ನವದೆಹಲಿ, (ಪಿಟಿಐ): ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ 413 ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಇಲಾಖೆಗೆ ಸಂದಾಯಮಾಡಬೇಕಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಮಾಹಿತಿ ಹಕ್ಕು ಕಾಯಿದೆ ಅನ್ವಯ ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ, ಈ ವಿಷಯ ತಿಳಿಸಿರುವ ಆದಾಯ ತೆರಿಗೆ ಇಲಾಖೆಯು, 2009-10 ನೇ ಸಾಲಿನಲ್ಲಿ ಇಲಾಖೆಗೆ ಒಪ್ಪಿಸಿದ ಆದಾಯದ ಲೆಕ್ಕಾಚಾರದ ಪ್ರಕಾರ ಬಿಸಿಸಿಐ 413 ಕೋಟಿ ತೆರಿಗೆಯನ್ನು ಪಾವತಿಸಬೇಕಿತ್ತು, ಆದರೆ ಅದು ಕೇವಲ 41 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿದೆ ಎಂದು ಸ್ಪಷ್ಟಪಡಿಸಿದೆ.
ಬಿಸಿಸಿಐಯು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುವ ಉದ್ದೇಶದಿಂದ ತಾನೊಂದು ದತ್ತಿ ಸಂಸ್ಥೆಯೆಂದು ಹೇಳಿಕೊಳ್ಳುತ್ತಿದೆ. ಆದರೆ, ಆ ವಿನಾಯಿತಿಯನ್ನು ಈಗ ರದ್ದುಪಡಿಸಲಾಗಿದೆ. ಏಕೆಂದರೆ, ಬಿಸಿಸಿಐನ ಆದಾಯವೀಗ ವ್ಯವಹಾರಿಕ ಆದಾಯವಾಗಿದೆ.