ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಯನ್ಸ್ ಸೈನಾ, ಮೇರಿಗೆ ಬೆಂಗಳೂರಿನಲ್ಲಿ ಮನೆ ಉಡುಗೊರೆ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಬಾಕ್ಸರ್ ಮೇರಿ ಕೋಮ್ ಹಾಗೂ ಬಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರೀಗ ಉದ್ಯಾನ ನಗರಿಯಲ್ಲಿ ಹೊಸ ವಿಳಾಸ ಹೊಂದಿದ್ದಾರೆ.

ಕಾರಣ ಕಮ್ಯೂನ್ ಇಂಡಿಯಾ ಕಂಪೆನಿಯು ಚಂದಾಪುರ-ಆನೇಕಲ್ ಮುಖ್ಯರಸ್ತೆಯಲ್ಲಿರುವ ತನ್ನ ವಸತಿ ಸಮುಚ್ಚಯದಲ್ಲಿ ಸಾಧಕಿ ಮೇರಿ ಹಾಗೂ ಸೈನಾ ಅವರಿಗೆ ತಲಾ ಮೂರು ಬೆಡ್ ರೂಮ್‌ಗಳ ಮನೆಗಳನ್ನು ಉಡುಗೊರೆಯಾಗಿ ನೀಡಿದೆ. ಈ ಮನೆಗಳು ತಲಾ 40 ಲಕ್ಷ ರೂ. ಮೌಲ್ಯ ಹೊಂದಿವೆ.

`ಬೆಂಗಳೂರು ನನ್ನ ಇಷ್ಟದ ನಗರಿ. ಕ್ರೀಡಾ ಜೀವನ ಮುಗಿದ ಮೇಲೆ ಇಲ್ಲಿ ನೆಲೆಸಬೇಕೆಂದು ತುಂಬಾ ಹಿಂದೆಯೇ ಯೋಚನೆ ಮಾಡಿದ್ದೆ. ಅದಕ್ಕಿಂತ ಮುಖ್ಯವಾಗಿ ನನ್ನ ಅವಳಿ ಮಕ್ಕಳನ್ನು ಇಲ್ಲಿಯೇ ಓದಿಸಬೇಕು ಎಂದು ತೀರ್ಮಾನಿಸಿದ್ದೇನೆ. ಈಗ ಇಲ್ಲಿ ಮನೆ ಉಡುಗೊರೆಯಾಗಿ ಲಭಿಸಿರುವುದು ಖುಷಿಯ ವಿಚಾರ~ ಎಂದು ಮೇರಿ ನುಡಿದರು.

`ಬೆಂಗಳೂರು ಹಾಗೂ ನನ್ನ ನಡುವಿನ ಬಾಂಧವ್ಯ ತುಂಬಾ ಹಳೆಯದ್ದು. ನನ್ನ ಕ್ರೀಡಾ ಜೀವನದ ಆರಂಭದ ದಿನಗಳಲ್ಲಿ ಪದೇಪದೇ ಇಲ್ಲಿಗೆ ಶಿಬಿರಕ್ಕೆಂದು ಬರುತ್ತಿದ್ದೆ. ಈ ನಗರಿಯೊಂದಿಗಿನ ಬಾಂಧವ್ಯ ಮುಂದುವರಿಸಬೇಕು. ಹಾಗಾಗಿ ಇಲ್ಲಿಯೇ ಅಕಾಡೆಮಿ ಸ್ಥಾಪಿಸುವ ಕನಸು ಹೊಂದಿದ್ದೇನೆ. ಇದು ನನ್ನ ಎರಡನೇ ಮನೆ~ ಎಂದು ಸೈನಾ ಹೇಳಿದರು.

ರಿಯಲ್ ಎಸ್ಟೇಟ್ ಕಂಪೆನಿ ಕಮ್ಯೂನ್ ಇಂಡಿಯಾದ ಸಿಇಒ ಸಂಜಯ್ ರಾಜ್ ಹಾಗೂ ಕ್ರೀಡಾ ಕಂಪೆನಿ ಟಾರ್ಗೆಟ್ ಗೇಮ್ಸ ಫೆಸಿಲಿಟಿ ಸಿಇಒ ಅಲೋಕ್ ಬಿಸ್ವಾಸ್ ಅವರು ಮನೆಗೆ ಂಬಂಧಿಸಿದ ದಾಖಲೆ ಪತ್ರಗಳನ್ನು ಮೇರಿ ಹಾಗೂ ಸೈನಾಗೆ ನೀಡಿ ಸನ್ಮಾನಿಸಿದರು. ಸೈನಾ ತಂದೆ ಡಾ.ಹರ್ವೀರ್ ಸಿಂಗ್ ಹಾಗೂ ಮೇರಿ ಪತಿ ಆನ್ಲೆರ್ ಕೋಮ್ ಕೂಡಾ ಇದ್ದರು.

ಸೈನಾಗೆ ಮೊದಲ ಸವಾಲು: ಒಲಿಂಪಿಕ್ಸ್ ಬಳಿಕ ಸೈನಾ ಮೊದಲ ಬಾರಿ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. `ಅಕ್ಟೋಬರ್ 16ರಂದು ಡೆನ್ಮಾರ್ಕ್ ಓಪನ್ ಸೂಪರ್ ಸರಣಿ ಹಾಗೂ 23ರಂದು ಫ್ರೆಂಚ್ ಓಪನ್ ಸೂಪರ್ ಸರಣಿ ಆರಂಭವಾಗಲಿದೆ. ಅದರಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ಅದಕ್ಕಾಗಿ ಸಿದ್ಧತೆ ಆರಂಭಿಸಿದ್ದೇನೆ~ ಎಂದರು.

`ಕ್ರೀಡಾ ಅಕಾಡೆಮಿ ಸ್ಥಾಪಿಸುವ ಸಂಬಂಧ ಜಮೀನು ವಿಷಯಯ ಸಮಸ್ಯೆ ಸದ್ಯದಲ್ಲಿಯೇ ಬಗೆಹರಿಯಲಿದೆ ಎಂಬ ವಿಶ್ವಾಸ ನನ್ನದು. ಈಗ ಪುಟ್ಟ ಮನೆಯಲ್ಲಿಯೇ 27 ಮಂದಿಗೆ ತರಬೇತಿ ನೀಡಲಾಗುತ್ತಿದೆ~ ಎಂದು ಮೇರಿ ಹೇಳಿದರು. ಜಮೀನು ನೀಡುವುದಾಗಿ ಭರವಸೆ ನೀಡಿದ್ದ ಮಣಿಪುರ ಸರ್ಕಾರ ಇನ್ನೂ ಕ್ರಮಕ್ಕೆ ಮುಂದಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT