ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ, ಸಿಂಧು ಮೇಲೆ ಎಲ್ಲರ ಚಿತ್ತ

Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ ನೆಹ್ವಾಲ್ ಹಾಗೂ ಇತ್ತೀಚಿನ ದಿನಗಳಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಪಿ.ವಿ.ಸಿಂಧು ಅವರ ಮೇಲೆ ಈಗ ಎಲ್ಲರ ಚಿತ್ತ ಹರಿದಿದೆ. ಏಕೆಂದರೆ ಈ ಆಟಗಾರ್ತಿಯರು ಸ್ವದೇಶದಲ್ಲಿ ತಮ್ಮ ಪ್ರತಿಭೆ ಮೆರೆಯಲು ಸನ್ನದ್ದರಾಗಿದ್ದಾರೆ.

ಕಾರಣ ಮಂಗಳವಾರ ಇಲ್ಲಿ ಇಂಡಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಸೈನಾ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ. ಈ ಟೂರ್ನಿ ಸಿರಿ ಪೋರ್ಟ್ ಕ್ರೀಡಾ ಸಮುಚ್ಚಯದಲ್ಲಿ ನಡೆಯಲಿದೆ.

ಅಗ್ರ ರ‍್ಯಾಂಕ್‌ನ ಆಟಗಾರ ಮಲೇಷ್ಯಾದ ಲೀ ಚೊಂಗ್ ವೀ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಜಯಿಸುವ ಭರವಸೆ ಮೂಡಿಸಿದ್ದಾರೆ. ಚೊಂಗ್ 2011ರಲ್ಲಿ ನಡೆದ ಚೊಚ್ಚಲ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಆತಿಥೇಯ ತಂಡದ ಆಟಗಾರ ಪಿ.ಕಶ್ಯಪ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಕಶ್ಯಪ್ ಬಳಿಕ ಗಮನಾರ್ಹ ಪ್ರದರ್ಶನ ತೋರಿದ್ದಾರೆ.

ವಿಶ್ವದ ಎರಡನೇ ರ‍್ಯಾಂಕ್‌ನ ಆಟಗಾರ್ತಿ ಸೈನಾ ಈ ಟೂರ್ನಿಯಲ್ಲಿ ಆತಿಥೇಯ ತಂಡವನ್ನು ಮುನ್ನಡೆಸಲಿದ್ದಾರೆ. 88 ಲಕ್ಷ ರೂಪಾಯಿ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ 200 ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಮಲೇಷ್ಯಾ, ಇಂಡೊನೇಷ್ಯಾ, ಡೆನ್ಮಾರ್ಕ್, ಜರ್ಮನಿ, ಇಂಗ್ಲೆಂಡ್, ಚೀನಾ, ಕೊರಿಯಾ, ಜಪಾನ್ ಸೇರಿದಂತೆ ಒಟ್ಟು 22 ದೇಶಗಳ ಆಟಗಾರರು ಹಾಗೂ ಆಟಗಾರ್ತಿಯರು ಪೈಪೋಟಿ ನಡೆಸಲಿದ್ದಾರೆ.

ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಪ್ರತ್ಯೇಕ ಜೊತೆಗಾರ್ತಿಯರೊಂದಿಗೆ ಕಣಕ್ಕಿಳಿಯಲಿದ್ದಾರೆ. ಪ್ರದ್ನ್ಯಾ ಗಾದ್ರೆ ಜೊತೆಗೂಡಿ ಅಶ್ವಿನಿ ಹಾಗೂ ಪ್ರಜಕ್ತಾ ಸಾವಂತ್ ಜೊತೆಗೂಡಿ ಜ್ವಾಲಾ ಆಡಲಿದ್ದಾರೆ
.
ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ ಹಾಗೂ ಸಿಂಧು ಮುಖಾಮುಖಿಯಾಗುವ ಸಾಧ್ಯತೆ ಇದೆ. ಹಾಗಾಗಿ ಈ ಹೋರಾಟ ಕುತೂಹಲ ಮೂಡಿಸಿದೆ. ಚೀನಾ ಆಟಗಾರ್ತಿಯರ ಅನುಪಸ್ಥಿತಿ ಕಾರಣ ಸೈನಾ ಈ ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಪಡೆದಿದ್ದಾರೆ. ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಇಂಡೊನೇಷ್ಯಾದ ಬೆಲಾಟ್ರಿಕ್ಸ್ ಮನುಪುತಿ ಅವರ ಸವಾಲು ಎದುರಿಸಲಿದ್ದಾರೆ.

`ಸಿಂಧು ಎದುರು ಪೈಪೋಟಿ ನಡೆಸಲು ಖುಷಿಯಾಗುತ್ತಿದೆ. ಜೊತೆಗೆ ಒತ್ತಡವೂ ಇದೆ. ಏಕೆಂದರೆ ಈ ಟೂರ್ನಿಯಲ್ಲಿ ನಾನು ಅಗ್ರಶ್ರೇಯಾಂಕದ ಆಟಗಾರ್ತಿ. ಆದರೆ ಪ್ರೇಕ್ಷಕರಿಗೆ ಇದೊಂದು ಆಸಕ್ತಿದಾಯಕ ಪಂದ್ಯ. ಉತ್ತಮ ಪೈಪೋಟಿ ನೀಡುವ ವಿಶ್ವಾಸದಲ್ಲಿ ನಾನಿದ್ದೇನೆ' ಎಂದು ಸೈನಾ ಹೇಳಿದ್ದಾರೆ.

17ರ ಹರೆಯದ ಸಿಂಧು ಇತ್ತೀಚೆಗಷ್ಟೇ ಕೊನೆಗೊಂಡ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಾಜಿ ಅಗ್ರ ರ‌್ಯಾಂಕ್‌ನ ಆಟಗಾರ್ತಿ ಚೀನಾದ ಶಿಕ್ಸಿಯಾನ್ ವಾಂಗ್ ಅವರನ್ನು ಮಣಿಸಿದ್ದರು.

ಆದರೆ ಕಶ್ಯಪ್‌ಗೆ ಮೊದಲ ಸುತ್ತಿನಲ್ಲೇ ಕಠಿಣ ಎದುರಾಳಿ ಸಿಕ್ಕಿದ್ದಾರೆ. ಏಕೆಂದರೆ ಅವರು ವಿಶ್ವ ಚಾಂಪಿಯನ್ ತೌಫಿಕ್ ಹಿದಾಯತ್ ಎದುರು ಪೈಪೋಟಿ ನಡೆಸಬೇಕಾಗಿದೆ. ಆರ್‌ಎಂವಿ ಗುರುಸಾಯಿದತ್, ಅಜಯ್ ಜಯರಾಮನ್, ಆನಂದ್ ಪವಾರ್, ಸೌರಭ್ ವರ್ಮ ಹಾಗೂ ಬಿ ಸಾಯಿ ಪ್ರಣೀತ್ ಕೂಡ ಕಣದಲ್ಲಿದ್ದಾರೆ.

`ಭಾರತದ ಆಟಗಾರರು ವಿಶ್ವ ಬ್ಯಾಡ್ಮಿಂಟನ್ ರಂಗದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಯುವ ಆಟಗಾರರು ಸ್ಥಿರ ಪ್ರದರ್ಶನ ನೀಡುವುದು ತುಂಬಾ ಮುಖ್ಯ' ಎಂದು ಭಾರತ ತಂಡದ ಕೋಚ್ ಪಿ.ಗೋಪಿಚಂದ್ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT