ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಳಿಗೆ ತಾಯ್ನಾಡಿನಲ್ಲಿ ಕೊನೆ ಪಂದ್ಯದ ಹರ್ಷ

Last Updated 29 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಕೊಲಂಬೊ: ಅದೊಂದು ಭಾವನಾತ್ಮಕ ಕ್ಷಣ. ತಾಯ್ನಾಡಿನಲ್ಲಿ ಕೊನೆಯ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಿದ ಮುತ್ತಯ್ಯ ಮುರಳೀಧರನ್‌ಗೆ ಕೊನೆಯ ಎಸೆತದಲ್ಲೊಂದು ದೊಡ್ಡ ವಿಕೆಟ್. ಅರ್ಧ ಶತಕ ಗಳಿಸಿ ಮುನ್ನುಗ್ಗಿದ್ದ ಕಿವೀಸ್ ತಂಡದ ಸ್ಕಾಟ್ ಸ್ಟೈರಿಸ್ ಅವರನ್ನು ಸಿಂಹಳೀಯರ ಪಡೆಯ ಅನುಭವಿ ಸ್ಪಿನ್ನರ್ ‘ಎಲ್‌ಬಿಡಬ್ಲ್ಯು’ ಬಲೆಗೆ ಬೀಳಿಸಿದರು.

ಅದರೊಂದಿಗೆ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ಪಾಲಿನ ಹತ್ತು ಓವರ್ ಕೂಡ ಪೂರ್ಣಗೊಳಿಸಿದರು. ಆರ್.ಪ್ರೇಮದಾಸಾ ಕ್ರೀಡಾಂಗಣದಲ್ಲಿ ಸೇರಿದ್ದ ಭಾರಿ ಸಂಖ್ಯೆಯ ಪ್ರೇಕ್ಷಕರ ಎದುರು ಮುರಳಿ ಸಂತಸ ಚಿತ್ತರಾಗಿ ಕ್ಯಾಪ್ ಕೈಯಲ್ಲಿ ಹಿಡಿದು ಬೀಸಿದರು. ಆಗ ಪ್ರೇಕ್ಷಕ ಸಮೂಹವೂ ಎದ್ದು ನಿಂತು ಚಪ್ಪಾಳೆ ತಟ್ಟಿ ಉನ್ನತ ಸಾಧನೆ ಮಾಡಿದ ಸ್ಪಿನ್ ಬೌಲರ್‌ಗೆ ವಿದಾಯ ಹೇಳಿತು.

ವಿಶ್ವಕಪ್ ಕ್ರಿಕೆಟ್ ನಂತರ ಎಲ್ಲ ಪ್ರಕಾರದ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ಪ್ರಕಟಿಸಿರುವ ಮುರಳಿಗೆ ಮಂಗಳವಾರ ನಡೆದ ಕಿವೀಸ್ ವಿರುದ್ಧದ ಹಣಾಹಣಿಯೇ ತಾಯ್ನಾಡಿನಲ್ಲಿನ ಕೊನೆಯ ಪಂದ್ಯ. ಈ ಪಂದ್ಯದಲ್ಲಿ ಮುರಳಿ ಎರಡು ಸ್ಪೆಲ್‌ನಲ್ಲಿ ತಮ್ಮ ಕೋಟಾ ಪೂರ್ಣಗೊಳಿಸಿದರು. 10-1-42-2 ಇದು ಲಂಕಾದಲ್ಲಿನ ಅವರ ಅಂತಿಮ ಆಟದಲ್ಲಿನ ಪ್ರದರ್ಶನ.

ಗಾಯದ ಕಾರಣ ಮುರಳಿಧರನ್ ಆಡುವುದೇ ಅನುಮಾನವಾಗಿತ್ತು. ಆದರೆ ತಮ್ಮೂರಿನಲ್ಲಿ ಆಡುವ ಕೊನೆಯ ಅವಕಾಶವನ್ನು ಅವರು ಕೈಬಿಡಲಿಲ್ಲ. ವಿಶ್ವಕಪ್‌ನಂಥ ಮಹತ್ವದ ಪಂದ್ಯದಲ್ಲಿ ತಂಡಕ್ಕೆ ತಮ್ಮ ಬೌಲಿಂಗ್‌ನ ಅಗತ್ಯವಿದೆ ಎಂದು ಅರಿತು ಅಂಗಳದಲ್ಲಿ ಕಾಣಿಸಿಕೊಂಡರು. ತಮ್ಮ ಅಭಿಮಾನಿಗಳನ್ನು ಕೂಡ ನಿರಾಸೆಗೊಳಿಸಲಿಲ್ಲ. ನ್ಯೂಜಿಲೆಂಡ್ ರನ್ ಗತಿಗೆ ಕಡಿವಾಣ ಹಾಕುವ ಜೊತೆಗೆ ಎರಡು ಮಹತ್ವದ ವಿಕೆಟ್‌ಗಳನ್ನೇ ಕಿತ್ತರು.

349 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿ, 534 ವಿಕೆಟ್‌ಗಳನ್ನು ಕಬಳಿಸಿರುವ ಮುರಳಿ ತಮ್ಮ ತಂಡವು ನ್ಯೂಜಿಲೆಂಡ್ ಪಡೆಯನ್ನು ಆಲ್‌ಔಟ್ ಮಾಡಿ ಪೆವಿಲಿಯನ್ ಕಡೆಗೆ ನಡೆದಾಗ ಪ್ರೇಕ್ಷಕರಿಂದ ಭಾರಿ ಚಪ್ಪಾಳೆ. ಸಹ ಆಟಗಾರರೂ ಮುರಳಿಗೆ ಮೊದಲು ಡ್ರೆಸಿಂಗ್ ಕೋಣೆಯ ಕಡೆಗೆ ಹೆಜ್ಜೆ ಹಾಕಲು ಅವಕಾಶ ಮಾಡಿಕೊಟ್ಟರು. ‘ಸ್ವಂತ ನೆಲದಲ್ಲಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಡುವ ಮೂಲಕ ನಾಡಿನ ಕ್ರಿಕೆಟ್ ಪ್ರೇಮಿಗಳಿಗೆ ವಿದಾಯ ಹೇಳುತ್ತಿದ್ದೇನೆ. ಇದಕ್ಕಿಂತ ದೊಡ್ಡ ಸಂತಸ ಇನ್ನೊಂದಿಲ್ಲ’ ಎಂದು ಮುರಳೀಧರನ್ ಪ್ರತಿಕ್ರಿಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT