ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಜಾತಿ ಪತ್ರ ನೀಡಿ ಸಿಕ್ಕಿಬಿದ್ದ ನೌಕರರು !

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ದೂರು * ಕೆ.ಆರ್‌.ಪುರ ಠಾಣೆಯಲ್ಲಿ ಎಫ್‌ಐಆರ್
Last Updated 21 ಜನವರಿ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೂಲ ಜಾತಿಯನ್ನು ಮರೆಮಾಚಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ ಮೂವರ ವಿರುದ್ಧ ಕೆ.ಆರ್‌.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ (ಡಿಆರ್‌ಡಿಒ) ನೌಕರ ಅಲನ್ ಸಂತೋಷ್ ಬಾಬು, ಜಲಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ನೌಕರ ಎ.ಎಸ್.ಪಳನಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್‌ನ ಸ್ವಚ್ಛತಾ ಉದ್ಯೋಗಿ ರಾಣಿ ನಾರಾಯಣಸ್ವಾಮಿ ವಿರುದ್ಧನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೂರು ನೀಡಿದ್ದಾರೆ. ಅದನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮೂವರೂ ನೌಕರರು, ಕೆ.ಆರ್‌.ಪುರ ತಹಶೀಲ್ದಾರ್‌ ಕಚೇರಿಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಅದಕ್ಕಾಗಿ ಅವರು ಯಾವ ಯಾವ ದಾಖಲೆಗಳನ್ನು ಕೊಟ್ಟಿದ್ದರು? ಅವರಿಗೆ ತಹಶೀಲ್ದಾರ್ ಕಚೇರಿಯಲ್ಲಿ ಯಾರಾದರೂ ಸಹಕಾರ ನೀಡಿದ್ದಾರೆಯೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ಮಾಹಿತಿ ನೀಡಿದರು.

ಕ್ರಿಶ್ಚಿಯನ್‌ ಆಗಿರುವ ಸಂತೋಷ್:‘ವೈಟ್‌ಫೀಲ್ಡ್ ಬಳಿಯ ಹಿಮ್ಮಡಿಹಳ್ಳಿಯ ವಿನಾಯಕ ನಗರದ ನಿವಾಸಿಯಾದ ಅಲನ್ ಸಂತೋಷ್ ಬಾಬು, ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು. ಪರಿಶಿಷ್ಟ ಜಾತಿಯ ಆದಿದ್ರಾವಿಡ ಜಾತಿಯೆಂದು ಹೇಳಿ2007ರ ಮಾರ್ಚ್ 30ರಂದು ಪ್ರಮಾಣ ಪತ್ರ ಪಡೆದಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಇನ್ನೊಬ್ಬ ಆರೋಪಿ ಪಳನಿ, ಎನ್‌ಜಿಇಎಫ್ ಬಡಾವಣೆ ನಿವಾಸಿ. ಮೊದಲಿಯಾರ್ ಸಮುದಾಯಕ್ಕೆ ಸೇರಿರುವ ಅವರು, ಪರಿಶಿಷ್ಟ ಪಂಗಡದ ವಾಲ್ಮೀಕಿ ಜಾತಿ ಹೆಸರಿನಲ್ಲಿ2002ರ ಫೆಬ್ರುವರಿ 25ರಂದು ಪ್ರಮಾಣ ಪತ್ರ ಪಡೆದಿದ್ದರು’.

‘ಬಾಣಸವಾಡಿ ನಿವಾಸಿಯಾದ ರಾಣಿ ನಾರಾಯಣಸ್ವಾಮಿ,ಕ್ಷೌರಿಕ ಜಾತಿಗೆ ಸೇರಿದವರು. ಪರಿಶಿಷ್ಟ ಜಾತಿಯ ಆದಿದ್ರಾವಿಡ ಜಾತಿ ಹೆಸರಿನಲ್ಲಿ 2010ರ ಏಪ್ರಿಲ್ 15ರಂದು ಪ್ರಮಾಣ ಪತ್ರ ಪಡೆದಿದ್ದರು. ಈಗಾಗಲೇ ಮೂವರ ಜಾತಿ ಪ್ರಮಾಣ ಪತ್ರಗಳನ್ನು ತಹಶೀಲ್ದಾರ್‌ ಅವರು ರದ್ದುಪಡಿಸಿದ್ದಾರೆ’ ಎಂದು ತಿಳಿಸಿದರು.

ಅಕ್ರಮ ಪತ್ತೆ ಹಚ್ಚಿದ್ದ ಸಮಿತಿ

ಬೆಂಗಳೂರು ನಗರ ಜಿಲ್ಲೆಯಲ್ಲಿ ಕೆಲವರು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವ ಸಂಗತಿ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಗಮನಕ್ಕೆ ಬಂದಿತ್ತು. ಆ ಬಗ್ಗೆ ತನಿಖೆ ನಡೆಸಿದ್ದ ಸಮಿತಿಯ ಸದಸ್ಯ ಕಾರ್ಯದರ್ಶಿ, ಮೂವರು ನೌಕರರ ಅಕ್ರಮವನ್ನು ಪತ್ತೆ ಹಚ್ಚಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು.

ಅದನ್ನು ಆಧರಿಸಿ ತನಿಖೆ ಕೈಗೊಂಡಿದ್ದ ನಿರ್ದೇಶನಾಲಯದ ಪಿಎಸ್‌ಐಗಳಾದ ಎಚ್‌.ಬಿ. ಸುನೀಲ್ ಹಾಗೂ ಎಂ.ಎಲ್. ಗಿರೀಶ್ ನೇತೃತ್ವದ ತಂಡ, ನೌಕರರ ಅಕ್ರಮಕ್ಕೆ ಪುರಾವೆಗಳನ್ನು ಸಂಗ್ರಹಿಸಿ ಕೆ.ಆರ್.ಪುರ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT