ಗೊಂದಲದ ಗೂಡಾದ ಬಿ.ಇಡಿ ಕೌನ್ಸೆಲಿಂಗ್

7

ಗೊಂದಲದ ಗೂಡಾದ ಬಿ.ಇಡಿ ಕೌನ್ಸೆಲಿಂಗ್

Published:
Updated:
Deccan Herald

ಬೆಂಗಳೂರು: ಸ್ಥಳದ ಅಭಾವದಿಂದ ಉಂಟಾದ ಗದ್ದಲ, ಧ್ವನಿ ವರ್ಧಕ ಪ್ರಕಟಣೆಯ ಗೊಂದಲ ಹಾಗೂ ತ್ವರಿತವಾಗಿ ನಡೆಯದ ದಾಖಲಾತಿ ಪರಿಶೀಲನೆಯಿಂದಾಗಿ ಬುಧವಾರ ನಡೆದ ಬಿ.ಇಡಿ. ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದ ಸಾವಿರಾರು ಅಭ್ಯರ್ಥಿಗಳು ಕಾದು–ಕಾದು ಹೈರಾಣಾದರು.

ರಾಜ್ಯದಲ್ಲಿನ ಬಿ.ಇಡಿ ಕಾಲೇಜುಗಳಲ್ಲಿನ ಸೀಟುಗಳ ಹಂಚಿಕೆ ಮಾಡಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಅಕ್ಟೋಬರ್‌ 9 ರಿಂದ 12ರ ವರೆಗೆ ಕೌನ್ಸೆಲಿಂಗ್‌ ನಡೆಯುತ್ತಿದೆ. ಇಲ್ಲಿಗೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಅಭ್ಯರ್ಥಿಗಳು ಬುಧವಾರ ಬಂದಿದ್ದರು. ಶಿಕ್ಷಣ ಇಲಾಖೆಯು ಕೌನ್ಸೆಲಿಂಗ್‌ ಪ್ರಕ್ರಿಯೆಗಾಗಿ ಮಾಡಿದ್ದ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾಲೇಜುಗಳ ಮಾಹಿತಿ ಮತ್ತು ಖಾಲಿ ಇರುವ ಸೀಟುಗಳ ಕುರಿತು ತಿಳಿಸಲು ಇಲ್ಲಿ ಒಂದೇ ಕಡೆ ಡಿಜಿಟಲ್‌ ಫಲಕ ಹಾಕಿದ್ದರು. ಅದನ್ನು ನೋಡಲು ಅಭ್ಯರ್ಥಿಗಳು ಮುಗಿಬಿದ್ದರು. ಇದರಿಂದ ಆಗಾಗ ಗದ್ದಲ ಉಂಟಾಗುತ್ತಿತ್ತು. 

ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳಿಂದ ಅಭ್ಯರ್ಥಿಗಳು ರಾತ್ರಿಯೆಲ್ಲ ನಿದ್ದೆಗೆಟ್ಟು ಬಂದಿದ್ದರು. ಅವರಲ್ಲಿ ತಾಯಂದಿರು, ಯುವತಿಯರು ಇದ್ದರು. ‘ಇಡೀ ರಾಜ್ಯಕ್ಕೆ ಇಂದೊಂದೇ ಕೌನ್ಸೆಲಿಂಗ್‌ ಕೇಂದ್ರ. ಇಲ್ಲಿ ಅಭ್ಯರ್ಥಿಗಳು ಕೂರಲು ಸ್ಥಳವಿಲ್ಲ. ಜಿಲ್ಲಾವಾರು ಅಥವಾ ವಿಶ್ವವಿದ್ಯಾಲಯ ಮಟ್ಟದಲ್ಲಿ ಕೌನ್ಸೆಲಿಂಗ್‌ ನಡೆಸಿದರೆ, ನಮ್ಮ ಸಮಯ, ಶ್ರಮ, ಹಣವೂ ಉಳಿಯುತ್ತಿತ್ತು’ ಎಂದು ಅಭ್ಯರ್ಥಿಯೊಬ್ಬರು ತಿಳಿಸಿದರು.

ಒಂದು ಬಾರಿಗೆ 100 ಅಭ್ಯರ್ಥಿಗಳನ್ನು ಕೌನ್ಸೆಲಿಂಗ್‌ ಕೇಂದ್ರದ ಒಳಗೆ ಕರೆಯುತ್ತಿದ್ದರು. ಅಷ್ಟು ಜನರ ದಾಖಲಾತಿ ಪರಿಶೀಲಿಸಲು ಸರಾಸರಿ ಎರಡೂವರೆ ತಾಸು ಹಿಡಿಯುತ್ತಿತ್ತು. ಇದರಿಂದಾಗಿ ಮಕ್ಕಳೊಂದಿಗೆ ಬಂದಿದ್ದ ಮಹಿಳಾ ಅಭ್ಯರ್ಥಿಗಳು ಕಾದು–ಕಾದು ಅವ್ಯವಸ್ಥೆಯನ್ನು ಶಪಿಸಿದರು.

‘ವೇಳಾಪಟ್ಟಿಯಂತೆ ನಮ್ಮ ಸರದಿ 3 ಗಂಟೆಗೆ ಬರಬೇಕಿತ್ತು. ಸಂಜೆ 7 ಗಂಟೆಯಾದರೂ ಬಂದಿಲ್ಲ. ಇಲ್ಲಿನ ಅವ್ಯವಸ್ಥೆಯಿಂದ ನಮಗ ಬಾಳ ತ್ರಾಸ ಆಯಿತು’ ಎಂದು ಹೊಸದುರ್ಗದಿಂದ ಬಂದಿದ್ದ ಅಭ್ಯರ್ಥಿಯೊಬ್ಬರು ನೋವು ಹೇಳಿಕೊಂಡರು.

‘ಗಂಟೆಗಟ್ಟಲೇ ಕಾಯುವ ಪ್ರಮೇಯ ತಪ್ಪಿಸಲು, ಹೆಚ್ಚು ಕೌಂಟರ್‌ಗಳನ್ನು ತೆರೆಯಬೇಕು’ ಎಂದು ಒತ್ತಾಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !