ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಸುತ್ತಿಗೆ ಲೀ, ಜೊಕೊವಿಚ್

ಆಸ್ಟ್ರೇಲಿಯಾ ಓಪನ್ ಟೆನಿಸ್: ಶರ್ಪೋವಾ, ಸಮಂತಾ ಗೆಲುವಿನ ನಗೆ
Last Updated 14 ಜನವರಿ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ/ಐಎಎನ್‌ಎಸ್): ವಿಶ್ವ  ರ‍್ಯಾಂಕಿಂಗ್ ಪಟ್ಟಿಯಲ್ಲಿ ಆರನೇ ಸ್ಥಾನನಲ್ಲಿರುವ ಚೀನಾದ ಲೀ ನಾ ಹಾಗೂ ಸರ್ಬಿಯಾದ ನೊವಾಕ್ ಜೊಕೊವಿಚ್ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.

ಮಾರ್ಗರೇಟ್ ಕೋರ್ಟ್ ಅರೆನಾದಲ್ಲಿ ಸೋಮವಾರ ನಡೆದ ಮಹಿಳಾ ವಿಭಾಗದ  ಮೊದಲ ಸುತ್ತಿನ ಪಂದ್ಯದಲ್ಲಿ ಲೀ 6-1, 6-3ರ ನೇರ ಸೆಟ್‌ಗಳಿಂದ ಕಜಕಸ್ತಾನದ ಸೆಸಿಲ್ ಕರಾತತೆಂಚೆವಾ ಅವರನ್ನು ಸೋಲಿಸಿದರು. 2011ರ ಆಸ್ಟ್ರೇಲಿಯಾ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದ ಲೀ ಒಂದು ಗಂಟೆ 18 ನಿಮಿಷ ಹೋರಾಟ ನಡೆಸಿ ಗೆಲುವಿನ ನಗೆ ಬೀರಿದರು.

`ಉತ್ತಮ ಆರಂಭ ಪಡೆಯುವುದು ಮುಖ್ಯವಿತ್ತು. ಇದರಿಂದ ಎರಡನೇ ಸುತ್ತಿನ ಪಂದ್ಯದಲ್ಲಿಯೂ ಇನ್ನೂ ಚೆನ್ನಾಗಿ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ' ಎಂದು ಲೀ ಹೇಳಿದ್ದಾರೆ.

ನೊವಾಕ್‌ಗೆ ಜಯ:ಪುರುಷರ ವಿಭಾಗದಲ್ಲಿ ಹಾಲಿ ಚಾಂಪಿಯನ್ ಜೊಕೊವಿಚ್ 6-2, 6-4, 7-5ರಲ್ಲಿ ಫ್ರಾನ್ಸ್‌ನ ಪಾಲ್ ಹೆನ್ರಿ ಮ್ಯಾಥ್ಯೂಯೆ ಎದುರು ಗೆಲುವು ಸಾಧಿಸಿದರು. ಅಗ್ರ ಶ್ರೇಯಾಂಕದ ಸರ್ಬಿಯಾದ ಆಟಗಾರ ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ಪಡೆದರು. ಆದರೆ, ಮೂರನೇ ಸೆಟ್‌ನಲ್ಲಿ ಸರಳ ಗೆಲುವು ಸಾಧ್ಯವಾಗಲಿಲ್ಲ.

ಜೊಕೊವಿಚ್ ಕಳೆದ ವರ್ಷದ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಫೈನಲ್‌ನಲ್ಲಿ ಐದು ಗಂಟೆ 53 ನಿಮಿಷ ಹೋರಾಟ ನಡೆಸಿ ರಫೆಲ್ ನಡಾಲ್ ಅವರನ್ನು ಸೋಲಿಸಿ ಚಾಂಪಿಯನ್ ಆಗಿದ್ದರು. ಈ ಗೆಲುವು ಸರ್ಬಿಯಾದ ಆಟಗಾರನ ವಿಶ್ವಾಸವನ್ನು ಉತ್ತುಂಗಕ್ಕೆ ಕೊಂಡೊಯ್ದಿತ್ತು. ಇದೇ ಬಲದಿಂದ ಈ ವರ್ಷವೂ ಪ್ರಶಸ್ತಿ ಗೆಲ್ಲಬೇಕೆನ್ನುವ ಲೆಕ್ಕಾಚಾರ ಜೊಕೊವಿಚ್ ಅವರದ್ದು.

ಶರ್ಪೋವಾಗೆ ಸುಲಭ ಗೆಲುವು:ಏಕಪಕ್ಷೀಯವಾಗಿ ಕೊನೆಗೊಂಡ ಸ್ಪರ್ಧೆಯಲ್ಲಿ ರಷ್ಯಾದ ಮರಿಯಾಶರ್ಪೋವಾ ಮೊದಲ ಸುತ್ತಿನ ಪಂದ್ಯದಲ್ಲಿ 6-0, 6-0ರಲ್ಲಿ ತಮ್ಮ ದೇಶದ ಒಲ್ಗಾ ಪುಚಕೋವಾ ವಿರುದ್ಧ ಗೆಲುವು ಸಾಧಿಸಿದರು.ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್ 7-6, 6-3ರಲ್ಲಿ ಚೈನಿಸ್ ತೈಪೆಯ ಕೈ ಚೇನ್ ಚಾಂಗ್ ಮೇಲೆ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಮುನ್ನಡೆದರು.

ಪ್ರಯಾಸದ ಯಶ:ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಯಾಸದ ಗೆಲುವು ಸಾಧಿಸಿದರು. 15ನೇ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ರಾಡೆಕ್ 5-7, 4-6, 6-3, 6-3, 7-5ರಲ್ಲಿ ಸರ್ಬಿಯಾದ ವಿಕ್ಟರ್ ಟ್ರೊಯೊಕಿ ವಿರುದ್ಧ ಸಾಕಷ್ಟು ಕಷ್ಟಪಟ್ಟು ಗೆಲುವು ಪಡೆದರು.

ಪುರುಷರ ವಿಭಾಗದ ಸಿಂಗಲ್ಸ್‌ನ ಮತ್ತಷ್ಟು ಪ್ರಮುಖ ಪಂದ್ಯಗಳಲ್ಲಿ ಸರ್ಬಿಯಾದ ಜಾಂಕೊ ತಿಪ್ಸರೆವಿಕ್ 7-6, 7-5, 6-3ರಲ್ಲಿ ಆಸ್ಟ್ರೇಲಿಯಾದ ಲ್ಯಾಯ್ಟನ್ ಹೆವಿಟ್ ಮೇಲೂ, ನಾಲ್ಕನೇ ಶ್ರೇಯಾಂಕದ ಸ್ಪೇನ್‌ನ ಡೇವಿಡ್ ಫೆರರ್ 6-3, 6-4, 6-2ರಲ್ಲಿ ಬೆಲ್ಜಿಯಂನ ಒಲಿವಿರ್ ರೋಚಸ್ ವಿರುದ್ಧವೂ, ರಷ್ಯಾದ ಆ್ಯಂಡ್ರಿಯೆ ಕುಜ್ನೆಸೋವಾ 7-6, 6-1, 6-1ರಲ್ಲಿ ಅರ್ಜೆಂಟೀನಾದ ಜುವಾನ್ ಮೊನಾಕೊ ಮೇಲೂ,  ಜಪಾನ್‌ನ ಕೈ ನಿಷಿಕೋರಿ 6-7, 6-3, 6-1, 6-3ರಲ್ಲಿ ರುಮೇನಿಯಾದ ವಿಕ್ಟರ್ ಹನೆಸ್ಕೊ ವಿರುದ್ಧವೂ ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT