ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಆತಿಥ್ಯ ವಹಿಸಲಿರುವ ಆಂಗ್ಲರು

ಕ್ರಿಕೆಟ್: 50 ವರ್ಷಗಳ ನಂತರ ಐದು ಟೆಸ್ಟ್ ಪಂದ್ಯಗಳ ಸರಣಿ; 2014ರಲ್ಲಿ ಆಯೋಜನೆ
Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಐವತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿ ಭಾರತ ವಿರುದ್ಧ ಸ್ವದೇಶದಲ್ಲಿ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಯೋಜಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಒಪ್ಪಿಗೆ ನೀಡಿದೆ. ಈ ಸರಣಿ 2014ರ ಜುಲೈನಲ್ಲಿ ಆರಂಭವಾಗಲಿದೆ.

ಟೆಸ್ಟ್ ಸರಣಿ ಅಲ್ಲದೇ, ಒಂದು ಟ್ವೆಂಟಿ-20 ಪಂದ್ಯ ಹಾಗೂ ಐದು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. `1959ರ ಬಳಿಕ ಭಾರತ ನಮ್ಮ ದೇಶದಲ್ಲಿ ಮೊದಲ ಬಾರಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ' ಎಂದು ಇಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಆಂಗ್ಲರ ನಾಡಿಗೆ ಮಹೇಂದ್ರ ಸಿಂಗ್ ದೋನಿ ಸಾರಥ್ಯದ ಭಾರತ 2011ರಲ್ಲಿ ಪ್ರವಾಸ ಕೈಗೊಂಡಿತ್ತು. ಆ ಸಮಯದಲ್ಲಿ ಆಡಿದ ನಾಲ್ಕೂ ಟೆಸ್ಟ್ ಪಂದ್ಯಗಳಲ್ಲಿ ಪರಾಭವಗೊಂಡಿತ್ತು. ಏಕದಿನ ಸರಣಿಯಲ್ಲೂ 0-3ರಲ್ಲಿ ಸೋಲು ಎದುರಾಗಿತ್ತು. ಆಗ ಈ ತಂಡ ತೀವ್ರ ಟೀಕೆಗೆ ಗುರಿಯಾಗಿತ್ತು. ಟ್ವೆಂಟಿ-20 ಸರಣಿಯಲ್ಲಿ ಮಾತ್ರ 1-1 ಸಮಬಲ ಸಾಧಿಸಿದ್ದರು.

`ನಾವೀಗ 50 ವರ್ಷಗಳ ಬಳಿಕ ಭಾರತದ ಎದುರು 5 ಪಂದ್ಯಗಳ ಸರಣಿ ಆಡಲು ಸಜ್ಜಾಗುತ್ತಿದ್ದೇವೆ. ಉಭಯ ತಂಡಗಳ ನಡುವಿನ ಗುಣಮಟ್ಟದ ಪೈಪೋಟಿಗೆ ಇದು ಸಾಕ್ಷಿ. ಬಿಸಿಸಿಐ ಕೂಡ ಉತ್ತಮವಾಗಿ ಸ್ಪಂದಿಸಿದೆ' ಎಂದು ಇಸಿಬಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ಕೋಲಿಯರ್ ನುಡಿದಿದ್ದಾರೆ.

ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಇಂತಿದೆ

ಅಭ್ಯಾಸ ಪಂದ್ಯಗಳು: ಜೂನ್ 26-28: ಲಿಸ್ಟರ್‌ಷೈರ್ ಎದುರು (ಸ್ಥಳ: ಲೀಸ್ಟರ್). ಜುಲೈ 1-3: ಡರ್ಬಿಷೈರ್ ಎದುರು (ಡರ್ಬಿ).
ಟೆಸ್ಟ್ ಸರಣಿ: ಮೊದಲ ಪಂದ್ಯ: ಜುಲೈ 9-13, ಸ್ಥಳ: ಟ್ರೆಂಟ್‌ಬ್ರಿಜ್. ಎರಡನೇ ಟೆಸ್ಟ್: ಜುಲೈ 17-21, ಸ್ಥಳ: ಲಾರ್ಡ್ಸ್. ಮೂರನೇ ಟೆಸ್ಟ್: ಜುಲೈ 27-31, ಸ್ಥಳ: ಏಜಿಯಸ್ ಬೌಲ್. ನಾಲ್ಕನೇ ಟೆಸ್ಟ್: ಆಗಸ್ಟ್ 7-11, ಸ್ಥಳ: ಓಲ್ಡ್ ಟ್ರಾಫರ್ಡ್. ಐದನೇ ಟೆಸ್ಟ್: ಆಗಸ್ಟ್ 15-19, ಸ್ಥಳ: ದಿ ಓವಲ್.

ಅಭ್ಯಾಸ ಪಂದ್ಯ (50 ಓವರ್): ಆಗಸ್ಟ್ 22: ಮಿಡ್ಲ್‌ಸೆಕ್ಸ್ ಎದುರು (ಸ್ಥಳ: ದಿ ಓವಲ್).   ಏಕದಿನ ಸರಣಿ: ಮೊದಲ ಪಂದ್ಯ: ಆ.25 (ಸ್ಥಳ: ಬ್ರಿಸ್ಟಲ್), ಎರಡನೇ ಪಂದ್ಯ: ಆ.27 (ಸ್ಥಳ: ಸೋಫಿಯಾ ಗಾರ್ಡನ್ಸ್), ಮೂರನೇ ಪಂದ್ಯ: ಆ. 30 (ಟ್ರೆಂಟ್‌ಬ್ರಿಜ್), ನಾಲ್ಕನೇ ಪಂದ್ಯ: ಸೆಪ್ಟೆಂಬರ್ 2 (ಸ್ಥಳ: ಎಜ್‌ಬಾಸ್ಟನ್), ಐದನೇ ಪಂದ್ಯ: ಸೆ.5 (ಸ್ಥಳ: ಹೆಡಿಂಗ್ಲೆ). ಟ್ವೆಂಟಿ-20 ಪಂದ್ಯ: ಸೆಪ್ಟೆಂಬರ್ 7 (ಸ್ಥಳ: ಎಜ್‌ಬಾಸ್ಟನ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT