ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರ ಹಿತಕ್ಕಾಗಿ ಚರ್ಚೆಗೆ ಸಿದ್ಧ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಐಪಿಎಲ್ ತಂಡವಾದ ಪುಣೆ ವಾರೀಯರ್ಸ್ ಹಿತಕ್ಕಾಗಿ ಬಿಸಿಸಿಐ ಜೊತೆ ಚರ್ಚೆ ಮಾಡಲು ಸಿದ್ಧರಾಗಿರುವ ಸಹಾರಾ ಇಂಡಿಯಾ ಮುಖ್ಯಸ್ಥ ಸುಬ್ರತೊ ರಾಯ್ ಅವರು `ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಒಪ್ಪಂದದ ಮಾತು ಮಾತ್ರ ಬೇಡ~ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

`ಪುಣೆ ತಂಡದ ಬಗ್ಗೆ ಮಾತ್ರ ಈಗ ನಮ್ಮ ಕಾಳಜಿ~ ಎಂದಿರುವ ಅವರು `ಇಂಡಿಯನ್ ಪ್ರೀಮಿಯರ್ ಲೀಗ್‌ನ ಐದನೇ ಅವತರಣಿಕೆಯ ಟ್ವೆಂಟಿ-20 ಟೂರ್ನಿಯಲ್ಲಿ ಆಡುವ ಅವಕಾಶದಿಂದ ಆಟಗಾರರು ವಂಚಿತರಾಗಬಾರದು. ಆ ಒಂದೇ ಕಾರಣಕ್ಕಾಗಿ ಮಾತುಕತೆಗೆ ಆಸಕ್ತಿ ತೋರಿಸಲಾಗಿದೆ~ ಎಂದು ರಾಯ್ ಸುದ್ದಿ ಸಂಸ್ಥೆಯೊಂದಕ್ಕೆ ಮಂಗಳವಾರ ತಿಳಿಸಿದರು.

ಪ್ರಾಯೋಜಕತ್ವದ ಕುರಿತು ಈಗ ಮಾತು ಅಗತ್ಯ ಎನಿಸುವುದಿಲ್ಲ. ಆ ವಿಷಯದಲ್ಲಿ ಆಸಕ್ತಿಯೂ ತಮಗಿಲ್ಲವೆಂದು ಹೇಳಿದ ಅವರು `ನಾವು ಹಿಂದೆ ಸರಿದಿದ್ದರಿಂದ ದೊಡ್ಡ ಪರಿಣಾಮ ಏನೂ ಆಗದು. ಏಕೆಂದರೆ ಕ್ರಿಕೆಟ್ ಜನಪ್ರಿಯ. ಹತ್ತು ವರ್ಷಗಳ ಹಿಂದಿದ್ದ ಪರಿಸ್ಥಿತಿಯಂತೂ ಈಗಿಲ್ಲ. ಈ ಆಟವನ್ನು ಬೆಂಬಲಿಸಲು ಕಾರ್ಪೊರೇಟ್ ಕ್ಷೇತ್ರದ ಅನೇಕ ದಿಗ್ಗಜರು ಸಿದ್ಧರಿದ್ದಾರೆ~ ಎಂದರು.

`ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆತಂಕಗೊಳ್ಳುವ ಅಗತ್ಯವಿಲ್ಲ. ನಾವು ಈಗಲೇ ಕೈಬಿಟ್ಟು ಹೊರಟು ಹೋಗುತ್ತಿಲ್ಲ. ಬೇರೊಬ್ಬರು ಕೈಹಿಡಿಯುವವರೆಗೆ ಇದ್ದೇ ಇರುತ್ತೇವೆ~ ಎಂದ ಅವರು `ನಮ್ಮ ತಕ್ಷಣದ ಕಾಳಜಿ ವಾರೀಯರ್ಸ್ ತಂಡ. ನಮ್ಮಂದಿಗೆ ಇರುವ ಆಟಗಾರರು ಈ ವರ್ಷವೂ ಆಡಬೇಕು ಎನ್ನುವುದು ಆಶಯ. ಒಂದು ವೇಳೆ ಹಾಗೆ ಆಗದಿದ್ದರೆ ಅದು ಕ್ರಿಕೆಟಿಗರಿಗೆ ಬೀಳುವ ದೊಡ್ಡ ಪೆಟ್ಟು. ಇದೇ ಕಾರಣಕ್ಕಾಗಿ ತಕ್ಷಣವೇ ಬೇರೊಂದು ಸಂಸ್ಥೆಗೆ ಈ ತಂಡವನ್ನು ಹಸ್ತಾಂತರ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಬಿಸಿಸಿಐಗೆ ಕೇಳಿಕೊಳ್ಳಲಾಗಿದೆ.
 
ನಾವು ಕೂಡ ಮುಕ್ತ ಮನಸ್ಸಿನಿಂದ ಮಾತುಕತೆಗೆ ಹಾಜರಾಗುತ್ತೇವೆಂದು ಕೂಡ ತಿಳಿಸಿದ್ದೇವೆ. ಒಮ್ಮೆ ಕುಳಿತುಗೊಂಡು ಚರ್ಚೆ ಮಾಡಿದರೆ ಸೂಕ್ತ ಪರಿಹಾರಮಾರ್ಗ ಖಂಡಿತ ಸಿಗುತ್ತದೆ~ ಎಂದು ನುಡಿದರು.
ಐಪಿಎಲ್‌ನಲ್ಲಿ ಪುಣೆ ತಂಡವು ಅಂತ್ಯಂತ ಬೆಲೆಯುಳ್ಳದ್ದೆನಿಸಿದೆ. ಅದನ್ನು 1,700 ಕೋಟಿ ರೂಪಾಯಿಗೆ ಸಹಾರಾ ಕೊಂಡುಕೊಂಡಿತ್ತು. ಈಗ ಅಂಥದೊಂದು ತಂಡವು ಅತಂತ್ರವಾಗುವ ಸ್ಥಿತಿ ಎದುರಾಗಿದೆ. ಅದರ ನೇರ ಪರಿಣಾಮ ಆಗುವುದು ಆಟಗಾರರ ಮೇಲೆ. ಆದ್ದರಿಂದ ಬಿಸಿಸಿಐ ತುರ್ತಾಗಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲೇಬೇಕು. ಸದ್ಯಕ್ಕೆ ಈ ದುಬಾರಿ ತಂಡವನ್ನು ಕೊಂಡುೊಳ್ಳಲು ಯಾರೂ ಆಸಕ್ತಿ ತೋರಿಸಿಲ್ಲ. ಆದ್ದರಿಂದ ತೊಡಕು ನಿವಾರಣೆ ಕ್ರಿಕೆಟ್ ಮಂಡಳಿ ಮುಂದಿರುವ ದೊಡ್ಡ ಸವಾಲು.

ಕ್ರಿಕೆಟ್ ಮಂಡಳಿಯು ಸಂಧಾನ ಮಾಡಿಕೊಂಡರೆ ವಾರೀಯರ್ಸ್ ತಂಡಕ್ಕೆ ಫ್ರಾಂಚೈಸಿಯಾಗಿ ಉಳಿಯಲು ಸಹಾರಾ ಮತ್ತೆ ಯೋಚನೆ ಮಾಡಲು ಸಿದ್ಧವಾಗಿದೆ. `ಪುಣೆ ತಂಡವು ಈ ಬಾರಿಯೂ ಆಡಬೇಕು ಎನ್ನುವುದು ಜನರ ನಿರೀಕ್ಷೆ. ಆದರೆ ಗುಣಮಟ್ಟದ ಪೈಪೋಟಿ ನಡೆಯಬೇಕು. ಕಳೆದ ವರ್ಷವೇ ನಾನು ಈ ವಿಷಯವಾಗಿ ಮಾತನಾಡಿದ್ದೆ. ಎಲ್ಲ ಆಟಗಾರರನ್ನೂ ಹರಾಜಿಗೆ ಬಿಡಬೇಕು. ಆ ಮೂಲಕ ಹೊಸ ಹಾಗೂ ಹಳೆಯ ತಂಡಗಳ ನಡುವೆ ಸಮತೋಲನ ಸಾಧ್ಯವಾಗುವಂತೆ ಮಾಡಬೇಕು ಎನ್ನುವುದು ನನ್ನ ಒತ್ತಾಯ ಹಾಗೂ ಬೇಡಿಕೆ. ಅದಕ್ಕೆ ಸೂಕ್ತವಾದ ರೀತಿಯಲ್ಲಿ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಸ್ಪಂದಿಸಲಿಲ್ಲ~ ಎಂದರು.

`ವಿಶ್ವಕಪ್‌ನಲ್ಲಿ ಶ್ರೇಷ್ಠ ಆಟಗಾರ ಎನಿಸಿಕೊಂಡ ಯುವರಾಜ್ ಸಿಂಗ್ ಲಭ್ಯವಾಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪುಣೆಗೆ ಭಾರತದ ದೊಡ್ಡ ಕ್ರಿಕೆಟಿಗ ಯಾರೂ ನೆರವಿಗೆ ಇಲ್ಲದಂತಾಗಿದೆ. ಇದೇ ಕಾರಣಕ್ಕಾಗಿ ರವೀಂದ್ರ ಜಡೇಜಾ ನಮಗೆ ಬೇಕೆಂದು ಕೋರಲಾಗಿತ್ತು. ಆದರೆ ಅದನ್ನು ಯಾರೂ ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ~ ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT