ಭಾನುವಾರ, ಡಿಸೆಂಬರ್ 8, 2019
21 °C
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ರ‍್ಯಾಲಿ

ಕೇಂದ್ರದ ವಿರುದ್ಧ ಎಐಟಿಯುಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕನಿಷ್ಠ ವೇತನ, ಗುತ್ತಿಗೆ ಕಾರ್ಮಿಕರ ರದ್ದತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ) ಕಾರ್ಯಕರ್ತರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಎಐಟಿಯುಸಿ ರಾಷ್ಟ್ರೀಯ ಸಮಿತಿ ಸಭೆ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಕಾರ್ಪೋರೇಟ್‌ ಕಂಪನಿಗಳ ಪರವಾಗಿರುವ ಪ್ರಧಾನಿ ಮೋದಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಎಐಟಿಯುಸಿ ಕಾರ್ಯಾಧ್ಯಕ್ಷ ಎಚ್.ಮಹದೇವನ್‌, ‘₹ 18 ಸಾವಿರ ಕನಿಷ್ಠ ವೇತನ ನಿಗದಿ ಮಾಡುವಂತೆ ಶಿಫಾರಸು ಮಾಡಿದರೂ ಯಾವುದೇ ಪ್ರಯೋಜನವಿಲ್ಲ. ತಿಂಗಳಿಗೆ ₹ 3 ಸಾವಿರ ಪಿಂಚಣಿ ನೀಡಬೇಕು. ಗುತ್ತಿಗೆ ನೌಕರರನ್ನು ರದ್ದುಪಡಿಸಿ, ಕಾಯಂ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರ ಇದ್ಯಾವುದನ್ನು ಗಮನಿಸುತ್ತಿಲ್ಲ. ಕೇವಲ ಕಾರ್ಪೋರೇಟ್‌ ವಲಯದ ಹಿತಾಸಕ್ತಿಗೆ ಕೆಲಸ ಮಾಡುತ್ತಿದೆ. ರಫೇಲ್‌ ಯುದ್ಧ ವಿಮಾನ ಖರೀದಿ ವ್ಯವಹಾರದಲ್ಲಿ ಪ್ರಧಾನಿ ಮೋದಿ ಅವರು ಅಂಬಾನಿ ಪರವಾಗಿ ಕೆಲಸ ಮಾಡಿದ್ದಾರೆ’ ಎಂದು ಟೀಕಿಸಿದರು.

‘ಅಸಂಘಟಿತ ಕಾರ್ಮಿಕರು ಸಾಮಾಜಿಕ ಭದ್ರತೆಯಿಲ್ಲದೆ ದುಡಿಯುತ್ತಿದ್ದಾರೆ. ಅವರ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿಲ್ಲ. ದೇಶದ ಆರ್ಥಿಕ ಸ್ಥಿತಿ ದಿವಾಳಿಯಾಗಲು ಮತ್ತು ಸಣ್ಣ ಕೈಗಾರಿಕೆಗಳು ನಾಶಕ್ಕೆ ನೋಟು ರದ್ದತಿ ಹಾಗೂ ಜಿಎಸ್‍ಟಿ ಜಾರಿಯೇ ಕಾರಣ ಎಂಬುದು ಬಿಜೆಪಿಗೆ ಈಗ ಅರಿವಾಗಿದೆ. ಅದಕ್ಕೆ ಆ ಬಗ್ಗೆ ಮಾತನಾಡದೆ ರಾಮ ಜಪ ಆರಂಭಿಸಿದೆ’ ಎಂದು ವ್ಯಂಗ್ಯವಾಡಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ‘ಕಾರ್ಮಿಕರ ವರ್ಗದ ಹಕ್ಕುಗಳಿಗಾಗಿ ಹೋರಾಟ ಅಗತ್ಯ. ಈಗಿರುವ ಸರ್ಕಾರಗಳು ಹೋರಾಟ, ಧರಣಿಗಳಿಗೆ ಬಗ್ಗುತ್ತಿಲ್ಲ’ ಎಂದರು.

ಜನವರಿ 8ರಂದು ಮುಷ್ಕರ

‘ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕರು ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9ರಂದು ರಾಷ್ಟ್ರೀಯ ಮುಷ್ಕರ ಹಮ್ಮಿಕೊಂಡಿವೆ. ಈ ಬಗ್ಗೆ ಮೂರು ದಿನಗಳ ಕಾಲ ನಗರದ ಸೌಟ್ಸ್ ಆಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ರೂಪುರೇಷೆ ಸಿದ್ಧಪಡಿಸಲಿದೆ’ ಎಂದು ಎಐಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್ ಜೀತ್ ಕೌರ್ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು