ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಿಂದ ಹೊರಬಂದ ಅಮೀರ್

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): `ಸ್ಪಾಟ್ ಫಿಕ್ಸಿಂಗ್~ ಪ್ರಕರಣದಲ್ಲಿ ಜೈಲು ಸೇರಿದ್ದ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಮೊಹಮ್ಮದ್ ಅಮೀರ್ ಬುಧವಾರ ಬಿಡುಗಡೆಯಾಗಿದ್ದಾರೆ. ಆರು ತಿಂಗಳ ಶಿಕ್ಷೆಗೆ ಗುರಿಯಾಗಿದ್ದ ಅವರು ಕಳೆದ ನವೆಂಬರ್ 3 ರಂದು ಜೈಲು ಸೇರಿದ್ದರು.

ಇದೀಗ ಶಿಕ್ಷೆಯ ಅರ್ಧದಷ್ಟು ಅವಧಿ ಪೂರ್ಣಗೊಂಡಿರುವ ಕಾರಣ ಹೊರಬಂದಿದ್ದಾರೆ. ಅವರು   ಡಾರ್ಸೆಟ್‌ನ ಪೋರ್ಟ್‌ಲೆಂಡ್ ಸೆರೆಮನೆಯಲ್ಲಿದ್ದರು. 19ರ ಹರೆಯದ ಅಮೀರ್ ಶುಕ್ರವಾರ ಜೈಲಿನಿಂದ ಹೊರಬರಬೇಕಿತ್ತು. ಆದರೆ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ಲಭಿಸುವುದನ್ನು ತಪ್ಪಿಸಲು ಎರಡು ದಿನ ಮುಂಚಿತವಾಗಿಯೇ ಬಿಡುಗಡೆ ಮಾಡಲಾಗಿದೆ.

ಉತ್ತಮ ನಡತೆ ತೋರಿದರೆ ಶಿಕ್ಷೆಯ ಅರ್ಧದಷ್ಟು ಅವಧಿ ಪೂರ್ಣಗೊಂಡ ಬಳಿಕ ಜೈಲಿನಿಂದ ಹೊರಬರಬಹುದು ಎಂದು ಲಂಡನ್‌ನ ಸೌತ್‌ವಾಕ್ ಕ್ರೌನ್ ನ್ಯಾಯಾಲಯ ಶಿಕ್ಷೆ ಪ್ರಕಟಿಸುವ ಸಂದರ್ಭ ಹೇಳಿತ್ತು. ಅದರಂತೆ ಮೂರು ತಿಂಗಳ ಬಳಿಕ ಸ್ವತಂತ್ರರಾಗಿದ್ದಾರೆ. ಇವರು ತವರು ದೇಶ ಪಾಕಿಸ್ತಾನಕ್ಕೆ ಯಾವಾಗ ಮರಳುವರು ಎಂಬುದು ಖಚಿತವಾಗಿಲ್ಲ. ಈಗ ಹೊಂದಿರುವ ವೀಸಾದ ಆಧಾರದಲ್ಲಿ ಮಾರ್ಚ್ ಕೊನೆಯವರೆಗೆ ಇಂಗ್ಲೆಂಡ್‌ನಲ್ಲಿ ತಂಗಬಹುದು.

`ಸ್ಪಾಟ್ ಫಿಕ್ಸಿಂಗ್~ ಪ್ರಕರಣದಲ್ಲಿ ಅಮೀರ್ ಜೊತೆ ಪಾಕಿಸ್ತಾನದ ಇತರ ಇಬ್ಬರು ಆಟಗಾರರಾದ ಸಲ್ಮಾನ್ ಬಟ್ ಮತ್ತು ಮೊಹಮ್ಮದ್ ಆಸಿಫ್ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಆಸಿಫ್ ಮೇಲೆ ಒಂದು ವರ್ಷದ ಶಿಕ್ಷೆ ಹೇರಿದ್ದರೆ, ಬಟ್ ಎರಡೂವರೆ ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಉತ್ತಮ ನಡತೆಯ ಆಧಾರದಲ್ಲಿ ಇವರು ಕೂಡಾ ಅರ್ಧ ಅವಧಿ ಪೂರೈಸಿದ ಬಳಿಕ ಜೈಲಿನಿಂದ ಹೊರಬರುವ ಸಾಧ್ಯತೆಯಿದೆ.

ಜೈಲಿನಿಂದ ಹೊರಬಂದರೂ ಅಮೀರ್‌ಗೆ ಈಗಲೇ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಇವರ ಮೇಲೆ ಐದು ವರ್ಷಗಳ ನಿಷೇಧ ಹೇರಿದೆ.

2010 ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಈ ಮೂವರು `ಸ್ಪಾಟ್ ಫಿಕ್ಸಿಂಗ್~ ನಡೆಸಿದ್ದು ವಿಚಾರಣೆಯ ವೇಳೆ ಸಾಬೀತಾಗಿತ್ತು. ಪಂದ್ಯದ ಕೆಲವು ನಿರ್ದಿಷ್ಟ ಅವಧಿಯಲ್ಲಿ ಅಮೀರ್ ಮತ್ತು ಆಸಿಫ್ ಉದ್ದೇಶಪೂರ್ವಕವಾಗಿ ನೋಬಾಲ್ ಎಸೆದಿದ್ದರು. ಅಂದು ತಂಡದ ನಾಯಕರಾಗಿದ್ದ ಬಟ್ ನೋಬಾಲ್ ಎಸೆಯುವಂತೆ ಇವರಿಗೆ ಸೂಚಿಸಿದ್ದರು. ಇದಕ್ಕಾಗಿ ಬುಕ್ಕಿಯಿಂದ ಭಾರಿ ಮೊತ್ತದ ಹಣ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT