ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಜರ್ ಫೆಡರರ್‌ ಚಾಂಪಿಯನ್‌

ಟೆನಿಸ್‌: ಡಬಲ್ಸ್‌ನಲ್ಲಿ ಬೋಪಣ್ಣ–ಮಾರ್ಗಿಯಾ ಜೋಡಿ ‘ರನ್ನರ್ಸ್‌ ಅಪ್‌’
Last Updated 21 ಜೂನ್ 2015, 19:30 IST
ಅಕ್ಷರ ಗಾತ್ರ

ಹಾಲೆ, ಜರ್ಮನಿ (ರಾಯಿಟರ್ಸ್‌/ ಎಎಫ್‌ಪಿ): ಆಟದ ಎಲ್ಲಾ ವಿಭಾಗ ಗಳಲ್ಲೂ ಪ್ರಭುತ್ವ ಸಾಧಿಸಿದ ಸ್ವಿಟ್ಜರ್‌ ಲೆಂಡ್‌ನ  ರೋಜರ್‌ ಫೆಡರರ್‌ ಇಲ್ಲಿ ಕೊನೆಗೊಂಡ ಗ್ಯಾರಿ ವೆಬರ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಹೋರಾಟದಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಹೊಂದಿರುವ ಫೆಡರರ್‌ 7–6, 6–4ರಲ್ಲಿ ಇಟಲಿಯ ಆ್ಯಂಡ್ರೆಸ್‌ ಸೆಪ್ಪಿ ಎದುರು ಜಯಭೇರಿ ಮೊಳಗಿಸಿದರು.

ಇದರೊಂದಿಗೆ ಟೂರ್ನಿಯಲ್ಲಿ ದಾಖಲೆಯ ಎಂಟು ಬಾರಿ ಕಿರೀಟ ಮುಡಿಗೇರಿಸಿಕೊಂಡ ಹೆಗ್ಗಳಿಕೆಗೆ ಭಾಜನರಾದರು. ಸ್ವಿಸ್‌ ಆಟಗಾರನನ್ನು ಹೊರತು ಪಡಿಸಿ ಈ ಟೂರ್ನಿಯಲ್ಲಿ ಯಾರೂ ಇಷ್ಟು ಬಾರಿ ಚಾಂಪಿಯನ್‌ ಆಗಿಲ್ಲ.

ಫೆಡರರ್‌ ಈ ಋತುವಿನಲ್ಲಿ ಗೆದ್ದ ನಾಲ್ಕನೇ ಹಾಗೂ ವೃತ್ತಿ ಜೀವನದ 86ನೇ ಪ್ರಶಸ್ತಿ ಇದಾಗಿದೆ.  ಟೂರ್ನಿಯಲ್ಲಿ 10ನೇ ಬಾರಿ ಫೈನಲ್‌ ಪ್ರವೇಶಿಸಿದ್ದ ಅಗ್ರ ಶ್ರೇಯಾಂಕದ  ಫೆಡರರ್‌  ಮೊದಲ ಸೆಟ್‌ನ ಆರಂಭದಲ್ಲಿ ನಿರೀಕ್ಷಿತ ಆಟ ಆಡಲಿಲ್ಲ.  ಗ್ರ್ಯಾಂಡ್‌ ಸ್ಲಾಮ್‌ನಲ್ಲಿ 17 ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಆಟಗಾರನ ಎದುರು ಸೆಪ್ಪಿ ದಿಟ್ಟ ಆಟ ಆಡಿ 5–4 ಮುನ್ನಡೆ ಗಳಿಸಿದರು. ಈ ಹಂತದಲ್ಲಿ ತಮ್ಮ ಸರ್ವ್‌ನಲ್ಲಿ  ಎರಡು ಸೆಟ್‌ ಪಾಯಿಂಟ್ಸ್‌ ಕಾಪಾಡಿಕೊಂಡು 5–5ರಲ್ಲಿ ಸಮಬಲ ಸಾಧಿಸಿದರು.

ಬಳಿಕವೂ ಮುನ್ನಡೆಗಾಗಿ ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಹೋರಾಟ ಮುಂದುವರಿದ ಕಾರಣ ಸೆಟ್‌ ‘ಟೈ ಬ್ರೇಕರ್‌’ಗೆ ಸಾಗಿತು. ನಿರ್ಣಾಯಕ ಗೇಮ್‌ನಲ್ಲಿ ಗುಣಮಟ್ಟದ ಆಟ ಆಡಿದ ಫೆಡರರ್‌ ಮುನ್ನಡೆ ಗಳಿಸಿದರು.  ಎರಡನೇ ಸೆಟ್‌ನ ಆರಂಭದಿಂದಲೇ ಇಬ್ಬರೂ ತುರುಸಿನ ಆಟಕ್ಕೆ ಮುಂದಾದರು. ಹೀಗಾಗಿ 2–2ರ ಸಮಬಲ ಕಂಡು ಬಂತು. ಆ ನಂತರ ಮೂರು ಬ್ರೇಕ್‌ ಪಾಯಿಂಟ್ಸ್‌ಗಳನ್ನು ಕಲೆಹಾಕಿದ ಫೆಡರರ್‌ 4–3ರ ಮುನ್ನಡೆ ಗಳಿಸಿದರು. ಸೊಗಸಾದ ಫೋರ್‌ಹ್ಯಾಂಡ್‌ ಹೊಡೆತಗಳನ್ನು ಸಿಡಿಸಿದ ಸ್ವಿಸ್‌ನ ಆಟಗಾರ ಪಂದ್ಯ ಗೆದ್ದು ಸಂಭ್ರಮಿಸಿದರು.

ಬೋಪಣ್ಣ ಜೋಡಿ ರನ್ನರ್ಸ್‌ ಅಪ್‌: ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ರೋಹನ್‌ ಬೋಪಣ್ಣ ಮತ್ತು ರೊಮೇನಿಯಾದ ಫ್ಲೋರಿನ್‌ ಮಾರ್ಗಿಯಾ ‘ರನ್ನರ್ಸ್‌ ಅಪ್‌’ ಆದರು.

ಫೈನಲ್‌ ಹೋರಾಟದಲ್ಲಿ ಬೋಪಣ್ಣ ಮತ್ತು ಮಾರ್ಗಿಯಾ 6–7, 2–6ರಲ್ಲಿ ಅಮೆರಿಕಾದ ರಾಜೀವ್‌ ರಾಮ್‌ ಮತ್ತು ದಕ್ಷಿಣ ಆಫ್ರಿಕಾದ ರಾವೆನ್‌ ಕ್ಲಾಸೆನ್‌ ಎದುರು ಸೋಲು ಕಂಡರು.

ಮರ್ರೆಗೆ ಪ್ರಶಸ್ತಿ (ಲಂಡನ್‌ ವರದಿ): ಬ್ರಿಟನ್‌ನ ಆ್ಯಂಡಿಮರ್ರೆ  ಲಂಡನ್‌ನಲ್ಲಿ ನಡೆದ ಏಜನ್‌ ಟೆನಿಸ್‌ ಚಾಂಪಿಯನ್‌ ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ ಮರ್ರೆ 6–3, 6–4ರಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್‌ಸನ್‌ ಎದುರು ಗೆಲುವು ತಮ್ಮದಾಗಿಸಿಕೊಂಡರು.

ಎಡವಿದ ಪೇಸ್‌ ಜೋಡಿ: ಪರಿ ಣಾಮಕಾರಿ ಆಟ ಆಡುವಲ್ಲಿ ಎಡವಿದ ಭಾರತದ ಲಿಯಾಂಡರ್‌ ಪೇಸ್‌ ಮತ್ತು ಕೆನಡಾದ ಡೇನಿಯಲ್‌ ನೆಸ್ಟರ್‌ ಇಲ್ಲಿ ನಡೆದ ಏಜನ್‌ ಟೆನಿಸ್‌ ಚಾಂಪಿಯನ್‌ ಷಿಪ್‌ನ ಸೆಮಿಫೈನಲ್‌ನಲ್ಲಿ ಸೋಲು ಕಂಡಿದ್ದಾರೆ. ಭಾನುವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ನಾಲ್ಕರ ಘಟ್ಟದ ಹೋರಾಟದಲ್ಲಿ ಮೂರನೇ ಶ್ರೇಯಾಂಕ ದ ಪೇಸ್‌ ಮತ್ತು ನೆಸ್ಟರ್‌ 3–6, 6–7ರಲ್ಲಿ ಸರ್ಬಿಯಾದ ನೆನಾದ್‌ ಜಿಮೊಂಜಿಕ್‌ ಮತ್ತು ಪೋಲೆಂಡ್‌ನ ಮಾರ್ಸಿನ್‌ ಮಟ್‌ಕೌಸ್ಕಿ ಎದುರು ಮಣಿದು ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದರು.

ಉಭಯ ಜೋಡಿಗಳು ಬಲಿಷ್ಠವಾಗಿ ದ್ದರಿಂದ ಮೊದಲ ಸೆಟ್‌ನ ಆರಂಭದಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿತು. ಪೇಸ್‌ ಮತ್ತು  ನೆಸ್ಟರ್‌ ಎದುರಾಳಿಗಳಿಗೆ ಒಂದೂ ಬ್ರೇಕ್‌ ಪಾಯಿಂಟ್ಸ್‌  ಬಿಟ್ಟುಕೊಡದೆ ದಿಟ್ಟ ಆಟ ಆಡಿದರು. ಆದರೆ ಎರಡನೇ ಶ್ರೇಯಾಂಕ ಹೊಂದಿರುವ ನೆನಾದ್‌ ಮತ್ತು ಮಾರ್ಸಿನ್‌ ಹೊಂದಾಣಿಕೆಯ ಆಟ ಆಡಿ ಸುಲಭವಾಗಿ ಸೆಟ್‌ ಗೆದ್ದುಕೊಂಡರು.

ಎರಡನೇ ಸೆಟ್‌ನ ಆರಂಭದಿಂದಲೇ ಭಾರತ–ಕೆನಡಾದ ಜೋಡಿಯಿಂದ ಆಕರ್ಷಕ ಆಟ ಮೂಡಿಬಂತು. ಪೇಸ್‌ ಮತ್ತು ನೆಸ್ಟರ್‌ ಒಮ್ಮೆ ಎದುರಾಳಿಗಳ ಸರ್ವ್‌ ಮುರಿದು ಭರವಸೆ ಮೂಡಿ ಸಿದ್ದರು. ಆದರೆ ಸರ್ಬಿಯಾ ಮತ್ತು ಪೋಲೆಂಡ್‌ ಜೋಡಿ ಬಲಿಷ್ಠ ಸ್ಮ್ಯಾಷ್‌ ಮತ್ತು ರಿಟರ್ನ್‌ಗಳನ್ನು ಸಿಡಿಸಿ ಭಾರತ–ಕೆನಡಾದ ಜೋಡಿಯ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT