ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಹುತಕ್ಕೆ ಆಹ್ವಾನ ನೀಡುತ್ತಿರುವ ಗುಂಡಿ

ನಗರದ ಹಲವೆಡೆ ಬಾಯಿ ತೆರೆದುಕೊಂಡಿರುವ ಒಳಚರಂಡಿ ಮ್ಯಾನ್‌ಹೋಲ್‌
Last Updated 20 ಮೇ 2019, 11:21 IST
ಅಕ್ಷರ ಗಾತ್ರ

ರಾಯಚೂರು: ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಹಲವು ಬಡಾವಣೆಗಳಲ್ಲಿ ಒಳಚರಂಡಿಯ (ಯುಜಿಡಿ) ಮ್ಯಾನ್‌ಹೋಲ್‌ಗಳ ಮುಚ್ಚಳಿಕೆಗಳು ಧ್ವಂಸಗೊಂಡಿದ್ದು, ಬಾಯಿ ತೆರೆದುಕೊಂಡ ಮ್ಯಾನ್‌ಹೋಲ್‌ಗಳು ಅನಾಹುತಗಳಿಗೆ ಆಹ್ವಾನ ನೀಡುತ್ತಿವೆ.

ಉಪ್ಪಾರವಾಡಿ, ಬ್ರೇಸ್ತವಾರಪೇಟೆ, ಮಂಗಳವಾರ ಪೇಟೆ, ತಿಮ್ಮಾಪೂರ ಪೇಟೆ, ನೇತಾಜಿ ನಗರ, ಜಾನಿ ಮೊಹಲ್ಲಾ, ಅಶೋಕಡಿಪೋ ಬಡಾವಣೆ ಸೇರಿದಂತೆ ನಗರದಲ್ಲಿನ ಅನೇಕ ಬಡಾವಣೆಗಳಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ಗಳು ಬಾಯಿ ತೆರೆದುಕೊಂಡಿವೆ. ತಿಂಗಳುಗಳೇ ಕಳೆದರೂ ಈ ಮ್ಯಾನ್‌ಹೋಲ್‌ಗಳಿಗೆ ಮುಚ್ಚಳಿಕೆ ಅಳವಡಿಸದೇ ನಗರಸಭೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ.

ಮ್ಯಾನ್‌ಹೋಲ್‌ಗಳು ಬಾಯಿ ತೆರೆದುಕೊಂಡು ಅನಾಹುತಗಳಿಗೆ ಆಹ್ವಾನ ನೀಡುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಈ ಮ್ಯಾನ್‌ಹೋಲ್‌ಗಳಿಂದ ಹೊರಸೂಸುವ ದುರ್ವಾಸನೆಯಿಂದ ಜನನಿಬಿಡ ಪ್ರದೇಶದಲ್ಲಿನ ಜನರು ಆರೋಗ್ಯ ತೊಂದರೆ ಅನುಭವಿಸುತ್ತಿದ್ದಾರೆ. ಬಾಯಿತೆರೆದ ಮ್ಯಾನ್‌ಹೋಲ್‌ಗಳ ಆಸುಪಾಸಿನಲ್ಲಿನ ಮನೆಗಳಲ್ಲಿ ವಾಸಿಸುವ ಜನರು ಆಹಾರ ಸೇವನೆ ಮಾಡಲು ಕೂಡ ಸಮಸ್ಯೆ ಎದುರಿಸುವಂತಾಗಿದೆ.

ವಾಹನ ಸವಾರರು ವೇಗವಾಗಿ ಪ್ರಯಾಣಿಸುವಾಗ ಇಂತಹ ಮ್ಯಾನ್‌ಹೋಲ್‌ಗಳನ್ನು ಗುರುತಿಸಲಾಗದೇ ಅಪಘಾತಕ್ಕೀಡಾದ ಘಟನೆಗಳು ಪದೇ ಪದೇ ನಡೆಯುತ್ತಿವೆ. ರಾತ್ರಿ ವೇಳೆಯಲ್ಲಿ ಮಾತ್ರವಲ್ಲದೇ ಹಗಲಿನಲ್ಲೂ ನಾಗರಿಕರು ಎಚ್ಚರಿಕೆಯಿಂದೆ ಸಂಚರಿಸಬೇಕಾದ ಪರಿಸ್ಥಿತಿಯಿದೆ. ಕೆಲವೊಮ್ಮೆ ಈ ಮ್ಯಾನ್‌ಹೋಲ್‌ಗಳಲ್ಲಿ ಮಕ್ಕಳು ಕೂಡ ಬಿದ್ದು ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ.

ಬಾಯಿತೆರೆದುಕೊಂಡ ಒಳ ಚರಂಡಿಯ ಮ್ಯಾನ್‌ಹೋಲ್‌ಗಳಿಗೆ ನಗರಸಭೆ ಮುಚ್ಚಳಿಕೆ ಅಳವಡಿಸುವ ಕಾರ್ಯ ಮಾಡದಿದ್ದರಿಂದ ಇಂತಹ ಕೆಲವೊಂದು ಮ್ಯಾನ್‌ಹೋಲ್‌ಗಳಿಗೆ ಕಲ್ಲುಗಳನ್ನು ಹಾಕಿ ಜನರೇ ಮುಚ್ಚಿರುವ ಘಟನೆಗಳು ನಡೆದಿವೆ.

ಇಷ್ಟೆಲ್ಲಾ ಅವಾಂತರಗಳಿಗೆ ಈ ಮ್ಯಾನ್‌ಹೋಲ್‌ಗಳು ಕಾರಣವಾಗುತ್ತಿದ್ದರೂ, ನಗರಸಭೆಯ ಆಡಳಿತ ಮಾತ್ರ ಎಚ್ಚೆತ್ತುಕೊಂಡಿಲ್ಲ. ನಗರಸಭೆ ಚುನಾವಣೆ ನಡೆದು ಒಂಭತ್ತು ತಿಂಗಳು ನಡೆಯುತ್ತಿದ್ದರೂ ಆಡಳಿತ ಮಂಡಳಿ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಈ ನಡುವೆ ಲೋಕಸಭೆ ಚುನಾವಣೆಯ ನೀತಿ ಸಂಹಿತೆಯೂ ಜಾರಿಗೊಂಡ ಕಾರಣ ಅಧಿಕಾರಿಗಳು ಮಾಡಿದ್ದೇ ಕೆಲಸ ಎಂಬಂತಾಗಿದೆ.

ಮುಚ್ಚಳಿಕೆ ಅಳವಡಿಸಲುಕ್ರಮ– ಪೌರಾಯುಕ್ತ

ಒಳಚರಂಡಿ ಕಾಮಗಾರಿ ಇನ್ನೂ ನಡೆಯುತ್ತಿರುವುದರಿಂದ ಮ್ಯಾನ್‌ಹೋಲ್‌ಗಳಿಗೆ ಮುಚ್ಚಳಿಕೆಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲನೆ ಮಾಡಿ, ಕಾಮಗಾರಿ ನಿರ್ವಹಿಸುತ್ತಿರುವರರಿಂದ ಮುಚ್ಚಳಿಕೆ ಅಳವಡಿಸಲು ಕ್ರಮ ಜರುಗಿಸಲಾಗುತ್ತದೆ ಎಂದು ಪೌರಾಯುಕ್ತ ರಮೇಶ ನಾಯಕ ತಿಳಿಸಿದರು.

ನಗರಸಭೆಯ ವ್ಯಾಪ್ತಿಯಲ್ಲಿನ 35 ವಾರ್ಡುಗಳಲ್ಲಿ ಎರಡು ಹಂತಗಳಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಎಡಿಬಿ ಯೋಜನೆಯಡಿ 132 ಕಿ.ಮೀ. ಹಾಗೂ ಅಮೃತ ಯೋಜನೆಯಡಿ 130 ಕಿ.ಮೀ. ಕಾಮಗಾರಿ ಮಾಡಲಾಗುತ್ತಿದೆ. ಎಡಿಬಿ ಯೋಜನೆಯ ಒಳಚರಂಡಿ ಕಾಮಗಾರಿ ಈಗಾಗಲೇ ಅಂತಿಮ ಹಂತಕ್ಕೆ ತಲುಪಿದೆ. ಈ ಯೋಜನೆಯಡಿ 3,878 ಮ್ಯಾನ್‌ಹೋಲ್‌ಗಳನ್ನು ಮಾಡಲಾಗಿದೆ. ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಅಮೃತ ಯೋಜನೆಯಡಿ 95 ಕಿ.ಮೀ. ನಷ್ಟು ಒಳಚರಂಡಿ ಕಾಮಗಾರಿ ಪೂರ್ಣವಾಗಿದ್ದು, 3,300 ಮ್ಯಾನ್‌ಹೋಲ್‌ಗಳನ್ನು ಮಾಡಲಾಗಿದೆ. ಎರಡನೇ ಹಂತದ ಈ ಕಾಮಗಾರಿ ಇನ್ನೂ ಆರೇಳು ತಿಂಗಳು ನಡೆಯುವ ಸಾಧ್ಯತೆಯಿದೆ ಎಂದರು.

*‘ಒಳಚರಂಡಿಯ ಮ್ಯಾನ್‌ಹೋಲ್‌ಗಳು ಬಾಯಿತೆರೆದುಕೊಂಡಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿದ ಕ್ರಮ ಜರುಗಿಸಲಾಗುತ್ತದೆ’.

–ರಮೇಶ ನಾಯಕ,ಪೌರಾಯುಕ್ತ

ಅಂಕಿ ಅಂಶ

3,878ಎಡಿಬಿ ಯೋಜನೆಯಡಿ ನಿರ್ಮಿಸಿದ ಮ್ಯಾನ್‌ಹೋಲ್‌ಗಳು

3,300ಅಮೃತ ಯೋಜನೆಯಡಿ ನಿರ್ಮಿಸಿದ ಮ್ಯಾನ್‌ಹೋಲ್‌ಗಳು

132 ಕಿ.ಮೀ.ಎಡಿಬಿ ಯೋಜನೆಯಡಿ ಒಳಚರಂಡಿ ಕಾಮಗಾರಿ

130 ಕಿ.ಮೀ ಅಮೃತ ಯೋಜನೆಯಡಿ ಒಳಚರಂಡಿ ಕಾಮಗಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT