ಬಣ್ಣದ ಹೊಂಡ ತುಳುಕಿಸಿ ಸಂಭ್ರಮಿಸಿದ ಯುವಕರು

ಭಾನುವಾರ, ಏಪ್ರಿಲ್ 21, 2019
32 °C

ಬಣ್ಣದ ಹೊಂಡ ತುಳುಕಿಸಿ ಸಂಭ್ರಮಿಸಿದ ಯುವಕರು

Published:
Updated:
Prajavani

ಲಕ್ಕುಂಡಿ (ಗದಗ ತಾ.): ಇಲ್ಲಿಯ ಮಾರುತಿ ದೇವಸ್ಥಾನದ ಜಾತ್ರೆ ಅಂಗವಾಗಿ ಬಣ್ಣದ ಹೊಂಡ ತುಳುಕಿಸುವ ಮೂಲಕ ಯುವಕರು ಭಾನುವಾರ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಇಲ್ಲಿನ ಮಾರುತಿ ದೇವಸ್ಥಾನದ ಆವರಣದಲ್ಲಿ ಭಕ್ತರು, ತುಂಬಿಸಿದ ಹೊಂಡದಲ್ಲಿ ಬಣ್ಣವನ್ನು ಬೆರಸಿ, ತುಳುಕಿಸಿದರು. ಯುವಕರು ಬಣ್ಣದ ಹೊಂಡದಲ್ಲಿ ನಾ ಮುಂದೆ, ತಾ ಮುಂದೆ ಎಂದು ಜಿಗಿದಾಡಿದರು. ಸ್ನೇಹಿತರನ್ನು ಎತ್ತಿ ಹಾಕಿಕೊಂಡು ಬಂದು ಹೊಂಡದಲ್ಲಿ ಹಾಕಿದರು. ಬಳಿಕ ಹೊಂಡದಲ್ಲಿನ ಬಣ್ಣವನ್ನು ಬಕೇಟ್ ಮೂಲಕ ಸುತ್ತಲಿನ ಜನರಿಗೆ ಎರಚಿದರು. ಮಕ್ಕಳು, ಯುವಕರು ಈ ಬಣ್ಣವನ್ನು ಪರಸ್ಪರ ಎರಚಿಕೊಂಡು ಯುಗಾದಿ ಹಬ್ಬ ಆಚರಿಸಿದರು.

ಇದಕ್ಕೂ ಮುನ್ನ ಮುತ್ತೈದೆಯರಿಂದ ಗ್ರಾಮದ ಐದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಧಾರ್ಮಿಕ ವಿಧಿ ವಿಧಾನಗಳಂತೆ ಕುಂಬಾರ ಮನೆಯಿಂದ ಐರಾಣಿ ತರಲಾಯಿತು. ಐರಾಣಿಯಿಂದ ಗಂಗಾಮಾತೆಯನ್ನು ತಂದು ಹೊಂಡದ ಸುತ್ತಲೂ ಸುರಗಿಯನ್ನು ಸುತ್ತಲಾಯಿತು. ಗಂಗಾ ಮಾತೆಯನ್ನು ನೀರನ್ನು ಹೊಂಡಕ್ಕೆ ಹಾಕಲಾಯಿತು. ನಂತರ ದೇವಸ್ಥಾನದ ಪೂಜಾರಿ ಸಂಪ್ರದಾಯದಂತೆ ಹೊಂಡವನ್ನು ಐದು ಬಾರಿ ಸುತ್ತು ಹಾಕಿದರು. ಮೇಲೆ ಕಟ್ಟಿದ ತೆಂಗಿನಕಾಯಿಯನ್ನು ಜಿಗಿದು ಹರಿದು ಹೊಂಡದಲ್ಲಿ ಹಾರಿದರು. ಬಳಿಕ ಹೊಂಡ ತುಳುಕಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬೆಳಿಗ್ಗೆ ಮಾರುತಿ ದೇವರ ಮೂರ್ತಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ವಿವಿಧ ಹೂವುಗಳಿಂದ ಅಲಂಕರಿಸಲಾಗಿದ್ದ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಹೊಸ ಬಟ್ಟೆ ಧರಿಸಿ, ಮಾರುತಿ ದೇವಸ್ಥಾನ ಸೇರಿದಂತೆ ಗ್ರಾಮದ ವೀರಭದ್ರೇಶ್ವರ, ಕಾಳಿಕಾ ದೇವಿ, ದಂಡಿನ ದುರ್ಗಾದೇವಿ, ಗ್ರಾಮ ದೇವತೆ, ಭೀಮಾಂಬಿಕಾ ದೇವಿ, ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ನೆರವೇರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !