ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಸ್- ಸ್ಟೆಪನೆಕ್ ಜೋಡಿಗೆ ಪ್ರಶಸ್ತಿ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಶಾಂಘೈ (ಪಿಟಿಐ): ಲಿಯಾಂಡರ್ ಪೇಸ್ ಮತ್ತು ರಾಡೆಕ್ ಸ್ಟೆಪನೆಕ್ ಜೋಡಿ ಇಲ್ಲಿ ನಡೆದ ಎಟಿಪಿ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಸಾಕಷ್ಟು ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯದಲ್ಲಿ ಭಾನುವಾರ ಭಾರತ- ಜೆಕ್ ಗಣರಾಜ್ಯದ ಜೋಡಿ 6-7, 6-3, 10-5 ರಲ್ಲಿ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ವಿರುದ್ಧ ಗೆಲುವು ಪಡೆಯಿತು.

ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದ ಪೇಸ್- ಸ್ಟೆಪನೆಕ್ ಆ ಬಳಿಕ ತಿರುಗೇಟು ನೀಡಿ ರೋಚಕ ಗೆಲುವು ಪಡೆದರು. ಒಂದು ಗಂಟೆ 36 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಪೇಸ್ ಮತ್ತು ಸ್ಟೆಪನೆಕ್ ಐದು `ಬ್ರೇಕ್ ಪಾಯಿಂಟ್~ ಅವಕಾಶಗಳಲ್ಲಿ ನಾಲ್ಕನ್ನೂ ಕಾಪಾಡಿಕೊಂಡರು.

ಭಾರತದ ಆಟಗಾರರ ನಡುವಿನ ಈ ಹೋರಾಟಕ್ಕೆ ಹೆಚ್ಚಿನ ಮಹತ್ವ ಲಭಿಸಿತ್ತು. ಏಕೆಂದರೆ ಲಂಡನ್ ಒಲಿಂಪಿಕ್ಸ್ ಸಂದರ್ಭ ಭೂಪತಿ ಮತ್ತು ರೋಹನ್ ಅವರು ಪೇಸ್ ಜೊತೆ ಆಡಲು ನಿರಾಕರಿಸಿದ್ದರು. ಇದರಿಂದ ಪೇಸ್‌ಗೆ ಈ ಪಂದ್ಯ ಮುಯ್ಯಿ ತೀರಿಸಲು ಲಭಿಸಿದ ಉತ್ತಮ ಅವಕಾಶ ಎನಿಸಿತ್ತು.

`ಭಾರತದ ಮೂವರು ಆಟಗಾರರಿಗೆ ಈ ಪಂದ್ಯ ವೈಯಕ್ತಿಕ ನಿಟ್ಟಿನಲ್ಲಿ ಮಹತ್ವದ್ದಾಗಿತ್ತು. ರಾಡೆಕ್ ನನಗೆ ಬೆಂಬಲ ನೀಡಿದರು. ನಿರಾಳವಾಗಿ ಆಡುವಂತೆ ತಿಳಿಸಿದರು~ ಎಂದು ಪೇಸ್ ಪ್ರತಿಕ್ರಿಯಿಸಿದರು.

ಪೇಸ್ ಈ ಋತುವಿನ ಆರಂಭದಲ್ಲಿ ಸ್ಟೆಪನೆಕ್ ಜೊತೆ ಆಡಲು ನಿರ್ಧರಿಸಿದ್ದರು. ಮಾತ್ರವಲ್ಲ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಉತ್ತಮ ಆರಂಭ ಪಡೆದಿದ್ದರು. ಅದೇ ರೀತಿ ಮಿಯಾಮಿ ಮಾಸ್ಟರ್ಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು.

ಸೆಪ್ಟೆಂಬರ್‌ನಲ್ಲಿ ನಡೆದ ಅಮೆರಿಕ ಓಪನ್ ಟೂರ್ನಿಯಲ್ಲಿ `ರನ್ನರ್ ಅಪ್~ ಆಗಿದ್ದರೆ, ಇತ್ತೀಚೆಗೆ ಟೋಕಿಯೊದಲ್ಲಿ ನಡೆದ ಜಪಾನ್ ಓಪನ್ ಟೂರ್ನಿಯಲ್ಲೂ `ರನ್ನರ್ ಅಪ್~ ಸ್ಥಾನ ಪಡೆದಿದ್ದರು.

ಜೊಕೊವಿಚ್ ಚಾಂಪಿಯನ್: ಸರ್ಬಿಯದ ನೊವಾಕ್ ಜೊಕೊವಿಚ್ ಇದೇ ಟೂರ್ನಿಯ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಜಯಿಸಿದರು. ಫೈನಲ್‌ನಲ್ಲಿ ಅವರು 5-7, 7-6, 6-3 ರಲ್ಲಿ ಬ್ರಿಟನ್‌ನ ಆ್ಯಂಡಿ ಮರ‌್ರೆ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT