ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ನೆಪ: ಕೊಪ್ಪಳದ 3 ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ

ಕೆಲವಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ
Last Updated 10 ಮೇ 2019, 7:21 IST
ಅಕ್ಷರ ಗಾತ್ರ

ಕೊಪ್ಪಳ: ಬೇಸಿಗೆ ಬಿಸಿಲು ಪ್ರಖರತೆ ಹೆಚ್ಚಾದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಈ ಮಧ್ಯೆ ಚುನಾವಣೆ ಕಾವು. ಇದನ್ನೇ ನೆಪ ಮಾಡಿಕೊಂಡ ಕೆಲವು ಅಧಿಕಾರಿಗಳು ನೀರು ಪೂರೈಕೆ ಮಾಡಿದ ಟ್ಯಾಂಕರ್ ಮಾಲೀಕರಿಗೆ ಬಿಲ್ ಪಾವತಿಸದೇ ಇರುವುದರಿಂದ ನೀರಿನ ಸಮಸ್ಯೆ ಬಿಗಾಡಿಯಿಸಿದೆ.

ಕೆಲವೆಡೆ ನೀರು ಇದ್ದರೂ ಸವಳು ಇರುವುದರಿಂದ ಕುಡಿಯಲು ಅಯೋಗ್ಯವಾಗಿದೆ. ನದಿ ಪಾತ್ರದ ಗ್ರಾಮಗಳಲ್ಲಿ ನೀರು ಶುದ್ಧೀಕರಿಸಿ ಜನರಿಗೆ ನೀಡಬೇಕಾಗಿದೆ. ಆದರೆ ಸತತ ವಿದ್ಯುತ್ ಸಮಸ್ಯೆಯಿಂದ ಶುದ್ಧ ಕುಡಿಯುವ ನೀರು ದೊರೆಯದೇ ಜನರು ಪರದಾಡುವಂತೆ ಆಗಿದೆ.

ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಮೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕೊಪ್ಪಳದ ಅರ್ಧ ಭಾಗ, ಯಲಬುರ್ಗಾ ಮತ್ತು ಕುಷ್ಟಗಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕುಣಿಕೇರಿ ತಾಂಡಾ, ಮಂಗಳಾಪುರ, ಭಾಗ್ಯನಗರ,ಲೇಬಗೇರಿ, ಹನುಮನಹಳ್ಳಿ ಹಾಗೂ ದೇವಲಾಪು, ಯಲಬುರ್ಗಾ ತಾಲ್ಲೂಕಿನ ಚಿಕ್ಕೇನಕೊಪ್ಪ, ಯರೇಹಂಚಿನಾಳ, ತಳಕಲ್ಲ ಭಾಗ, ಕುಷ್ಟಗಿ ತಾಲ್ಲೂಕಿನ ಹನಮಸಾಗರ ಹೋಬಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ.

ಕನಗಿರಿ ತಾಲ್ಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದರೂ ನೀರಿನ ಸಮಸ್ಯೆ ಮಾತ್ರ ಕೊನೆಗೊಂಡಿಲ್ಲ. ಗಂಗಾವತಿ ಮತ್ತು ಕಾರಟಗಿ ತಾಲ್ಲೂಕುಗಳಲ್ಲಿ ನೀರಾವರಿ ಪ್ರದೇಶವಿರುವುದರಿಂದ ಕೊಳವೆಬಾವಿ ಮತ್ತು ನದಿಯಿಂದ ನೀರು ಪಡೆದುಕೊಳ್ಳುವ ವ್ಯವಸ್ಥೆ ಇದ್ದು, ಅಂತಹ ತೊಂದರೆ ಏನೂ ಆಗಿಲ್ಲ.

ಶುದ್ಧ ಕುಡಿಯುವ ನೀರಿನದ್ದೇ ಸಮಸ್ಯೆ: ಜಿಲ್ಲೆಯಲ್ಲಿ 582 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತಿದೆ.ಶೇ 60ರಷ್ಟು ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿವೆ. ವಿದ್ಯುತ್ ಬಿಲ್ ಬಾಕಿ, ನಿರ್ವಹಣೆ ಕೊರತೆ, ನೀರು ಪೂರೈಸಲು ಆಗುತ್ತಿರುವ ತೊಂದರೆ, ತಾಂತ್ರಿಕ ಸಮಸ್ಯೆ, ಸ್ಥಳೀಯ ಗ್ರಾಮ ಪಂಚಾಯಿತಿಗಳು ಘಟಕಗಳ ವ್ಯವಸ್ಥಿತ ಕಾರ್ಯನಿರ್ವಹಣೆಗೆ ನಿರುತ್ಸಾಹ ತೋರುತ್ತಿದ್ದಾರೆ. ಇದರಿಂದ ಜನರಿಗೆ ಪ್ರೋರೈಡ್ ಮತ್ತು ಗಡಸು, ಸವಳು ನೀರೇ ಗತಿ ಆಗಿದೆ.

ರಾಜೀವ್ ಗಾಂಧಿ ಸಬ್‍ಮಿಷನ್ ಯೋಜನೆಯಡಿ ಯಲಬುರ್ಗಾ, ಕೊಪ್ಪಳ ತಾಲ್ಲೂಕುಗಳಲ್ಲಿ ನೀರಿನ ಯೋಜನೆ ಮಾಡಲಾಗಿತ್ತು. ಆದರೆ ಮುನಿರಾಬಾದ್ ಹೋಬಳಿ ಬಿಟ್ಟು ಎಲ್ಲೆಡೆ ನೀರಿನ ಸಮಸ್ಯೆ ಹಾಗೆಯೇ ಇದೆ. ನೀರು ಎಲ್ಲರಿಗೂ ಅತ್ಯಂತ ಅಗತ್ಯವಾಗಿರುವುದರಿಂದ ಖಾಸಗಿ ಅವರ ಬೋರ್‌ವೆಲ್‌ ಮೂಲಕ ನೀರು ಸಂಗ್ರಹಿಸುತ್ತಾರೆ. ಅಳವಂಡಿ ಭಾಗದ ನಾಲ್ಕೈದು ಗ್ರಾಮಸ್ಥರಿಗೆ ಕೆರೆಯ ನೀರೇ ಆಧಾರವಾಗಿದೆ. ಇದರಲ್ಲಿಯೇ ಜಾನುವಾರುಗಳೂ ಕೂಡಾ ನೀರು ಕುಡಿಯುತ್ತವೆ.

ಟ್ಯಾಂಕರ್ ಮೂಲಕ ನೀರು ಪೂರೈಕೆ: ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಯಾವ ನೀತಿ ಸಂಹಿತೆಯೂ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಡಳಿತ ಹೇಳುತ್ತಿದೆ. ತಕ್ಷಣ ಆ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿದರೂ ಅವರಿಗೆ ಸಕಾಲಕ್ಕೆ ಹಣ ಪಾವತಿ ಮಾಡದೇ ಇರುವುದರಿಂದ ನೀರಿನ ಸಮಸ್ಯೆ ಮತ್ತೆ, ಮತ್ತೆ ಉಲ್ಭಣಿಸುತ್ತದೆ.

ಶಾಶ್ವತ ಕುಡಿಯುವ ನೀರಿನ ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಪರಿಣಾಮ ಈ ಸಮಸ್ಯೆ ಆಗುತ್ತಿದೆ. ಕಳೆದ ಒಂದು ತಿಂಗಳನಲ್ಲಿಯೇ ಕುಡಿಯುವ ನೀರಿನ ಸಲುವಾಗಿ 20ಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದಿವೆ. ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಚುನಾವಣೆಯನ್ನೇ ನೆಪ ಮಾಡಿಕೊಂಡು ಕುಡಿಯುವ ನೀರಿನ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಮುಂಗಾರು ಮಳೆಯವರೆಗೂ ನೀರು ಪೂರೈಸಬೇಕಾದ ಅಗತ್ಯ ಇದೆ.

* ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಸಮಸ್ಯೆ ಇರುವ ಗ್ರಾಮಗಳಲ್ಲಿ ಪರಿಹರಿಸುವಂತೆ ಸಂಬಂಧಿಸಿದ ಪಿಡಿಒ, ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ

ಆರ್.ಎಸ್.ಪೆದ್ದಪ್ಪಯ್ಯ,ಜಿ.ಪಂ. ಸಿಇಒ

* ನನ್ನ ಕ್ಷೇತ್ರ ವ್ಯಾಪ್ತಿಯ ಲೇಬಗೇರಿವ್ಯಾಪ್ತಿಯಲ್ಲಿ ಮೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಕುರಿತು ಡಿಸಿ ಮತ್ತು ಸಿಇಒಗೆ ಮನವಿ ಸಲ್ಲಿಸಿದ್ದು, ಕೂಡಲೇ ಸಮಸ್ಯೆ ಪರಿಹರಿಸಬೇಕು

ಗವಿಸಿದ್ದಪ್ಪ ಕರಡಿ,ಜಿಪಂ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT