ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಇನ್ನಷ್ಟು ಅಧಿಕ ಮೊತ್ತ ಪೇರಿಸಬೇಕಿತ್ತು'

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತಮ ಆರಂಭದ ಹೊರತಾಗಿಯೂ ಸವಾಲಿನ ಮೊತ್ತ ಪೇರಿಸಲು ವಿಫಲವಾದದ್ದು ಪಾಕಿಸ್ತಾನ ವಿರುದ್ಧದ ಸೋಲಿಗೆ ಕಾರಣ ಕಾರಣ ಎಂದು ಮಹೇಂದ್ರ ಸಿಂಗ್ ದೋನಿ ನುಡಿದಿದ್ದಾರೆ.

ಇಂತಹ ಪಿಚ್‌ನಲ್ಲಿ ಗೆಲುವಿಗೆ ಕನಿಷ್ಠ 145 ರನ್‌ಗಳಾದರೂ ಅಗತ್ಯ ಎಂದು ಭಾರತ ತಂಡದ ನಾಯಕ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು. `ನಮ್ಮ ತಂಡ ಉತ್ತಮ ಆರಂಭ ಪಡೆದಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳು ಶ್ರೇಷ್ಠ ಪ್ರದರ್ಶನ ತೋರಿದರು. ಆದರೆ ಬಳಿಕ ಆಗಿಂದಾಗ್ಗೆ ವಿಕೆಟ್‌ಗಳು ಬಿದ್ದವು. 10 ಅಥವಾ 15 ರಷ್ಟು ಅಧಿಕ ರನ್ ಪೇರಿಸಿದ್ದರೆ, ಗೆಲುವು ಸಾಧಿಸುವ ಅವಕಾಶವಿತ್ತು' ಎಂದರು.

`ಅದೆ ರೀತಿ ನಮ್ಮ ಬೌಲರ್‌ಗಳು ಎದುರಾಳಿಗೆ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟರು' ಎಂದ ದೋನಿ ಯಾರ ಹೆಸರನ್ನೂ ಹೇಳಲು ಬಯಸಲಿಲ್ಲ. ರವೀಂದ್ರ ಜಡೇಜ ಮತ್ತು ಯುವರಾಜ್ ಸಿಂಗ್ ರನ್ ನಿಯಂತ್ರಿಸುವಲ್ಲಿ ವಿಫಲರಾಗಿದ್ದರು.

ಭಾರತ ಈ ಪಂದ್ಯದಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್‌ಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮೂವರು ಸ್ಪೆಶಲಿಸ್ಟ್ ಬೌಲರ್‌ಗಳೊಂದಿಗೆ ಕಣಕ್ಕಿಳಿದಿತ್ತು. ದೋನಿ ಅವರ ಈ ಯೋಜನೆ ತಲೆಕೆಳಗಾಯಿತು.

ಸಂತಸ ನೀಡಿದ ಗೆಲುವು: ಮಹತ್ವದ ಪಂದ್ಯದಲ್ಲಿ ಗೆಲುವು ಪಡೆಯಲು ಸಾಧ್ಯವಾದದ್ದು ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ಹಫೀಜ್‌ಗೆ ಸಹಜವಾಗಿ ಸಂತಸ ನೀಡಿದೆ. ಆಕರ್ಷಕ ಅರ್ಧಶತಕದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹಫೀಜ್ `ಪಂದ್ಯಶ್ರೇಷ್ಠ' ಗೌರವವನ್ನೂ ತಮ್ಮದಾಗಿಸಿಕೊಂಡರು.

`ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸುವುದು ನಮ್ಮ ಉದ್ದೇಶವಾಗಿತ್ತು. ಮೊಹಮ್ಮದ್ ಇರ್ಫಾನ್ ಚೊಚ್ಚಲ ಟಿ-20 ಪಂದ್ಯದಲ್ಲೇ ಎಲ್ಲರ ಗಮನ ಸೆಳೆದರು. ಉಮರ್ ಗುಲ್ ನಮ್ಮ ತಂಡದ ಪ್ರಮುಖ ಬೌಲರ್. ಅವರು ನಿರೀಕ್ಷೆ ಹುಸಿಗೊಳಿಸಲಿಲ್ಲ' ಎಂದು ಹಫೀಜ್ ಪ್ರತಿಕ್ರಿಯಿಸಿದರು.

`ಭಾರತವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದೆವು. ಆ ಬಳಿಕ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡಿದೆವು. ಗೆಲುವಿನ ಸಾಧ್ಯತೆ ಇದೆ ಎಂಬುದು ಖಚಿತವಾದ ಬಳಿಕ ದೊಡ್ಡ ಹೊಡೆತಗಳಿಗೆ ಮುಂದಾದೆವು. ಈ ಗೆಲುವು ಪಾಕಿಸ್ತಾನದ ಜನತೆಗೆ ಉಡುಗೊರೆ' ಎಂದರು.

ಒತ್ತಡದ ಸಂದರ್ಭದಲ್ಲಿ ಉತ್ತಮ ಆಟವಾಡಲು ಸಾಧ್ಯವಾದದ್ದು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಅಜೇಯ ಅರ್ಧಶತಕ ಗಳಿಸಿದ ಶೋಯಬ್ ಮಲಿಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT