ನಿರ್ವಹಣಾ ವೆಚ್ಚವೇ ‘ಹೋಲ್ಡ್‌ ಆನ್‌’!

7
ಮಧ್ಯಾಹ್ನದ ಹೊತ್ತು ಟ್ರಿಪ್‌ ಸಂಖ್ಯೆ ಕಡಿತಕ್ಕೆ ಸಲಹೆ

ನಿರ್ವಹಣಾ ವೆಚ್ಚವೇ ‘ಹೋಲ್ಡ್‌ ಆನ್‌’!

Published:
Updated:
Deccan Herald

ಬೆಂಗಳೂರು: ‘ಹೋಲ್ಡ್‌ ಆನ್‌...‘ ಇದು ಕಂಡಕ್ಟರ್‌ಗಳ ಕೂಗಲ್ಲ. ತೈಲಬೆಲೆ ಏರಿಕೆಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರತಿದಿನ ಸರಾಸರಿ ₹ 60 ಲಕ್ಷದಷ್ಟು ನಷ್ಟ ಅನುಭವಿಸುತ್ತಿದೆ. ನಷ್ಟ ನಿಭಾಯಿಸುವ ದಾರಿ ತೋಚದೆ ಸಂಸ್ಥೆಯ ಅಧಿಕಾರಿಗಳು ಅಸಹಾಯಕತೆಯಿಂದ ತೆಗೆಯುತ್ತಿರುವ ಉದ್ಗಾರವಿದು. 

‘ಟಿಕೆಟ್‌ ದರ ಏರಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸ್ವಲ್ಪವಾದರೂ ದರ ಏರಿಸಿ
ದರೆ ನಷ್ಟ ನಿಭಾಯಿಸಬಹುದು’ ಎನ್ನುತ್ತಾರೆ ಬಿಎಂಟಿಸಿ ವ್ಯವಸ್ಥಾಪಕ ವಿ.ಪೊನ್ನುರಾಜ್‌.

ದೊಡ್ಡ ಸಂಖ್ಯೆಯ ಬಸ್‌, ಸಿಬ್ಬಂದಿಯನ್ನು ನಿರ್ವಹಿಸಬೇಕಾದರೆ ಅದೇ ಪ್ರಮಾಣದ ಆದಾಯವೂ ಇರಬೇಕು. ಪ್ರತಿ ಬಸ್‌ನಿಂದ ವೆಚ್ಚ ಕಳೆದು ಕನಿಷ್ಠ ಸರಾಸರಿ ₹4 ಸಾವಿರವಾದರೂ ಉಳಿತಾಯ ಆಗಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ವೆಚ್ಚ ಸರಿದೂಗಿಸುವಷ್ಟು ಆದಾಯವೇ ಬರುತ್ತಿಲ್ಲ ಎನ್ನುವುದು ಸಂಸ್ಥೆಯ ಅಧಿಕಾರಿಗಳ ವಿವರಣೆ.

ಬಿಎಂಟಿಸಿ ಅಧಿಕಾರಿಗಳ ಈ ವಾದವನ್ನು ಸಾರಿಗೆ ತಜ್ಞರು ಒಪ್ಪುವುದಿಲ್ಲ. ‘ಬೆಳಿಗ್ಗೆ ಮತ್ತು ಸಂಜೆ ವೇಳೆ ಪೀಕ್‌ ಅವರ್‌ನಲ್ಲಿ (ಪ್ರಯಾಣ ದಟ್ಟಣೆ) ಸಂಚರಿಸುವ ಬಸ್‌ಗಳು ಯಥೇಚ್ಛ ಆದಾಯ ತರುತ್ತವೆ. ಅದೇ ಬಸ್‌ಗಳು ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಅರ್ಧಕ್ಕರ್ಧ ಖಾಲಿಯಾಗಿ ಸಂಚರಿಸುತ್ತವೆ. ಖಾಲಿ ಬಸ್‌ ಓಡಿಸಿದರೆ ಆದಾಯ ನಿರೀಕ್ಷಿಸುವುದು ಹೇಗೆ? ಬೆಳಿಗ್ಗೆ ಗಳಿಸಿದ್ದನ್ನು ಖಾಲಿ ಬಸ್‌ ಸಂಚಾರಕ್ಕೆ ವಿನಿಯೋಗಿಸಬೇಕಾಗುತ್ತದೆ’ ಎಂದು ಅವರು ವಿಶ್ಲೇಷಿಸುತ್ತಾರೆ.

ಚಾಲಕರೂ ಈ ಮಾತನ್ನು ಒಪ್ಪುತ್ತಾರೆ. ‘ದಟ್ಟಣೆ ಇಲ್ಲದ ವೇಳೆಯಲ್ಲಿ ಸಾಮಾನ್ಯ ಮಾರ್ಗಗಳ ಸಂಚಾರ ಕಡಿತಗೊಳಿಸಬಹುದು. ಆದಾಯ ಬರದಿದ್ದರೂ ವಿನಾಕಾರಣ ಖರ್ಚಾಗುವುದು ತಪ್ಪುತ್ತದೆ. ಖಾಲಿ ಬಸ್‌ಗಳು ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಲೂ ಕಾರಣವಾಗುತ್ತವೆ. ಹಳೇ ವಿನ್ಯಾಸದ ದೊಡ್ಡ ಬಸ್‌ಗಳು ಮೈಲೇಜ್‌ ಕೊಡುವುದೂ ಕಡಿಮೆ. ನಿರ್ವಹಣಾ ವೆಚ್ಚವೂ ಹೆಚ್ಚು’ ಎಂದು ವಿವರಿಸುತ್ತಾರೆ.

‘ಸುಮಾರು 60 ಜನ ಸಂಚರಿಸಬಹುದಾದ ಬಸ್‌ನಲ್ಲಿ ಹತ್ತಾರು ಜನರಷ್ಟೇ ಪ್ರಯಾಣಿಸಿದರೆ ಇಂಧನ ಖರ್ಚನ್ನು ನಿಗಮವೇ ಭರಿಸಬೇಕಾಗುತ್ತದೆ. ಆದ್ದರಿಂದ ದಟ್ಟಣೆ ಇಲ್ಲದ ವೇಳೆ ಈಗ ಹೊಸದಾಗಿ ತಂದಿರುವ ಕಾಂಪ್ಯಾಕ್ಟ್‌ (ಸಣ್ಣ ಗಾತ್ರ) ಬಸ್‌ಗಳನ್ನು ಓಡಿಸಬಹುದು. ಹೊಸ ಮಾದರಿಯ ಬಸ್‌ಗಳು ಒಳ್ಳೆಯ ಇಂಧನ ಕ್ಷಮತೆಯನ್ನೂ ಹೊಂದಿವೆ. ನಿರ್ವಹಣಾ ವೆಚ್ಚವೂ ಕಡಿಮೆ’ ಎಂದು ಹೇಳುತ್ತಾರೆ ನಗರ ಯೋಜನಾ ತಜ್ಞ ರವಿಚಂದರ್‌.

ರವಿಚಂದರ್‌ ಪ್ರಕಾರ, ‘ಬಿಎಂಟಿಸಿ ತನ್ನ ಸಂಚಾರ ಮಾರ್ಗವನ್ನು ತರ್ಕಬದ್ಧಗೊಳಿಸಿ ಬಸ್‌ ಓಡಿಸಬೇಕು. ಉತ್ತಮ ಆದಾಯ ತರುವ ಮಾರ್ಗಗಳು, ಆದಾಯ ಕಡಿಮೆಯಿರುವ ಮಾರ್ಗಗಳು, ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಳ್ಳಬೇಕು. ಸೇವೆ ಉತ್ತಮಗೊಳಿಸಿದಲ್ಲಿ ಸಹಜವಾಗಿ ಪ್ರಯಾಣಿಕರನ್ನು ಸೆಳೆಯಬಹುದು’ ಎನ್ನುತ್ತಾರೆ.

‘ಟಿಕೆಟ್‌ ದರ ಏರಿಕೆಯೊಂದೇ ಪರಿಹಾರ ಅಲ್ಲ. ಹಾಗೆ ಮಾಡಿದಲ್ಲಿ ಪ್ರಯಾಣಿಕರು ಖಾಸಗಿ ವಾಹನ ಬಳಸುವ ಸಾಧ್ಯತೆ ಇರುತ್ತದೆ. ಸರ್ಕಾರವು ಬಿಎಂಟಿಸಿಗೆ ಸಹಾಯಧನ ನೀಡಬೇಕು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಬೇಕು’ ಎಂದು ಅವರು ಸಲಹೆ ಮಾಡುತ್ತಾರೆ. 

ಮೆಟ್ರೊ ರೈಲು ಬಂದ ಮೇಲೆ ಬಸ್‌ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ‘ಪ್ರಯಾಣಿಕರ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ ನಿಜ. ಆದರೆ, ಬಿಎಂಟಿಸಿ ಸೇವೆಯನ್ನು ಇನ್ನಷ್ಟು ಸುಧಾರಿಸಿ ಉಪನಗರ ಪ್ರದೇಶಗಳಿಗೆ ವಿಸ್ತರಿಸಬೇಕು. ಕೊನೆಯ ಭಾಗದ ಪ್ರದೇಶಗಳಿಗೆ ದಟ್ಟಣೆಯ ಅವಧಿಯಲ್ಲಿ ಬಸ್‌ ಬಿಡಬೇಕು. ಹೀಗಾದಾಗ ಆದಾಯ ಗಳಿಕೆಯಲ್ಲಿ ಹಂತಹಂತವಾಗಿ ಸುಧಾರಣೆ ಸಾಧ್ಯ’ ಎನ್ನುತ್ತಾರೆ ಸಂಸ್ಥೆಯ ಸಿಬ್ಬಂದಿ.

‘ಹೊರವಲಯದಿಂದ ನಗರ ಸಾರಿಗೆ ಬಳಸಿ’

ನಗರಕ್ಕೆ ಪ್ರವೇಶಿಸುವ ಎಲ್ಲ ಬಸ್‌ಗಳನ್ನು (ಖಾಸಗಿ ಬಸ್‌ಗಳೂ ಸೇರಿದಂತೆ) ಹೊರವಲಯದಲ್ಲೇ ನಿಲ್ಲಿಸಬೇಕು. ಪ್ರಯಾಣಿಕರು ಅಲ್ಲಿಂದ ಮುಂದೆ ನಗರ ಸಾರಿಗೆ ವ್ಯವಸ್ಥೆ ಮೂಲಕ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಬೇಕು. ಆಗ ಹೊರಭಾಗದ ಬಸ್‌ಗಳು ಬಂದು ಸಂಚಾರ ದಟ್ಟಣೆ ಉಂಟಾಗುವುದು ತಪ್ಪುತ್ತದೆ. ಬಿಎಂಟಿಸಿ ಆದಾಯವೂ ಹೆಚ್ಚುತ್ತದೆ ಎನ್ನುತ್ತಾರೆ ಬಿಎಂಟಿಸಿ ವ್ಯವಸ್ಥಾಪಕ ವಿ.ಪೊನ್ನುರಾಜ್‌.

ಸರ್ಕಾರದೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದೇವೆ. ತಮಿಳುನಾಡಿನ ಪಟ್ಟಣವೊಂದರಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿದೆ. ಅದನ್ನೇ ಇಲ್ಲಿಯೂ ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದೇವೆ ಎಂದು ಅವರು ವಿವರಿಸುತ್ತಾರೆ.

 

 

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !