ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದು ವಿಂಡೀಸ್– ಅಫ್ಗನ್ ಪೈಪೋಟಿ: ‘ಸಿ’ ಗುಂಪಿನ ಅಗ್ರಸ್ಥಾನ ನಿರ್ಧಾರಕ್ಕೆ ಮೇಲಾಟ

Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಅಕ್ಷರ ಗಾತ್ರ

ಗ್ರಾಸ್‌ ಐಲ್ (ಸೇಂಟ್ ಲೂಸಿಯಾ): ಆತಿಥೇಯ ವೆಸ್ಟ್‌ ಇಡೀಸ್ ಮತ್ತು ಟೂರ್ನಿಯಲ್ಲಿ ಸುಧಾರಿತ ಪ್ರದರ್ಶನ ನೀಡುತ್ತಿರುವ ಅಫ್ಗಾನಿಸ್ತಾನ ತಂಡಗಳು ಮಂಗಳವಾರ ಮುಖಾಮುಖಿಯಾಗಲಿದ್ದು, ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ಪೈಪೋಟಿಗೆ ನಡೆಯಲಿದೆ.

ಎರಡೂ ತಂಡಗಳು ಈಗಾಗಲೇ ಸೂಪರ್ ಎಂಟಕ್ಕೆ ಅರ್ಹತೆ ಪಡೆದಿವೆ. ಮೊದಲ ಪಂದ್ಯದಲ್ಲಿ ಪಾಪುವಾ ನ್ಯೂಗಿನಿ ಎದುರು ಗೆಲುವಿಗೆ ಪರದಾಡಿದ್ದ ವೆಸ್ಟ್‌ ಇಂಡೀಸ್‌ ನಂತರ ಲಯ ಕಂಡುಕೊಂಡು ಯುಗಾಂಡ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಸುಲಭವಾಗಿ ಸೋಲಿಸಿದೆ. ಇನ್ನೊಂದೆಡೆ ಕೆರಿಬೀಯನ್ ವಾತಾವರಣಕ್ಕೆ ಒಗ್ಗಿಕೊಂಡಿರುವ ರಶೀದ್ ಖಾನ್ ಬಳಗ ಸ್ಥಿರ ಪ್ರದರ್ಶನ ನೀಡಿದೆ.

‘ಆಟವನ್ನು ಸುಧಾರಿಸಿಕೊಳ್ಳುವುದು ನಮಗೆ ಈಗ ತೀರಾ ಮಹತ್ವದ್ದು. ಒಳ್ಳೆಯ  ಮತ್ತು ಸ್ಥಿರ ಆಟ ಆಡಬೇಕಾದರೆ ನಮಗೆ ಇದು ಅತ್ಯಗತ್ಯ’ ಎಂದು ವೆಸ್ಟ್‌ ಇಂಡೀಸ್ ನಾಯಕ ರೋವ್ಮನ್ ಪೊವೆಲ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಹೇಳಿದರು.

ಆರಂಭ ಆಟಗಾರ ರಹಮಾನುಲ್ಲಾ ಗುರ್ಬಾಜ್ (167 ರನ್) ಮತ್ತು ವೇಗದ ಬೌಲರ್ ಫಜಲ್ಹಖ್ ಫರೂಕಿ (12 ವಿಕೆಟ್‌) ಅವರು ಕ್ರಮವಾಗಿ ಬ್ಯಾಟರ್‌ ಮತ್ತು ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರವುದು ಅಫ್ಗನ್ನರು ಈ ಮಹತ್ವದ ಟೂರ್ನಿಯಲ್ಲಿ ಸಾಧಿಸಿರುವ ಮೇಲುಗೈಗೆ ಕನ್ನಡಿಯಾಗಿದೆ. ಅನುಭವಿ ಇಬ್ರಾಹಿಂ ಜದ್ರಾನ್ (114. ಇದರಲ್ಲಿ 70 ಅತ್ಯಧಿಕ) ಅವರೂ ಉಪಯುಕ್ತ ಆಟವಾಡಿದ್ದಾರೆ. ಆದರೆ ಈ ತಂಡದಲ್ಲಿ ಸಾಕಷ್ಟು ಬಲಗೈ ಆಟಗಾರರಿದ್ದು ಅವರಿಗೆ, ವೆಸ್ಟ್‌ ಇಂಡೀಸ್‌ನ ಎಡಗೈ ಸ್ಪಿನ್ನರ್‌ಗಳಾದ ಅಕೀಲ್ ಹುಸನೇ ಮತ್ತು ಗುಡಕೇಶ್ ಮೋತಿ ಸವಾಲಾಗಬಹುದು.

ಬೆರಳಿನ ಗಾಯದಿಂದ ಸ್ಪಿನ್ನರ್ ಮುಜೀಬ್ ಉರ್ ರಹಮಾನ್ ಅವರ ಸೇವೆಯನ್ನು ಅಫ್ಗಾನಿಸ್ತಾನ ಕಳೆದುಕೊಂಡಿದೆ. ಆದರೆ ತಂಡದಲ್ಲಿ ರಶೀದ್ ಖಾನ್ ಹಾಗೂ ನೂರ್ ಅಹ್ಮದ್ ಅವರಂಥ ಸ್ಪಿನ್ನರ್‌ಗಳಿದ್ದಾರೆ. ಈ ಸ್ಪಿನ್ನರ್‌ಗಳು ನ್ಯೂಜಿಲೆಂಡ್‌, ಪಾಪುವಾ ನ್ಯೂಗಿನಿ ಎದುರು ಪರಿಣಾಮಕಾರಿಯಾಗಿದ್ದರು.

ಇಲ್ಲಿನ ಡ್ಯಾರೆನ್ ಸ್ಯಾಮಿ ನ್ಯಾಷನಲ್ ಕ್ರೀಡಾಂಗಣ ಉತ್ತಮ ಪಿಚ್‌ ಆಗಿದ್ದು, ಇಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಸಾಕಷ್ಟು ರನ್‌ಗಳು ಬಂದಿವೆ.

ರನ್‌ಗಳ ತಲಾಶೆಯಲ್ಲಿರುವ ವಿಂಡೀಸ್‌ ಬ್ಯಾಟರ್‌ಗಳಿಗೆ ಇದು ನೆರವಾಗಲಿದೆ. ಆತಿಥೇಯ ತಂಡದ ಬ್ಯಾಟರ್‌ಗಳಲ್ಲಿ ಯಾರೂ ಸ್ಥಿರ ಪ್ರದರ್ಶನ ನೀಡಿಲ್ಲ. ‘ಬ್ಯಾಟರ್‌ಗಳಾಗಿ ನಮ್ಮ ನಿರ್ವಹಣೆ ಸಾಧಾರಣವಾಗಿದೆ. ಮಂಗಳವಾರದ ಪಂದ್ಯ ನಮಗೆ ಬ್ಯಾಟರ್‌ಗಳಾಗಿ ಉತ್ತಮ ಆಟವಾಡಲು ಒಳ್ಳೆಯ ಅವಕಾಶ ಒದಗಿಸಿದೆ’ ಎಂದು ಪೊವೆಲ್ ಹೇಳಿದರು.

ಪಂದ್ಯ ಆರಂಭ: ಬೆಳಿಗ್ಗೆ 6.00

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT