ಖಾತ್ರಿಯಾದದ್ದು ಈತನ ವಿಕೆಟ್‌ ಪತನದ ಬಳಿಕವೇ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT