ನಾಲ್ಕೇ ವರ್ಷಗಳಲ್ಲಿ 500 ಜೀವಬಲಿ ಪಡೆದ ವಿದ್ಯುತ್

ಸೋಮವಾರ, ಜೂನ್ 17, 2019
28 °C
ಬೆಸ್ಕಾಂ: ಮರಣದ ಸರಣಿಗೆ ಕೊನೆ ಎಂದು?

ನಾಲ್ಕೇ ವರ್ಷಗಳಲ್ಲಿ 500 ಜೀವಬಲಿ ಪಡೆದ ವಿದ್ಯುತ್

Published:
Updated:

ಬೆಂಗಳೂರು: ಸಾರ್ವಜನಿಕರ ನಿರ್ಲಕ್ಷ್ಯ, ಅನಧಿಕೃತ ಕಟ್ಟಡಗಳ ನಿರ್ಮಾಣ ಮತ್ತು ಬೆಸ್ಕಾಂ ಲೋಪಗಳಿಂದ 4 ವರ್ಷಗಳಲ್ಲಿ 500 ಜೀವಗಳು ವಿದ್ಯುತ್‌ ಸ್ಪರ್ಶಕ್ಕೆ ಬಲಿಯಾಗಿವೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಗೆ ಸೇರಿದ ಎಂಟು ಜಿಲ್ಲೆಗಳಲ್ಲಿ ಸಂಭವಿಸಿದ 1,040 ಅವಘಡಗಳಲ್ಲಿ ಇಷ್ಟು ಜೀವಹಾನಿ ಆಗಿದೆ.

‘ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಮಕ್ಕಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ವಿದ್ಯುತ್‌ ಪ್ರವಹಿಸುವ ತಂತಿ ಸ್ಪರ್ಶವಾಗಿ ಅಥವಾ ತುಳಿದು ಸಾವನಪ್ಪುವ ಘಟನೆಗಳು ಪ್ರತಿವರ್ಷ ಮರುಕಳಿಸುತ್ತಿವೆ’ ಎಂದು ಬೆಸ್ಕಾಂನ ಅಧಿಕಾರಿಯೊಬ್ಬರು ತಿಳಿಸಿದರು.

‘ವಿದ್ಯುತ್‌ ಅವಘಡಗಳ ಕಾರಣಗಳಿಗೆ ತಾಂತ್ರಿಕ ಅಂಶಗಳ ಜೊತೆಗೆ ಜನರ ವರ್ತನೆಯೂ ಕಾರಣವಾಗುತ್ತದೆ. ವಿದ್ಯುತ್‌ ಪ್ರವಹಿಸುವ ತಂತಿಗಳು ತುಂಡಾಗಿ ನೆಲದ ಮೇಲೆ ಬೀಳುವುದು, ತಂತಿಗಳ ಜೋಡಣೆಯಲ್ಲಿ ಲೋಪ, ಟ್ರಾನ್ಸ್‌ಫಾರ್ಮರ್‌ಗಳಲ್ಲಿನ ದೋಷಗಳೇ ಹೆಚ್ಚಾಗಿ ಅವಘಡಗಳನ್ನು ಸೃಷ್ಟಿಸುತ್ತಿವೆ. ವಿದ್ಯುತ್‌ ಪ್ರವಹಿಸುವ ತಂತಿಗಳನ್ನು ಅರಿವಿಲ್ಲದೇ ಸ್ಪರ್ಶಿಸುವುದು ಕೂಡಾ ಸಾವಿಗೆ ಕಾರಣವಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಮಕ್ಕಳು ಬಲಿಯಾಗಿದ್ದೇ ಹೆಚ್ಚು’ ಎಂದು ಅವರು ಹೇಳಿದರು.

ಸುರಕ್ಷತೆಗಾಗಿ 12 ಸಾವಿರ ಸಿಬ್ಬಂದಿ: ‘ವಿದ್ಯುತ್‌ ಸರಬರಾಜಿನೊಂದಿಗೆ ಅವಘಡಗಳನ್ನು ತಪ್ಪಿಸಲು ಸಿಬ್ಬಂದಿ ವರ್ಷದ ಎಲ್ಲ ದಿನಗಳಲ್ಲೂ ಕಾರ್ಯಪ್ರವೃತ್ತರಾಗಿದ್ದಾರೆ’ ಎಂದು ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕ (ಗ್ರಾಹಕ ಸಂಪರ್ಕ) ಬಿ.ಕೃಷ್ಣಮೂರ್ತಿ ತಿಳಿಸಿದರು.

‘ಮಳೆಗಾಲದಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಹೈ ಟೆನ್ಷನ್‌ ತಂತಿಗಳಿಂದ ಸದಾ ದೂರವಿರುವಂತೆ ಜನರಿಗೆ ಮನವರಿಕೆ ಮಾಡಲು ಅಭಿಯಾನಗಳನ್ನು ಹಮ್ಮಿಕೊಂಡಿದ್ದೇವೆ. ಬಹುತೇಕ ಕಡೆ ಸೂಚನಾ ಫಲಕಗಳನ್ನು ಹಾಕಿದ್ದೇವೆ. ಕರಪತ್ರಗಳನ್ನು ಹಂಚಿದ್ದೇವೆ’ ಎಂದು ತಿಳಿಸಿದರು.

‘ತಂತಿಗಳನ್ನು ಆವರಿಸಿರುವ ಕೊಂಬೆಗಳನ್ನು ತೆರವು ಮಾಡುವ, ವಾಲಿದ ಕಂಬಗಳನ್ನು ಸರಿಪಡಿಸುವ ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಸುಸ್ಥಿತಿಗೆ ತರುವ ಕೆಲಸಗಳಿಗಾಗಿ 12 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಅವರು ತಿಳಿಸಿದರು.

*

‘ಅನಧಿಕೃತ ಕಟ್ಟಡಗಳ ವಿದ್ಯುತ್‌ ಸಂಪರ್ಕ ಕಡಿತ’

‘ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದೆ. ಅದರಂತೆ ವಿದ್ಯುತ್‌ ಜಾಲದಲ್ಲಿನ ಲೋಪಗಳನ್ನು ಸರಿಪಡಿಸುತ್ತಿದ್ದೇವೆ. ಜನರಲ್ಲಿ ಸುರಕ್ಷತೆಯ ಅರಿವು ಮೂಡಿಸುತ್ತಿದ್ದೇವೆ’ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ  ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೈ ಟೆನ್ಷನ್‌ ವಿದ್ಯುತ್‌ ಮಾರ್ಗದ ಕೆಳಗೆ ಕಟ್ಟಿರುವ ಅನಧಿಕೃತ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ. ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ರದ್ದು ಮಾಡಿ, ಕಟ್ಟಡದ ಅನಧಿಕೃತ ಭಾಗವನ್ನು ಕೆಡವಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪ್ರಾಧಿಕಾರಗಳ ಗಮನ ಸೆಳೆಯುತ್ತೇವೆ’ ಎಂದು ಅವರು ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !