ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದರೂ ಹೊರಬಿದ್ದ ಭಾರತ ತಂಡ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೊಲಂಬೊ: ಭಾರತ ತಂಡದವರು ಗೆದ್ದು ಸೋತರು! ಏಕೆಂದರೆ ಈ ಪಂದ್ಯ ಗೆದ್ದರೂ ರನ್‌ರೇಟ್ ಉತ್ತಮಪಡಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಪರಿಣಾಮ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಮಹೇಂದ್ರ ಸಿಂಗ್ ದೋನಿ ಬಳಗ ಹೊರಬಿದ್ದಿದೆ.

ಭಾರತ ತಂಡದ ಆರಂಭಿಕ ಎಡವಟ್ಟು ಹಾಗೂ ನಾಯಕ ದೋನಿಯ ಯೋಜನೆಗಳು ಕೈಕೊಟ್ಟಿದ್ದು ಮುಳುವಾಯಿತು. ಹಾಗಾಗಿ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ತಂಡದ ಆಟಗಾರರು ನಿರಾಶೆಯ ಹೆಜ್ಜೆ ಇಡಬೇಕಾಯಿತು. ಪಾಕಿಸ್ತಾನ ವಿರುದ್ಧದ ಹೋರಾಟದಲ್ಲಿ ಗೆದ್ದು ಭರವಸೆ ಮೂಡಿಸಿದ್ದ ದೋನಿ ಬಳಗದವರು ಮಂಗಳವಾರ ರಾತ್ರಿ ಅಭಿಮಾನಿಗಳನ್ನು ನಿರಾಸೆಯ ಕಡಲಲ್ಲಿ ಮುಳುಗಿಸಿದರು. ರೋಚಕ ಪಂದ್ಯದಲ್ಲಿ ಗೆದ್ದರೂ ಖುಷಿಪಡಲಾಗದಂಥ ಪರಿಸ್ಥಿತಿ.

ಪಾಕಿಸ್ತಾನ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್ ತಲುಪಲು ಭಾರತ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 121 ರನ್‌ಗಳೊಳಗೆ ನಿಯಂತ್ರಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. 16.5 ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 122 ರನ್ ಗಳಿಸುತ್ತಿದ್ದಂತೆ ಪಾಕಿಸ್ತಾನ ಪಾಳಯದಲ್ಲಿ ಸಂಭ್ರಮವೋ ಸಂಭ್ರಮ.

ಈ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿದ್ದ ಪಾಕ್ ತಂಡದ ಅಭಿಮಾನಿಗಳು ಕೂಡ ಕುಣಿದು ಕುಪ್ಪಳಿಸಿದರು. ಕಾರಣ ಸಾಂಪ್ರದಾಯಿಕ ಎದುರಾಳಿ ಭಾರತಕ್ಕಿಂತ ಹೆಚ್ಚು ರನ್‌ರೇಟ್ ಹೊಂದಿದ ಕಾರಣ ಪಾಕ್ ಸೆಮಿಫೈನಲ್ ಫೈವೇಶಿಸಿತು. ಈ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸಿದ ಮತ್ತೊಂದು ತಂಡ ಆಸ್ಟ್ರೇಲಿಯಾ.

ಈ ಪಂದ್ಯದಲ್ಲಿ ಭಾರತ ನೀಡಿದ 153 ರನ್‌ಗಳ ಗುರಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ 19.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು. ಪರಿಣಾಮ ಮಹಿ ಪಡೆ ಒಂದು ರನ್‌ನ ಗೆಲುವು ಸಾಧಿಸಿತು.

ಎಲ್.ಬಾಲಾಜಿ ಎಸೆದ ಕೊನೆಯ ಓವರ್‌ನಲ್ಲಿ ಡಿವಿಲಿಯರ್ಸ್ ಬಳಗದ ಗೆಲುವಿಗಾಗಿ 14 ರನ್‌ಗಳು ಬೇಕಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ನಲ್ಲಿದ್ದ ಅಲ್ಬಿ ಮಾರ್ಕೆಲ್ ಹಾಗೂ ಮಾರ್ನ್ ಮಾರ್ಕೆಲ್ ತಲಾ ಒಂದು ಸಿಕ್ಸರ್ ಎತ್ತಿ ಗೆಲುವಿನ ಆಸೆ ಮೂಡಿಸಿದ್ದರು. ಅಂತಿಮ ಓವರ್‌ನ ಐದನೇ ಎಸೆತದಲ್ಲಿ ಮಾರ್ಕೆಲ್ ಬೋಲ್ಡ್ ಆದರು. ಆದರೆ ಈ ಗೆಲುವು ಭಾರತದ ಉಪಯೋಗಕ್ಕೆ ಬರಲಿಲ್ಲ. ಬಾಲಾಜಿ ತುಂಬಾ ದುಬಾರಿ ಎನಿಸಿದರು.

ದಕ್ಷಿಣ ಆಫ್ರಿಕಾ ತಂಡ 46 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಾಗ ಭಾರತದ ಸೆಮಿಫೈನಲ್ ಆಸೆ ಚಿಗುರಿತ್ತು. ಆದರೆ ಫಫ್ ಡು ಪ್ಲೇಸಿಸ್ (65; 38 ಎಸೆತ, 6 ಬೌಂಡರಿ, 2 ಸಿಕ್ಸರ್) ದೋನಿ ಬಳಗದ ಕನಸಿಗೆ ಅಡ್ಡಿಯಾದರು. ಈ ಹಂತದಲ್ಲಿ ನಾಯಕ ಕೆಲ ತಪ್ಪೆಸಗಿದರು. ಆಫ್ ಸ್ಪಿನ್ನರ್ ಆರ್.ಅಶ್ವಿನ್ ಅವರನ್ನು ತಡವಾಗಿ ದಾಳಿಗಿಳಿಸಿ ತಪ್ಪೆಸಗಿದರು.

ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್‌ಗಳು ಮತ್ತೆ ಕೈಕೊಟ್ಟರು. ನಾಲ್ಕನೇ ಓವರ್‌ನಲ್ಲಿ ಗಂಭೀರ್  ಬೌಲ್ಡ್ ಆದರು. ಆರನೇ ಓವರ್‌ನಲ್ಲಿ ಬೇಜವಾಬ್ದಾರಿ ಹೊಡೆತಕ್ಕೆ ಮುಂದಾಗಿ ವೀರೇಂದ್ರ ಸೆಹ್ವಾಗ್ ವಿಕೆಟ್ ಒಪ್ಪಿಸಿದರು.

ಅತ್ಯುತ್ತಮ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ ಪ್ರಮುಖ ಪಂದ್ಯದಲ್ಲಿ ಕೈಕೊಟ್ಟಿದ್ದು ಮುಳುವಾಯಿತು. ಹಾಗಾಗಿ ಸ್ಕೋರ್ ವೇಗ ಕಡಿಮೆಯಾಯಿತು. ಸುರೇಶ್ ರೈನಾ (45; 34 ಎ, 5 ಬೌಂ.) ಕೊನೆಯಲ್ಲಿ ಗರ್ಜಿಸಿದರಾದರೂ ತಂಡ ದೊಡ್ಡ ಮೊತ್ತ ಪೇರಿಸಲಿಲ್ಲ.

ಮಂಗಳವಾರ ನಡೆದ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕ್ ಗೆಲ್ಲುತ್ತಿದ್ದಂತೆ ದಕ್ಷಿಣ ಆಫ್ರಿಕಾ ಟೂರ್ನಿಯಿಂದ ಹೊರಬಿದ್ದಿತ್ತು. 

ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 152
ಗೌತಮ್ ಗಂಭೀರ್ ಬಿ ಮಾರ್ನ್ ಮಾರ್ಕೆಲ್  08
ವೀರೇಂದ್ರ ಸೆಹ್ವಾಗ್ ಬಿ ರಾಬಿನ್ ಪೀಟರ್ಸನ್  17
ವಿರಾಟ್ ಕೊಹ್ಲಿ ಸಿ ಎಬಿ ಡಿವಿಲಿಯರ್ಸ್ ಬಿ ಜಾಕ್ ಕಾಲಿಸ್  02
ರೋಹಿತ್ ಶರ್ಮ ಎಲ್‌ಬಿಡಬ್ಲ್ಯು ಬಿ ರಾಬಿನ್ ಪೀಟರ್ಸನ್  25
ಯುವರಾಜ್ ಸಿಂಗ್ ಬಿ ಮಾರ್ನ್ ಮಾರ್ಕೆಲ್  21
ಸುರೇಶ್ ರೈನಾ ರನ್‌ಔಟ್ (ಬೋಥಾ/ಡಿವಿಲಿಯರ್ಸ್)  45
ಮಹೇಂದ್ರ ಸಿಂಗ್ ದೋನಿ ಔಟಾಗದೆ  23
ಇತರೆ (ಲೆಗ್‌ಬೈ-10, ನೋಬಾಲ್-1)  11
ವಿಕೆಟ್ ಪತನ: 1-23 (ಗಂಭೀರ್; 3.3); 2-30 (ಕೊಹ್ಲಿ; 4.5); 3-36 (ಸೆಹ್ವಾಗ್; 5.3); 4-68 (ಯುವರಾಜ್; 9.6); 5-112 (ರೋಹಿತ್; 15.6); 6-152 (ರೈನಾ; 19.6)
ಬೌಲಿಂಗ್: ಡೇಲ್ ಸ್ಟೇಯ್ನ 4-1-26-0, ಮಾರ್ನ್ ಮಾರ್ಕೆಲ್ 4-0-28-2 (ನೋಬಾಲ್-1), ಜಾಕ್ ಕಾಲಿಸ್ 3-0-24-1, ರಾಬಿನ್ ಪೀಟರ್ಸನ್ 4-0-25-2, ಜೋಹಾನ್ ಬೋಥಾ 3-0-30-0, ಫಫ್ ಡು ಪ್ಲೇಸಿಸ್ 1-0-3-0, ಜೀನ್ ಪಾಲ್ ಡುಮಿನಿ 1-0-6-0
ದಕ್ಷಿಣ ಆಫ್ರಿಕಾ 19.5 ಓವರ್‌ಗಳಲ್ಲಿ 151
ಹಾಶೀಮ್ ಆಮ್ಲಾ ಸಿ ವೀರೇಂದ್ರ ಸೆಹ್ವಾಗ್ ಬಿ ಜಹೀರ್ ಖಾನ್ 00
ಜಾಕ್ ಕಾಲಿಸ್ ಸಿ ರೋಹಿತ್ ಶರ್ಮ ಬಿ ಇರ್ಫಾನ್ ಪಠಾಣ್  06
ಎಬಿ ಡಿವಿಲಿಯರ್ಸ್ ಬಿ ಯುವರಾಜ್ ಸಿಂಗ್  13
ಫಫ್ ಡು ಫ್ಲೇಸಿಸ್ ಸಿ ಸುರೇಶ್ ರೈನಾ ಬಿ ಯುವರಾಜ್ ಸಿಂಗ್  65
ಜೀನ್ ಪಾಲ್ ಡುಮಿನಿ ಸಿ ಗಂಭೀರ್ ಬಿ ಎಲ್.ಬಾಲಾಜಿ  16
ಫರ್ಹಾನ್ ಬೆಹರ್ಡೀನ್ ಸಿ ಸುರೇಶ್ ರೈನಾ ಬಿ ಜಹೀರ್ ಖಾನ್ 13
ರಾಬಿನ್ ಪೀಟರ್ಸನ್ ಬಿ ಜಹೀರ್ ಖಾನ್  10
ಅಲ್ಬಿ ಮಾರ್ಕೆಲ್ ಬಿ ಎಲ್.ಬಾಲಾಜಿ  10
ಜೋಹಾನ್ ಬೋಥಾ ಸಿ ಸುರೇಶ್ ರೈನಾ ಬಿ ಆರ್.ಅಶ್ವಿನ್  08
ಡೇಲ್ ಸ್ಟೇಯ್ನ ಔಟಾಗದೆ  00
ಮಾರ್ನ್ ಮಾರ್ಕೆಲ್ ಬಿ ಎಲ್.ಬಾಲಾಜಿ  06
ಇತರೆ (ಲೆಗ್‌ಬೈ-3, ನೋಬಾಲ್-1)  04
ವಿಕೆಟ್ ಪತನ: 1-0 (ಆಮ್ಲಾ; 0.2); 2-16 (ಕಾಲಿಸ್; 3.3); 3-46 (ಡಿವಿಲಿಯರ್ಸ್; 6.1); 4-95 (ಡು ಪ್ಲೇಸಿಸ್; 12.4); 5-107 (ಡುಮಿನಿ; 14.6); 6-127 (ಬೆಹರ್ಡೀನ್; 17.2); 7-127 (ಪೀಟರ್ಸನ್; 17.3); 8-138 (ಬೋಥಾ; 18.5); 9-145 (ಎ.ಮಾರ್ಕೆಲ್; 19.2); 10-151 (ಎಂ..ಮಾರ್ಕೆಲ್; 19.5).
ಬೌಲಿಂಗ್: ಜಹೀರ್ ಖಾನ್ 4-0-22-3, ಇರ್ಫಾನ್ ಪಠಾಣ್ 3-0-26-1, ಯುವರಾಜ್ ಸಿಂಗ್ 4-0-23-2, ರೋಹಿತ್ ಶರ್ಮ 1-0-13-0, ಆರ್.ಅಶ್ವಿನ್ 4-0-27-1 (ನೋಬಾಲ್-1), ಎಲ್.ಬಾಲಾಜಿ 3.5-0-37-3
ಫಲಿತಾಂಶ: ಭಾರತಕ್ಕೆ 1 ರನ್ ಜಯ.
ಪಂದ್ಯ ಶ್ರೇಷ್ಠ: ಯುವರಾಜ್ ಸಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT