ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ: ಸಂಸದ ಶ್ರೀನಿವಾಸ ಪ್ರಸಾದ್‌ ವ್ಯಂಗ್ಯ

ಬುಧವಾರ, ಜೂನ್ 26, 2019
29 °C
ಬಿಜೆಪಿ ಮುಗಿಸಲು ಹೊರಟವರ ಕಥೆ ಇಂದು ಏನಾಗಿದೆ–

ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ: ಸಂಸದ ಶ್ರೀನಿವಾಸ ಪ್ರಸಾದ್‌ ವ್ಯಂಗ್ಯ

Published:
Updated:

ಚಾಮರಾಜನಗರ: ‘ರಾಜ್ಯದಲ್ಲಿ ಬಿಜೆಪಿಯನ್ನು ಮುಗಿಸುವುದೇ ಗುರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಸಿದ್ದರಾಮಯ್ಯ ಅವರ ಸ್ಥಿತಿ ಇಂದೇನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ನೂತನ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಮಂಗಳವಾರ ಸಲಹೆ ನೀಡಿದರು.

ಜಿಲ್ಲಾ ಬಿಜೆಪಿ ಘಟಕ ನಗರದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಳೆದ ಚುನಾವಣೆಯಲ್ಲಿ ಧ್ರುವನಾರಾಯಣ ಅವರು 1.41 ಲಕ್ಷ ಮತಗಳಿಂದ ಗೆದ್ದಿದ್ದಾರೆ, ಈ ಬಾರಿ 3 ಲಕ್ಷ ಮತಗಳ ಅಂತರ ಗೆಲ್ಲಿಸಿ ಎಂದು ಕ್ಷೇತ್ರದ ಮತದಾರರಿಗೆ ಸಿದ್ದರಾಮಯ್ಯ ಕರೆ ನೀಡಿದ್ದರು. ಆದರೆ, ನೀವೆಲ್ಲಾ ಸೇರಿ ಈ ಶ್ರೀನಿವಾಸ ಪ್ರಸಾದ್‌ನನ್ನು ಅಭ್ಯರ್ಥಿ ಮಾಡುತ್ತೀರಿ ಎಂಬುದು ಅವರಿಗೆ ಗೊತ್ತಿರಲಿಲ್ಲ’ ಎಂದು ವ್ಯಂಗ್ಯವಾಡಿದರು.

‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಹೊರಟ ಮೈತ್ರಿ ಪಕ್ಷಗಳಿಗೆ ಸಿಕ್ಕಿದ್ದು 2 ಸ್ಥಾನ. ಬಿಜೆಪಿ 25 ಸ್ಥಾನಗಳಲ್ಲಿ ಗೆದ್ದಿದೆ. ಮಂಡ್ಯದಲ್ಲಿ ಎಂಟು ಶಾಸಕರಿದ್ದರೂ ಮುಖ್ಯಮಂತ್ರಿಗೆ ತಮ್ಮ ಮಗನನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಸೋತಿದ್ದಾರೆ. ಅವರು ಇನ್ನು ಗಂಭೀರವಾಗಿ ಮನೆಯಲ್ಲಿ ಇರಬೇಕು’ ಎಂದರು.

ಗೆಲುವಿನ ನಾಂದಿ: ‘ಚಾಮರಾಜನಗರದಲ್ಲಿ ಬಿಜೆಪಿ ಮೊದಲ ಜಯ ಸಾಧಿಸುವ ಮೂಲಕ ಗೆಲುವಿಗೆ ನಾಂದಿ ಹಾಡಿದೆ. ಇದು ಕೊನೆಯಾಗಬಾರದು. ಹೀಗೆ ಮುಂದುವರಿಯಬೇಕು’ ಎಂದು ಆಶಿಸಿದರು.

‘ನನ್ನ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತ ಹಾಗೂ ಮುಖಂಡರು ಶ್ರಮಿಸಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಗುಂಡ್ಲುಪೇಟೆ, ಚಾಮರಾಜನಗರ ಮತ್ತು ನಂಜನಗೂಡು ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮುನ್ನಡೆ ಕೊಡುವ ಮೂಲಕ ಗೆಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಎಂಟೂ ಕ್ಷೇತ್ರಗಳಲ್ಲಿ ಮುನ್ನಡೆ ಸಿಗುವಂತಾಗಬೇಕು. ಎಲ್ಲ ಕಡೆಯೂ ಸಂಚರಿಸಿ ಪಕ್ಷವನ್ನು ಸಂಘಟಿಸುತ್ತೇನೆ’ ಎಂದು ಹೇಳಿದರು.

4 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ: ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ವಕ್ತಾರ ಎಸ್‌.ಸುರೇಶ್‌ ಕುಮಾರ್ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ ನಾವು ಗೆದ್ದಿದ್ದರೂ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪಕ್ಷಕ್ಕೆ ಗೆಲುವು ಸಿಕ್ಕಿದೆ. ಈಗ ಕ್ಷೇತ್ರದ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲವನ್ನು ಅರಳಿಸುವುದು ನಮ್ಮ ಮುಂದಿನ ಗುರಿ’ ಎಂದರು. 

‘ಅನುಭವಿ, ನುರಿತ ರಾಜಕಾರಣಿಯಾಗಿರುವ ಶ್ರೀನಿವಾಸ ಪ್ರಸಾದ್‌ ಅವರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ಇದೆ. ಅವರ ನೇತೃತ್ವದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜಯ ಗಳಿಸುವ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು‌ ಕೆಲಸ ಮಾಡಬೇಕು’ ಎಂದರು. 

ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿದ್ದ ರಾಜೇಂದ್ರ ಅವರು ಮಾತನಾಡಿ, ‘ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ ಗೆಲುವು ಸಾಧ್ಯವಾಯಿತು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ ಮಾತನಾಡಿದರು.

ಆರ್‌ಎಸ್‌ಎಸ್‌ ಮುಖಂಡರಾದ ವಿ.ಫಣೀಶ್‌, ಸುರೇಶ್‌ಬಾಬು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎನ್‌.ಬಾಲರಾಜು, ಕಮಲ್‌ರಾಜ್, ಮುಖಂಡರಾದ ಸಿ.ಗುರುಸ್ವಾಮಿ, ಪರಿಮಳಾ ನಾಗಪ್ಪ, ಜಿ.ಎನ್‌.ನಂಜುಂಡಸ್ವಾಮಿ, ಸಿ.ಬಸವೇಗೌಡ, ಎಂ.ರಾಮಚಂದ್ರ, ಎಸ್‌.ಮಹದೇವಯ್ಯ, ನಾಗಶ್ರೀ ಪ್ರತಾಪ್‌, ಹನುಮಂತಶೆಟ್ಟಿ, ಕೆಲ್ಲಂಬಳ್ಳಿ ಸೋಮನಾಯಕ, ನೂರೊಂದು ಶೆಟ್ಟಿ, ಬಸವಣ್ಣ, ವೆಂಕಟರಮಣಸ್ವಾಮಿ (ಪಾಪು), ಎಸ್‌.ಬಾಲಸುಬ್ರಹ್ಮಣ್ಯಂ, ಚಿನ್ನಸ್ವಾಮಿ, ನಂಜುಂಡಸ್ವಾಮಿ ಮತ್ತಿತರರು ಇದ್ದರು.

‌ಶ್ರದ್ಧಾಂಜಲಿ: ಕಾರ್ಯಕ್ರಮ ಆರಂಭಕ್ಕೂ ಮುನ್ನ ಸೋಮವಾರ ನಿಧನರಾದ ನಾಟಕಕಾರ ಗಿರೀಶ್‌ ಕಾರ್ನಾಡ ಮತ್ತು ಗೊರವರ ಕುಣಿತ ಕಲಾವಿದ ಪುಟ್ಟಮಲ್ಲೇಗೌಡ ಅವರಿಗೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

‘ಕೇಂದ್ರದಲ್ಲಿ ಸಚಿವ ಸ್ಥಾನ: ಪ್ರಾಮಾಣಿಕ ಪ್ರಯತ್ನ’

ಆರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ, ಒಮ್ಮೆ ಕೇಂದ್ರದಲ್ಲಿ ಸಚಿವರೂ ಆಗಿರುವ ಶ್ರೀನಿವಾಸ ಪ್ರಸಾದ್‌ ಅವರಿಗೆ ಮೋದಿ ಅವರ  ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಸುರೇಶ್‌ ಕುಮಾರ್‌ ಅವರು ಪ್ರಯತ್ನಿಸಬೇಕು ಎಂದು ಶಾಸಕ ನಿರಂಜನ್‌ ಕುಮಾರ್‌ ಮನವಿ ಮಾಡಿದರು. 

ತಮ್ಮ ಭಾಷಣದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್‌ ಕುಮಾರ್‌ ಅವರು, ‘ಅನುಭವಿ ರಾಜಕಾರಣಿಯಾಗಿರುವ ಶ್ರೀನಿವಾಸ ಪ್ರಸಾದ್‌ ಅವರಿಗೆ ಸಚಿವ ಸ್ಥಾನ ಒದಗಿಸಲು ಶೇ 100ರಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 15

  Happy
 • 1

  Amused
 • 1

  Sad
 • 0

  Frustrated
 • 7

  Angry

Comments:

0 comments

Write the first review for this !