ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿಗೆ ಸವಾಲಿನ ಗುರಿ

ಮಿಂಚಿದ ಡುಮಿನಿ, ಟೇಲರ್‌; ಡೇರ್‌ಡೆವಿಲ್ಸ್‌ ಉತ್ತಮ ಮೊತ್ತ
Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಶಾರ್ಜಾ (ಪಿಟಿಐ): ಜೆ.ಪಿ. ಡುಮಿನಿ (67) ತೋರಿದ ಉತ್ತಮ ಆಟದ ನೆರವಿನಿಂದ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡ ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸವಾಲಿನ ಗುರಿ ನೀಡಿದೆ.

ಶಾರ್ಜಾ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಡೇರ್‌ಡೆವಿಲ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 145 ರನ್‌ ಕಲೆಹಾಕಿತು.

ಈ ಗುರಿ ಬೆನ್ನಟ್ಟಿರುವ ವಿರಾಟ್‌ ಕೊಹ್ಲಿ ಬಳಗ ಪತ್ರಿಕೆ ಮದ್ರಣಕ್ಕೆ ಹೋಗುವ ವೇಳೆಗೆ ಏಳು ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 55 ರನ್‌ ಗಳಿಸಿತ್ತು.

ನಿಕ್‌ ಮ್ಯಾಡಿನ್ಸನ್‌ (4) ಅವರು ಬೇಗನೇ ಔಟಾದರು. ಆದರೆ ಪಾರ್ಥಿವ್‌ ಪಟೇಲ್‌ (35) ಮತ್ತು ನಾಯಕ ಕೊಹ್ಲಿ (15) ಉತ್ತಮ ಆಟದ ಮೂಲಕ ತಂಡವನ್ನು ಗೆಲುವಿನೆಡೆಗೆ ಮುನ್ನಡೆಸುವ ಸೂಚನೆ ನೀಡಿದ್ದಾರೆ.

ಆರಂಭಿಕ ಆಘಾತ: ಟಾಸ್‌ ಗೆದ್ದ ಕೊಹ್ಲಿ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಅವರ ಈ ನಿರ್ಧಾರ ಸರಿಯಾಗಿತ್ತು. ಶಿಸ್ತಿನ ದಾಳಿ ನಡೆಸಿದ ಬೌಲರ್‌ಗಳು ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು.

ಮಯಂಕ್‌ ಅಗರ್‌ವಾಲ್‌ (6) ಅವರನ್ನು ಪೆವಿಲಿಯನ್‌ಗಟ್ಟಿದ ಮಿಷೆಲ್‌ ಸ್ಟಾರ್ಕ್‌ ಆರ್‌ಸಿಬಿಗೆ ಮೊದಲ ಯಶಸ್ಸು ತಂದಿತ್ತರು. ತಂಡದ ಸ್ಕೋರ್‌ 15 ಆಗಿದ್ದಾಗ ಮೊದಲ ವಿಕೆಟ್‌ ಬಿತ್ತು. ಮುಂದಿನ ಎರಡು ರನ್‌ ಸೇರಿಸುವಷ್ಟರಲ್ಲಿ ಮತ್ತೆರಡು ವಿಕೆಟ್‌ಗಳು ಬಿದ್ದವು.

ಕೆವಿನ್‌ ಪೀಟರ್‌ಸನ್‌ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ದಿನೇಶ್‌ ಕಾರ್ತಿಕ್‌ (0) ತಾವೆದುರಿಸಿದ ಮೊದಲ ಎಸೆತದಲ್ಲೇ ಔಟಾದರು. ಮನೋಜ್‌ ತಿವಾರಿ (1) ಕೂಡಾ ವಿಫಲರಾದರು. ಇವರಿಬ್ಬರು ಕ್ರಮವಾಗಿ ಅಲ್ಬಿ ಮಾರ್ಕೆಲ್‌ ಮತ್ತು ವರುಣ್‌ ಆ್ಯರನ್‌ಗೆ ವಿಕೆಟ್‌ ಒಪ್ಪಿಸಿದರು.

ಮತ್ತೊಂದು ಬದಿಯಲ್ಲಿ ಎಚ್ಚರಿಕೆಯ ಆಟವಾಡುತ್ತಿದ್ದ ಮುರಳಿ ವಿಜಯ್‌ (18, 20 ಎಸೆತ) ಎಂಟನೇ ಓವರ್‌ನ ಮೊದಲ ಎಸೆತದಲ್ಲಿ ಔಟಾದರು. 35 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡ ಕಾರಣ ತಂಡ ಒತ್ತಡಕ್ಕೆ ಒಳಗಾಯಿತು. ಯಜುವೇಂದ್ರ ಚಾಹಲ್‌ (18ಕ್ಕೆ 1) ಒಳಗೊಂಡಂತೆ ತಂಡದ ಬೌಲರ್‌ಗಳು ಆರಂಭದಲ್ಲಿ ನಿಖರ ಪ್ರದರ್ಶನ ನೀಡಿದರು. ವಿಜಯ್‌ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಲು ಚಾಹಲ್‌ ಪ್ರಯೋಗಿಸಿದ ಎಸೆತ ಸೊಗಸಾಗಿತ್ತು.

ಡುಮಿನಿ, ಟೇಲರ್‌ ಆಸರೆ: ಕುಸಿತದ ಹಾದಿ ಹಿಡಿದಿದ್ದ ತಂಡವನ್ನು ಗೌರವಾರ್ಹ ಮೊತ್ತದತ್ತ ಮುನ್ನಡೆಸಿದ ಶ್ರೇಯ ಡುಮಿನಿ (ಅಜೇಯ 67, 48 ಎಸೆತ, 4 ಬೌಂ, 3 ಸಿಕ್ಸರ್‌) ಮತ್ತು ರಾಸ್‌ ಟೇಲರ್‌ಗೆ (43, 39 ಎಸೆತ, 4 ಬೌಂ) ಸಲ್ಲಬೇಕು. ಇವರಿಬ್ಬರು ಮುರಿಯದ ಐದನೇ ವಿಕೆಟ್‌ಗೆ 110 ರನ್‌ ಸೇರಿಸಿದರು.

ಡುಮಿನಿ ವೇಗವಾಗಿ ರನ್‌ ಪೇರಿಸಿದರೆ, ಟೇಲರ್‌ ಅವರಿಗೆ ಉತ್ತಮ ಬೆಂಬಲ ನೀಡಿದರು. ಮೊದಲ ಕೆಲವು ಓವರ್‌ಗಳಲ್ಲಿ ವಿಕೆಟ್‌ ಬೀಳದಂತೆ ಎಚ್ಚರ ವಹಿಸಿದ ಈ ಜೋಡಿ ಬಳಿಕ ರನ್‌ವೇಗ ಹೆಚ್ಚಿಸಿತು.

10 ಓವರ್‌ಗಳು ಕೊನೆಗೊಂಡಾಗ ಡೆಲ್ಲಿಯ ತಂಡ ನಾಲ್ಕು ವಿಕೆಟ್‌ಗೆ 49 ರನ್‌ ಗಳಿಸಿತ್ತು. ಡುಮಿನಿ ಮತ್ತು ಟೇಲರ್‌ ಕೊನೆಯ 10 ಓವರ್‌ಗಳಲ್ಲಿ 96 ರನ್‌ ಸೇರಿಸಿದರು. 15 ಓವರ್‌ಗಳ ಕೊನೆಯಲ್ಲಿ ತಂಡ 82 ರನ್‌ ಗಳಿಸಿತ್ತು. ಬಳಿಕದ ಐದು ಓವರ್‌ಗಳಲ್ಲಿ 63 ರನ್‌ಗಳು ಬಂದವು. ಅದರಲ್ಲೂ ಕಾರ್ತಿಕ್‌ ಬಳಗ ಕೊನೆಯ ಮೂರು ಓವರ್‌ಗಲ್ಲಿ 44 ರನ್‌ ಪೇರಿಸಿತು.

ಯಜುವೇಂದ್ರ ಅವರು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ ಮೊದಲ ಪಂದ್ಯದಲ್ಲೇ ಗಮನ ಸೆಳೆದರು. ಮಿಷೆಲ್‌ ಸ್ಟಾರ್ಕ್‌, ಮಾರ್ಕೆಲ್‌ ಮತ್ತು ಆ್ಯರನ್‌ ತಲಾ ಒಂದು ವಿಕೆಟ್‌ ತಮ್ಮದಾಗಿಸಿಕೊಂಡರು.

ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಈ ಪಂದ್ಯದಲ್ಲಿ ಆಡಲಿಲ್ಲ. ಅವರ ಬದಲು ನಿಕ್‌ ಮ್ಯಾಡಿನ್ಸನ್‌ ಅಂತಿಮ ಇಲೆವೆನ್‌ನಲ್ಲಿ ಅವಕಾಶ ಪಡೆದರು.

ಸ್ಕೋರ್ ವಿವರ:

ಡೆಲ್ಲಿ ಡೇರ್‌ಡೆವಿಲ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 145
ಮಯಂಕ್‌ ಅಗರ್‌ವಾಲ್‌ ಸಿ ಕೊಹ್ಲಿ ಬಿ ಮಿಷೆಲ್‌ ಸ್ಟಾರ್ಕ್‌  06
ಮುರಳಿ ವಿಜಯ್‌ ಬಿ ಯಜುವೇಂದ್ರ ಚಾಹಲ್‌  18
ದಿನೇಶ್‌ ಕಾರ್ತಿಕ್‌ ಸಿ ಪಟೇಲ್‌ ಬಿ ಅಲ್ಬಿ ಮಾರ್ಕೆಲ್‌  00
ಮನೋಜ್‌ ತಿವಾರಿ ಸಿ ಪಟೇಲ್‌ ಬಿ ವರುಣ್‌ ಆ್ಯರನ್‌  01
ಜೆ.ಪಿ. ಡುಮಿನಿ ಔಟಾಗದೆ  67
ರಾಸ್‌ ಟೇಲರ್‌ ಔಟಾಗದೆ  43
ಇತರೆ: (ವೈಡ್‌-9, ನೋಬಾಲ್‌-1)  10
ವಿಕೆಟ್‌ ಪತನ: 1-15 (ಮಯಂಕ್‌; 2.6), 2-16 (ಕಾರ್ತಿಕ್‌; 3.3),3-17 (ತಿವಾರಿ; 4.1), 4-35 (ವಿಜಯ್‌; 7.1)
ಬೌಲಿಂಗ್‌: ಮಿಷೆಲ್‌ ಸ್ಟಾರ್ಕ್‌ 4-0-33-1, ಅಲ್ಬಿ ಮಾರ್ಕೆಲ್‌ 3-0-18-1, ವರುಣ್‌ ಆ್ಯರನ್‌ 3-1-9-1, ಯಜುವೇಂದ್ರ ಚಾಹಲ್‌ 4-0-18-1, ಅಶೋಕ್‌ ದಿಂಡಾ 4-0-51-0, ಯುವರಾಜ್‌ ಸಿಂಗ್‌ 2-0-16-0
(ವಿವರ ಅಪೂರ್ಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT