ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಹರಿಣಗಳಿಗೆ ಉತ್ಸಾಹಿ ಅಮೆರಿಕದ ಸವಾಲು- ಸೂಪರ್ ಎಂಟರ ಮೊದಲ ಪಂದ್ಯ

ಸೂಪರ್ ಎಂಟರ ಹಂತದ ಮೊದಲ ಪಂದ್ಯ ಇಂದು
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
ಅಕ್ಷರ ಗಾತ್ರ

ನಾರ್ತ್ ಸೌಂಡ್‌ (ಆ್ಯಂಟಿಗಾ): ಸ್ಫೂರ್ತಿಯುತ ಅಮೆರಿಕ ತಂಡವು ಟಿ20 ವಿಶ್ವಕಪ್‌ ಸೂಪರ್‌ ಎಂಟರ ಹಂತದ ಪಂದ್ಯದಲ್ಲಿ  ಪ್ರಬಲ ದಕ್ಷಿಣ ಆಫ್ರಿಕಾ ತಂಡವನ್ನು ಬುಧವಾರ ಎದುರಿಸಲಿದೆ. ದಕ್ಷಿಣ ಆಫ್ರಿಕಾ ತಂಡದ ವಿಶ್ವದರ್ಜೆಯ ಬ್ಯಾಟರ್‌ಗಳು ಸರ್‌ ವಿವ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ತಮ್ಮ ನೈಜ ಸಾಮರ್ಥ್ಯವನ್ನು ಪ್ರದರ್ಶಿಸಬೇಕಾದ ಸವಾಲು ಎದುರಿಸುತ್ತಿದ್ದಾರೆ.

ಈ ಟೂರ್ನಿಯಲ್ಲಿ ಅಜೇಯವಾಗುಳಿದಿರುವ ತಂಡಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಒಂದಾಗಿದೆ. ಆದರೆ ಎಲ್ಲಾ ನಾಲ್ಕೂ ಪಂದ್ಯಗಳಲ್ಲಿ ಬೌಲರ್‌ಗಳ ಶ್ರಮವೇ ಗೆಲುವಿನಲ್ಲಿ ಎದ್ದುಕಂಡಿದೆ. ಬ್ಯಾಟರ್‌ಗಳಿಗೆ ಸವಾಲಾಗಿದ್ದ ನ್ಯೂಯಾರ್ಕ್‌ನ ಪಿಚ್‌ಗಳಲ್ಲಿ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿಲ್ಲ. ನೇಪಾಳದ ದಾಳಿಯೆದುರೂ ಅದರ ಬ್ಯಾಟರ್‌ಗಳು ಪರದಾಡಿದ್ದರು.

ಬೀಸಾಟ ಆಡುವ ಕ್ವಿಂಟನ್ ಡಿಕಾಕ್, ಹೆನ್ರಿಚ್‌ ಕ್ಲಾಸೆನ್‌, ಟ್ರಿಸ್ಟನ್ ಸ್ಟಬ್ಸ್‌ ಮತ್ತು ಡೇವಿಡ್‌ ಮಿಲ್ಲರ್ ಅಂಥ ಆಟಗಾರರಿದ್ದರೂ ತಂಡದಿಂದ ಖ್ಯಾತಿಗೆ ತಕ್ಕ ಬ್ಯಾಟಿಂಗ್ ಬಂದಿಲ್ಲ. ಡಿಕಾಕ್‌, ರೀಜಾ ಹೆಂಡ್ರಿಕ್ಸ್‌ ಮತ್ತು ನಾಯಕ ಏಡನ್ ಮರ್ಕರಂ ಉತ್ತಮ ಇನಿಂಗ್ಸ್ ಆಡಬೇಕಾದ ಒತ್ತಡದಲ್ಲಿದ್ದಾರೆ.

ಸೂಪರ್‌ ಎಂಟರಲ್ಲಿ ಎರಡನೇ ಗುಂಪಿನಲ್ಲಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಮುಂದಿನ ಪಂದ್ಯಗಳನ್ನು ಹಾಲಿ ಚಾಂಪಿಯನ್ ಇಂಗ್ಲೆಂಡ್‌, ಆತಿಥೇಯ ವೆಸ್ಟ್ ಇಂಡೀಸ್‌ ಎದುರು ಆಡಬೇಕಾಗಿರುವ ಕಾರಣ ಅಮೆರಿಕದ ವಿರುದ್ಧದ ಪಂದ್ಯವನ್ನು ಗೆಲುವಿನೊಡನೇ ಆರಂಭಿಸುವ ಸವಾಲು ಇದೆ.

ಬೌಲರ್‌ಗಳ ಪೈಕಿ ಆ್ಯನ್ರಿಚ್‌ ನಾಕಿಯಾ ಅವರ ಅಸ್ಥಿರ ಪ್ರದರ್ಶನ ಕೊಂಚ ಚಿಂತೆಗೆ ಕಾರಣವಾಗಿದೆ. ಆದರೆ ಗುಂಪು ಹಂತದ ಎರಡು ಪಂದ್ಯಗಳಲ್ಲಿ ಅವರು ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ್ದಾರೆ. 9 ವಿಕೆಟ್‌ಗಳೊಂದಿಗೆ ಅವರು ಎರಡನೇ ಸ್ಥಾನ ಜಂಟಿಯಾಗಿ ಹಂಚಿಕೊಂಡಿದ್ದಾರೆ. ನಾಕಿಯಾ ಮತ್ತು ಒಟ್ನೀಲ್ ಬಾರ್ಟ್‌ಮನ್ ಜೋಡಿ ಪ್ರಬಲವಾಗಿದೆ. ಅನನುಭವಿ ಅಮೆರಿಕ ಎದುರು ಉತ್ತಮ ಪ್ರದರ್ಶನಕ್ಕೆ ಮಾರ್ಕೊ ಯಾನ್ಸೆನ್ ಮತ್ತು ಕಗಿಸೊ ರಬಾಡ ಕೂಡ ತವಕದಿಂದಿದ್ದಾರೆ.

ಭಾರತ ಮೂಲದ ಎಂಟು, ಪಾಕ್ ಮೂಲದ ಇಬ್ಬರು, ವೆಸ್ಟ್ ಇಂಡೀಸ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ ಮೂಲದ ತಲಾ ಒಬ್ಬರನ್ನು ಹೊಂದಿರುವ ಅಮೆರಿಕ ತನ್ನ ಮೊದಲ ಯತ್ನದಲ್ಲೇ ಸೂಪರ್‌ ಎಂಟಕ್ಕೆ ಲಗ್ಗೆಹಾಕಿದ್ದು, ಉತ್ಸಾಹದಿಂದಿದೆ. ಮೊನಾಂಕ್ ಪಟೇಲ್ ಸಾರಥ್ಯದ ತಂಡವು, ಆಕ್ರಮಣಕಾರಿ ಆಟದ ಬ್ರಾಂಡ್‌ ಪ್ರದರ್ಶಿಸಿದೆ.

ಲೀಗ್ ತಂಡದಲ್ಲಿ ಮಾಜಿ ಚಾಂಪಿಯನ್ ಪಾಕ್ ತಂಡವನ್ನು ಮಣಿಸಿದ್ದ ಅಮೆರಿಕ ನಂತರ ಎರಡು ಪಂದ್ಯ ಸೋತರೂ ಹೋರಾಟ ತೋರಿತ್ತು. ಆಫ್ರಿಕಾ ಎದುರು ಗೆಲ್ಲುವುದು ಕಠಿಣವಾದರೂ, ತಂಡ ಉತ್ಸಾಹದಿಂದ ಸಿದ್ಧವಾಗಿರುವುದಂತೂ ದಿಟ.

‘ಸೂಪರ್‌ ಎಂಟರ ಸವಾಲನ್ನು ಎದುರುನೋಡುತ್ತಿದ್ದೇವೆ. ಕಳೆದ ಕೆಲ ವಾರಗಳಿಂದ ನಾವು ಉತ್ತಮ ತಂಡದ ಎದುರೂ ಆಡಬಲ್ಲೆವು ಎಂಬುದನ್ನು ಶ್ರುತಪಡಿಸಿದ್ದೇವೆ’ ಎಂದು ಉಪನಾಯಕ ಆರನ್ ಜೋನ್ಸ್‌ ಕಳೆದ ವಾರ ಹೇಳಿದ್ದರು.

ತಂಡಗಳು ಇಂತಿವೆ: ಏಡನ್ ಮರ್ಕರಂ (ನಾಯಕ), ಒಟ್ನೀಲ್ ಬಾರ್ಟ್‌ಮನ್, ಜೆರಾಲ್ಡ್‌ ಕೋಝಿ, ಕ್ವಿಂಟನ್ ಡಿಕಾಕ್‌, ಬ್ಯೋರ್ನ್‌ ಫಾರ್ಟುಯಿ, ರೀಝಾ ಹೆಂಡ್ರಿಕ್ಸ್‌, ಮಾರ್ಕೊ ಯಾನ್ಸೆನ್, ಹೆನ್ರಿಚ್‌ ಕ್ಲಾಸೆನ್‌, ಕೇಶವ್ ಮಹಾರಾಜ್, ಡೇವಿಡ್‌ ಮಿಲ್ಲರ್, ಆ್ಯನ್ರಿಚ್ ನಾಕಿಯಾ, ಕಗಿಸೊ ರಬಾಡ, ರಿಯಾನ್ ರಿಕೆಲ್ಟನ್‌, ತಬ್ರೇಜ್ ಶಂಸಿ, ಟ್ರಿಸ್ಟನ್ ಸ್ಟಬ್ಸ್‌

ಅಮೆರಿಕ: ಮೊನಾಂಕ್ ಪಟೇಲ್ (ನಾಯಕ), ಆರನ್‌ ಜೋನ್ಸ್‌, ಆಂಡ್ರಿಯಸ್ ಗವುಸ್, ಕೋರಿ ಆ್ಯಂಡರ್ಸನ್‌, ಅಲಿ ಖಾನ್‌, ಹರ್ಮೀತ್ ಸಿಂಗ್, ಜೆಸ್ಸಿ ಸಿಂಗ್‌, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ನಿತೀಶ್ ಕುಮಾರ್, ನಾಸ್ತುಷ್‌ ಕೆಂಜಿಗೆ, ಸೌರಭ್ ನೇತ್ರಾವಳ್ಕರ್, ಶಾಡ್ಲಿ ವಾನ್ ಶಾಲ್ಕ್ವಿಕ್‌, ಸ್ಟೀವನ್ ಟೇಲರ್‌, ಶಯನ್ ಜಹಾಂಗಿರ್.

ಪಂದ್ಯ ಆರಂಭ: ರಾತ್ರಿ 8.00

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ಸ್ಟಾರ್‌ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT