ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹತಾ ಹಂತದಲ್ಲಿ ಉತ್ತಮ ಪ್ರದರ್ಶನ:ಫೈನಲ್‌ಗೆ ವಿಕಾಸ್

Last Updated 6 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಲಂಡನ್: ಡಿಸ್ಕಸ್ ಥ್ರೋ ಸ್ಪರ್ಧಿ ವಿಕಾಸ್ ಗೌಡ ಭಾರತದ ಕ್ರೀಡಾಭಿಮಾನಿಗಳ ಸಂತಸಕ್ಕೆ ಕಾರಣರಾಗಿದ್ದಾರೆ. ಲಂಡನ್ ಒಲಿಂಪಿಕ್ಸ್‌ನ ಪುರುಷರ ಡಿಸ್ಕಸ್ ಥ್ರೋ ಸ್ಪರ್ಧೆಯ ಫೈನಲ್ ಪ್ರವೇಶಿಸಿರುವ ಕರ್ನಾಟಕದ ವಿಕಾಸ್ ಪದಕದ ಭರವಸೆ ಮೂಡಿಸಿದ್ದಾರೆ.

ಸೋಮವಾರ ನಡೆದ ಅರ್ಹತಾ ಹಂತದ `ಎ~ ಗುಂಪಿನಲ್ಲಿ ವಿಕಾಸ್ ಅಗ್ರಸ್ಥಾನ ಪಡೆದರು. ಅವರು ಡಿಸ್ಕ್‌ಅನ್ನು 65.20 ಮೀ. ದೂರ ಎಸೆಯುವಲ್ಲಿ ಯಶಸ್ವಿಯಾದರು. ಫೈನಲ್‌ಗೆ ಅರ್ಹತೆ ಪಡೆಯಲು 65 ಮೀ. ಗಿಂತ ದೂರ ಎಸೆಯಬೇಕು. ತಮ್ಮ ಎರಡನೇ ಪ್ರಯತ್ನದಲ್ಲೇ ಅರ್ಹತೆಯ ಮಟ್ಟ ತಲುಪಿದ ಕಾರಣ ವಿಕಾಸ್ ಮೂರನೇ ಪ್ರಯತ್ನಕ್ಕೆ ಮುಂದಾಗಲಿಲ್ಲ.

1976ರ ಬಳಿಕ ಒಲಿಂಪಿಕ್ಸ್‌ನ ಪುರುಷರ ವಿಭಾಗದ ಟ್ರ್ಯಾಕ್ ಮತ್ತು   ಫೀಲ್ಡ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಅಥ್ಲೀಟ್ ಎಂಬ ಗೌರವವನ್ನು ವಿಕಾಸ್ ಪಡೆದರು. 76ರ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿ ಭಾರತದ ಶ್ರೀರಾಮ್ ಸಿಂಗ್ 800 ಮೀ ಓಟದ ಫೈನಲ್ ಪ್ರವೇಶಿಸಿದ್ದರಲ್ಲದೆ, ಏಳನೇ ಸ್ಥಾನ ಪಡೆದಿದ್ದರು.

ವಿಕಾಸ್ ಅವರು ಲಂಡನ್ ಕೂಟದ ಅಥ್ಲೆಟಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಎರಡನೇ ಅಥ್ಲೀಟ್ ಎನಿಸಿಕೊಂಡರು. ಕೃಷ್ಣಾ ಪೂನಿಯಾ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಇದೇ ಸಾಧನೆ ಮಾಡಿದ್ದರು.
`ಈ ಸಾಧನೆಯಿಂದ ಸಂತಸವಾಗಿದೆ. ನಾನು ಕಠಿಣ ಅಭ್ಯಾಸ ನಡೆಸುತ್ತಿದ್ದು, ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ~ ಎಂದು ವಿಕಾಸ್ ಪ್ರತಿಕ್ರಿಯಿಸಿದರು.

`36 ವರ್ಷಗಳ ಬಳಿಕ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನ ಪುರುಷರ ವಿಭಾಗದ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಅಥ್ಲೀಟ್ ಎಂಬುದು ತಿಳಿದಾಗ ಸಂತಸವಾಯಿತು~ ಎಂದರು.ವಿಕಾಸ್ ಮೊದಲ ಪ್ರಯತ್ನದಲ್ಲಿ ಡಿಸ್ಕ್‌ಅನ್ನು 63.52 ಮೀ. ದೂರ ಎಸೆದರು.

`ಮೊದಲ ಥ್ರೋ ಇನ್ನಷ್ಟು ಉತ್ತಮವಾಗಿರಬೇಕಿತ್ತು. ಆದರೆ ಎಸೆಯುವ ಸಂದರ್ಭ ಡಿಸ್ಕ್ ಕೈಯಿಂದ ಅಲ್ಪ ಜಾರಿತು. ಇಂತಹ ತಪ್ಪು ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕಿದೆ~ ಎಂದು ತಿಳಿಸಿದರು.
ಫೈನಲ್‌ನಲ್ಲಿ ಒಟ್ಟು 12 ಅಥ್ಲೀಟ್‌ಗಳು ಪೈಪೋಟಿ ನಡೆಸಲಿದ್ದಾರೆ. ಅರ್ಹತಾ ಹಂತದಲ್ಲಿ `ಬಿ~ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಎಸ್ಟೋನಿಯದ   ಗೆರ್ಡ್ ಕ್ಯಾಂಟೆರ್ ಡಿಸ್ಕ್‌ಅನ್ನು 66.39 ಮೀ. ದೂರ ಎಸೆಯುವಲ್ಲಿ ಯಶ ಕಂಡರು.

ಎರಡೂ ಗುಂಪುಗಳಲ್ಲಿ ಒಟ್ಟಾರೆಯಾಗಿ ವಿಕಾಸ್‌ಗೆ ಐದನೇ ಸ್ಥಾನ ದೊರೆಯಿತು. ಫೈನಲ್ ಮಂಗಳವಾರ ರಾತ್ರಿ ಭಾರತೀಯ ಕಾಲಮಾನ 12.15 ಕ್ಕೆ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT