ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಅಪ್ಪುಗೆಗೆ ಕ್ಷಣಗಣನೆ

ರಣಜಿ ಕ್ರಿಕೆಟ್‌: ಮೋರೆ ದಾಳಿಗೆ ಹರಿಯಾಣ ತತ್ತರ, ಕರ್ನಾಟಕಕ್ಕೆ ಮೇಲುಗೈ
Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲಾಹ್ಲಿ, ರೋಹ್ಟಕ್‌: ಸುಂದರವಾಗಿ ಸಿಂಗಾರಗೊಂಡಿರುವ ಬನ್ಸಿ ಲಾಲ್‌ ಕ್ರೀಡಾಂಗಣದಲ್ಲಿ ಗೆಲುವಿನ ತೋರಣ ಕಟ್ಟಲು ಕರ್ನಾಟಕ ತಂಡ ಸಜ್ಜಾಗಿದೆ. ಹರಿಯಾಣವನ್ನು ಸುಲಭವಾಗಿ ಕಟ್ಟಿಹಾಕಿದ ಸಿ.ಎಂ. ಗೌತಮ್‌ ಬಳಗ ಈ ಸಲದ ರಣಜಿ ಟ್ರೋಫಿ ಟೂರ್ನಿಯಲ್ಲಿ ಎರಡನೇ ಗೆಲುವಿಗೆ ಮುತ್ತಿಕ್ಕುವ ಕಾತರದಲ್ಲಿದೆ. ಇದಕ್ಕಾಗಿ ವೇದಿಕೆಯೂ ಸಿದ್ದಗೊಂಡಿದೆ.

‘ಎರಡನೇ ಇನಿಂಗ್ಸ್‌ನಲ್ಲಿ ಹರಿಯಾಣ ತಂಡವನ್ನು 150ರಿಂದ 200 ರನ್ ಒಳಗೆ ಕಟ್ಟಿ ಹಾಕುತ್ತೇವೆ’ ಎಂದು ಶನಿವಾರ ಕರ್ನಾಟಕದ ನಾಯಕ ಗೌತಮ್‌ ಹೇಳಿದ್ದ ಮಾತು ನಿಜವಾಯಿತು. ಇನಿಂಗ್ಸ್‌್ ಹಿನ್ನಡೆಯ ಸಂಕಷ್ಟದೊಂದಿಗೆ ಬ್ಯಾಟ್‌್ ಮಾಡಿದ ರಾಹುಲ್‌ ದೇವನ್‌ ಸಾರಥ್ಯದ ಹರಿಯಾಣ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 105 ರನ್‌ಗೆ ಸರ್ವಪತನ ಕಂಡಿತು. ಈ ತಂಡ ಮೊದಲ ಇನಿಂಗ್ಸ್‌ನಲ್ಲಿ 247 ರನ್‌ ಕಲೆ ಹಾಕಿತ್ತು.

ಆರೇ ನಿಮಿಷದಲ್ಲಿ ವಿಕೆಟ್‌: ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ ಶನಿವಾರ 9 ವಿಕೆಟ್‌ ನಷ್ಟಕ್ಕೆ 253 ರನ್‌ ಗಳಿಸಿತ್ತು. ಭಾನುವಾರ ಇದಕ್ಕೆ ಎರಡು ರನ್‌ ಸೇರಿಸಿದ ಅಬ್ರಾರ್‌ ಖಾಜಿ (12) ಹರ್ಷಲ್‌ ಪಟೇಲ್‌ ಎಸೆತದಲ್ಲಿ ಔಟ್‌ ಆದರು. ಇದರಿಂದ ಪ್ರಥಮ ಇನಿಂಗ್ಸ್‌ನ ಹೋರಾಟಕ್ಕೆ ತೆರೆ ಬಿತ್ತು. ಆಗ ಮೂರನೇ ದಿನದಾಟ ಶುರುವಾಗಿ ಕೇವಲ ಆರು ನಿಮಿಷವಷ್ಟೇ ಕಳೆದಿತ್ತು!

ಕರ್ನಾಟಕ ತಂಡ ಎರಡನೇ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 23 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 62 ಕಲೆ ಹಾಕಿದೆ. ಗೌತಮ್‌ ಪಡೆಯ ಗೆಲುವಿಗೆ 35 ರನ್‌ಗಳಷ್ಟೇ ಬೇಕಿದೆ.

ಕಂಗೆಟ್ಟ ಹರಿಯಾಣ: ಒಂಬತ್ತು ರನ್‌ಗಳ ಹಿನ್ನಡೆ ಅನುಭವಿಸಿದ ಹರಿಯಾಣ ಎರಡನೇ ಇನಿಂಗ್ಸ್‌ನಲ್ಲಿ ಪ್ರತ್ಯುತ್ತರ ನೀಡುವ ಗುರಿ ಹೊಂದಿತ್ತು. ಆದರೆ, ಬೆಳಗಾವಿಯ ರೋನಿತ್‌ ಮೋರೆ ಐದು ವಿಕೆಟ್‌ ಪಡೆಯುವ ಮೂಲಕ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು.

ಈ ರಣಜಿಯಲ್ಲಿ ಮೊದಲ ಪಂದ್ಯವನ್ನಾಡಿದ ಬಲಗೈ ವೇಗಿ ಮೋರೆ 8ನೇ ಓವರ್‌ನಲ್ಲಿ ಸನ್ನಿ ಸಿಂಗ್‌ ಅವರನ್ನು ಔಟ್‌ ಮಾಡುವ ಮೂಲಕ ವಿಕೆಟ್‌ ಗಳಿಕೆಗೆ ಚಾಲನೆ ನೀಡಿದರು.
ವೇಗದ ಬೌಲರ್‌ಗಳಿಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಅತ್ಯುತ್ತಮ ಲೇನ್‌ ಮತ್ತು ಲೆಂಗ್ತ್‌ಗಳನ್ನು ಹಾಕಿದ ಮೋರೆ ಪೆವಿಲಿಯನ್‌ ಎದುರಿನ ತುದಿಯಿಂದ ಬೌಲ್‌ ಮಾಡಲು ಆರಂಭಿಸಿ ಎಲ್ಲಾ ವಿಕೆಟ್‌ಗಳನ್ನು ಅದೇ ತುದಿಯಿಂದ ಪಡೆದದ್ದು ವಿಶೇಷ.

ಯತಾರ್ಥ್‌ ಟಾಮರ್‌, ಸಚಿನ್ ರಾಣಾ, ಹರ್ಷಲ್‌ ಪಟೇಲ್‌, ದೇವನ್‌ ಮತ್ತು ಸನ್ನಿ ಸಿಂಗ್‌ ವಿಕೆಟ್‌ ಪಡೆದ 21 ವರ್ಷದ ಕರ್ನಾಟಕದ ಬೌಲರ್‌ ರಣಜಿ ಕ್ರಿಕೆಟ್‌ನಲ್ಲಿ ತೋರಿದ ಅತ್ಯುತ್ತಮ ಸಾಧನೆ ಇದಾಗಿದೆ. ಹೋದ ವರ್ಷ ಹುಬ್ಬಳ್ಳಿಯಲ್ಲಿ ನಡೆದ ಪಂದ್ಯದಲ್ಲಿ ಹರಿಯಾಣ ವಿರುದ್ಧವೇ 106ಕ್ಕೆ2 ವಿಕೆಟ್‌ ಪಡೆದಿದ್ದು ಅತ್ಯುತ್ತಮ ಸಾಧನೆಯಾಗಿತ್ತು.
ಮಾನ ಕಾಪಾಡಿದ ದೇವನ್‌: ಹರಿಯಾಣದ ನಾಲ್ಕು ಜನ ಬ್ಯಾಟ್ಸ್‌ಮನ್‌ಗಳಷ್ಟೇ ಎರಡಂಕಿಯ ಮೊತ್ತ ಮುಟ್ಟಿದರು. ನಾಯಕ ದೇವನ್‌ 31 ರನ್‌ ಗಳಿಸಿ ತಂಡದ ಮೊತ್ತವನ್ನು 100 ರನ್‌ ಗಡಿ ದಾಟಿಸಿದರು.

1982/83ರ ರಣಜಿ ಋತುವಿನಲ್ಲಿ ಫರೀದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಹರಿಯಾಣ 78 ರನ್‌ಗೆ ಆಲ್‌ ಔಟ್‌ ಆಗಿತ್ತು. ಅದರ ನಂತರ ಕರ್ನಾಟಕದ ಎದುರು ಹರಿಯಾಣ         ಕಡಿಮೆ ಮೊತ್ತಕ್ಕೆ ಆಲ್‌ ಔಟ್‌ ಆಗಿದ್ದು ಇದು ಮೊದಲನೇ ಸಲ.

ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ದೇವನ್‌ ಮತ್ತು ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ನಿತಿನ್‌ ಸೈನಿ  (11) 27 ರನ್‌ ಕಲೆ ಹಾಕಿದರು. ಇದು ಆತಿಥೇಯರ ಗರಿಷ್ಠ ರನ್‌ ಜೊತೆಯಾಟ. ನಾಲ್ಕನೇ ವಿಕೆಟ್‌ನ ಅಲ್ಪ ಮೊತ್ತದ ಜೊತೆಯಾಟಕ್ಕೆ ತೆರೆ ಬೀಳುತ್ತಿದ್ದಂತೆ ಆತಿಥೇಯ ಬ್ಯಾಟ್ಸ್‌ಮನ್‌ಗಳು ಜಿದ್ದಿಗೆ ಬಿದ್ದವರಂತೆ ವಿಕೆಟ್‌ ಒಪ್ಪಿಸಿದರು. ದೇವನ್‌ 28ನೇ ಓವರ್‌ನಲ್ಲಿ ಮೋರೆ ಎಸೆತದಲ್ಲಿ ವಿಕೆಟ್‌ ಕೀಪರ್‌ ಗೌತಮ್‌ ಕೈಗೆ ಕ್ಯಾಚ್ ನೀಡಿದರು. ನಂತರ ಹರಿಯಾಣ ತಂಡ 40 ರನ್‌ ಗಳಿಸುವ ಅಂತರದಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.

15 ವಿಕೆಟ್‌: ಮೂರೂ ದಿನವೂ ವೇಗದ ಬೌಲರ್‌ಗಳಿಗೆ ನೆರವು ನೀಡಿದ ಪಿಚ್‌ನಲ್ಲಿ ಭಾನುವಾರ ಒಟ್ಟು 15 ವಿಕೆಟ್‌ಗಳು ಪತನವಾದವು. ಕರ್ನಾಟಕದ ಐದು ಮತ್ತು ಹರಿಯಾಣದ 10 ವಿಕೆಟ್‌ಗಳು ಉರುಳಿದವು. ಇದರಲ್ಲಿ ವೇಗದ ಬೌಲರ್‌ಗಳು ಕಬಳಿಸಿದ್ದು 14 ವಿಕೆಟ್‌.

ಹೋರಾಟ: ಗೆಲುವಿಗೆ ಅಲ್ಪ ಮೊತ್ತದ ಗುರಿ ಪಡೆದಿದ್ದರೂ ಕರ್ನಾಟಕ ತಂಡಕ್ಕೆ ಪರದಾಟ ತಪ್ಪಲಿಲ್ಲ. ಎರಡನೇ ಓವರ್‌ನಲ್ಲಿಯೇ ಮಯಂಕ್‌ ಅಗರವಾಲ್‌ (1) ಹೊರ ಹೋಗುತ್ತಿದ್ದ ಚೆಂಡನ್ನು ತಡವಿಕೊಂಡು ಆಶಿಶ್‌ ಹೂಡಾ ಎಸೆತದಲ್ಲಿ ಔಟಾದರು. ಮೂರನೇ ದಿನದಲ್ಲಿಯೇ ಗೆಲುವು ತಂದುಕೊಡಲು ಕೆ.ಎಲ್‌. ರಾಹುಲ್ (29, 68 ಎಸೆತ, 110 ನಿಮಿಷ, 2 ಬೌಂಡರಿ) ಪ್ರಯತ್ನಿಸುತ್ತಿದ್ದಾಗಲೇ ರನ್‌ ಔಟ್‌ ಆದರು. ಕುನಾಲ್‌ ಕಪೂರ್‌ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಕರ್ನಾಟಕದ ಗೆಲುವಿಗೆ ಬೇಕಾಗಿರುವ 35 ರನ್‌ಗಳ ಗುರಿ ದೊಡ್ಡದೇನು ಅಲ್ಲದಿದ್ದರೂ, ಎದುರಾಳಿ ಬೌಲರ್‌ ಹರ್ಷದ್‌ ಪಟೇಲ್‌ ಮತ್ತು ಹೂಡಾ ಅಪಾಯಕಾರಿ ಎನ್ನಿಸಬಲ್ಲರು. ಆದ್ದರಿಂದ ಕ್ರೀಸ್‌ನಲ್ಲಿರುವ ನಾಯಕ ಗೌತಮ್‌ ಮತ್ತು ಸ್ಟುವರ್ಟ್‌್ ಬಿನ್ನಿ ಮೇಲೆ ಪಂದ್ಯ ಗೆಲ್ಲಿಸಿಕೊಡಬೇಕಾದ ಜವಾಬ್ದಾರಿಯಿದೆ.

ಗಣೇಶ್ ಸತೀಶ್‌, ರೋನಿತ್‌ ಮೋರೆ, ಮಿಥುನ್‌, ಶರತ್‌ ಮತ್ತು ಅಬ್ರಾರ್‌ ಖಾಜಿ ಇರುವ ಕಾರಣ ಕರ್ನಾಟಕಕ್ಕೆ ಗೆಲುವು ದೂರದ ಬೆಟ್ಟವೇನಲ್ಲ. ಆದರೆ, ಪವಾಡವೇನಾದರೂ ನಡೆದರೆ ಮಾತ್ರ ಗೆಲುವಿನ ತೋರಣ ಕಟ್ಟುವ ಅವಕಾಶ ಆತಿಥೇಯರ ಪಾಲಾಗಲಿದೆ.

ಸ್ಕೋರ್ ವಿವರ
ಹರಿಯಾಣ ಮೊದಲ ಇನಿಂಗ್ಸ್‌್ 76.5 ಓವರ್‌ಗಳಲ್ಲಿ 247

ಕರ್ನಾಟಕ ಪ್ರಥಮ ಇನಿಂಗ್ಸ್‌್ 93.2 ಓವರ್‌ಗಳಲ್ಲಿ 256
(ಶನಿವಾರದ ಅಂತ್ಯಕ್ಕೆ 92 ಓವರ್‌ಗಳಲ್ಲಿ 9 ವಿಕೆಟ್‌ಗೆ 253)
ಅಬ್ರಾರ್‌ ಖಾಜಿ ಸಿ ನಿತಿನ್‌ ಸೈನಿ ಬಿ ಹರ್ಷಲ್‌ ಪಟೇಲ್‌ 12
ಎಚ್‌.ಎಸ್‌್. ಶರತ್‌ ಔಟಾಗದೆ  02
ಇತರೆ: (ಬೈ-6, ಲೆಗ್‌ ಬೈ-8, ವೈಡ್‌-5, ನೋ ಬಾಲ್‌-4)
23
ವಿಕೆಟ್ ಪತನ: 10-256 (ಖಾಜಿ; 93.2).
ಬೌಲಿಂಗ್‌: ಹರ್ಷಲ್‌ ಪಟೇಲ್‌ 28.2-10-55-6, ಬಿ. ಸಂಜಯ್‌ 15-4-44-0, ಆಶಿಶ್‌ ಹೂಡಾ 17-2-51-2, ಸಚಿನ್‌ ರಾಣಾ 22-3-52-2, ಜಯಂತ್‌ ಯಾದವ್‌ 5-0-20-0, ರಾಹುಲ್‌ ತಿವಾತಿಯಾ 6-1-20-1.

ಹರಿಯಾಣ ದ್ವಿತೀಯ ಇನಿಂಗ್ಸ್‌್ 48.3 ಓವರ್‌ಗಳಲ್ಲಿ 105
ಅವಿ ಬರೋಟ್‌ ರನ್‌ ಔಟ್‌ (ಅಬ್ರಾರ್‌ ಖಾಜಿ/ಸಿ.ಎಂ. ಗೌತಮ್‌)  00
ರಾಹುಲ್ ದೇವನ್‌ ಸಿ ಗೌತಮ್‌ ಬಿ ರೋನಿತ್‌ ಮೋರೆ  31
ಸನ್ನಿ ಸಿಂಗ್‌ ಸಿ ಅಬ್ರಾರ್‌ ಖಾಜಿ ಬಿ ರೋನಿತ್‌ ಮೋರೆ 04
ಯತಾರ್ಥ್‌ ಟಾಮರ್‌ ಬಿ ರೋನಿತ್‌ ಮೋರೆ  00
ನಿತಿನ್‌ ಸೈನಿ ಸಿ ಮನೀಷ್‌ ಪಾಂಡೆ ಬಿ ಸ್ಟುವರ್ಟ್‌ ಬಿನ್ನಿ  11
ಜಯಂತ್‌ ಯಾದವ್‌  ಸಿ ಗೌತಮ್‌ ಬಿ ಅಭಿಮನ್ಯು ಮಿಥುನ್‌
06
ಸಚಿನ್‌ ರಾಣಾ ಸಿ ಮಯಂಕ್‌ ಅಗರವಾಲ್‌ ಬಿ ರೋನಿತ್‌ ಮೋರೆ  10
ರಾಹುಲ್‌ ತಿವಾತಿಯಾ ಎಲ್‌ಬಿಡಬ್ಲ್ಯು ಅಬ್ರಾರ್‌ ಖಾಜಿ 15
ಹರ್ಷಲ್‌ ಪಟೇಲ್‌ ಬಿ ರೋನಿತ್‌ ಮೋರೆ  00
ಆಶಿಶ್‌ ಹೂಡಾ ಸಿ ಮನೀಷ್‌ ಪಾಂಡೆ ಬಿ ಎಚ್‌.ಎಸ್‌್. ಶರತ್‌
01
ಬಿ. ಸಂಜಯ್‌ ಔಟಾಗದೆ  03
ಇತರೆ: (ಬೈ-7, ಲೆಗ್‌ ಬೈ-9, ವೈಡ್‌-6, ನೋ ಬಾಲ್-2)
24
ವಿಕೆಟ್‌ ಪತನ: 1-2 (ಬರೋಟ್‌; 1.2), 2-14 (ಸನ್ನಿ; 7.6), 3-18 (ಟಾಮರ್‌; 9.3), 4-45 (ಸೈನಿ; 19.1), 5-65 (ದೇವನ್‌; 28.6), 6-65 (ಯಾದವ್‌; 28.6), 7-80 (ರಾಣಾ; 35.1), 8-80 (ಪಟೇಲ್‌; 35.6), 9-93 (ಹೂಡಾ; 43.3), 10-105 (ತಿವಾತಿಯಾ; 48.3).
ಬೌಲಿಂಗ್‌: ಅಭಿಮನ್ಯು ಮಿಥುನ್‌ 13-3-29-1, ರೋನಿತ್‌ ಮೋರೆ 14-6-20-5, ಎಚ್‌.ಎಸ್‌. ಶರತ್‌ 9-3-21-1, ಸ್ಟುವರ್ಟ್‌್ ಬಿನ್ನಿ 11-3-19-1, ಮನೀಷ್‌ ಪಾಂಡೆ 1-1-0-0, ಅಬ್ರಾರ್‌ ಖಾಜಿ 0.3-0-0-1.

ಕರ್ನಾಟಕ ಎರಡನೇ ಇನಿಂಗ್ಸ್‌ 23 ಓವರ್‌ಗಳಲ್ಲಿ
4 ವಿಕೆಟ್‌ಗೆ 62

ಮಯಂಕ್‌ ಅಗರವಾಲ್‌ ಸಿ ಅವಿ ಬರೋಟ್‌ ಬಿ ಆಶಿಶ್‌ ಹೂಡಾ  01
ಕೆ.ಎಲ್‌. ರಾಹುಲ್‌ ರನ್‌ಔಟ್‌   29
ಕುನಾಲ್‌ ಕಪೂರ್‌ ಸಿ ರಾಹುಲ್‌ ತಿವಾತಿಯಾ ಬಿ ಹರ್ಷಲ್‌ ಪಟೇಲ್‌  10
ಮನೀಷ್‌ ಪಾಂಡೆ ಸಿ ರಾಹುಲ್‌ ತಿವಾತಿಯಾ ಬಿ ಹರ್ಷಲ್‌ ಪಟೇಲ್‌  17
ಸಿ.ಎಂ. ಗೌತಮ್‌ ಬ್ಯಾಟಿಂಗ್‌  05
ಸ್ಟುವರ್ಟ್‌್ ಬಿನ್ನಿ ಬ್ಯಾಟಿಂಗ್‌  00
ಇತರೆ:  00
ವಿಕೆಟ್‌ ಪತನ: 1-1 (ಮಯಂಕ್‌; 1.4), 2-20 (ಕಪೂರ್‌; 8.2), 3-55 (ಪಾಂಡೆ; 19.6), 4-59 (21.6)
ಬೌಲಿಂಗ್‌: ಹರ್ಷಲ್‌ ಪಟೇಲ್‌ 11-2-26-2, ಆಶಿಶ್‌ ಹೂಡಾ 6-2-20-1, ಬಿ ಸಂಜಯ್‌ 6-0-16-0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT